Advertisement

ಕುಂದೇಶ್ವರ- ಪೀಂದ್ರಬೆಟ್ಟು ಸಂಪರ್ಕ ರಸ್ತೆ: ಹೊಂಡಗುಂಡಿ

11:18 PM Sep 20, 2019 | Team Udayavani |

ವಿಶೇಷ ವರದಿ –ಅಜೆಕಾರು: ಹಿರ್ಗಾನ ಗ್ರಾ.ಪಂ. ವ್ಯಾಪ್ತಿಯ ಕುಂದೇಶ್ವರ-ಪೀಂದ್ರಬೆಟ್ಟು ಸಂಪರ್ಕ ರಸ್ತೆ ಡಾಮರು ಕಾಣದೆ ಹೊಂಡಗಳಿಂದ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಸುಮಾರು 20 ವರ್ಷಗಳ ಹಿಂದೆ ಸ್ಥಳೀಯರು ಸಂಪರ್ಕ ರಸ್ತೆಗಾಗಿ ಖಾಸಗಿ ಜಾಗ ಬಿಟ್ಟುಕೊಟ್ಟಾಗ ಕೇವಲ ಕಚ್ಚಾರಸ್ತೆ ನಿರ್ಮಾಣ ಮಾಡಲಾಗಿದೆಯೇ ಹೊರತು ಡಾಮರು ಮಾತ್ರ ಆಗಿಲ್ಲ. ಮೂರೂರು ಪೇಟೆಯ ಮುಖ್ಯ ರಸ್ತೆಯಿಂದ ಕುಂದೇಶ್ವರದವರೆಗೆ ಸುಮಾರು 2 ಕಿ.ಮೀ. ಭಾಗ ಡಾಮರುಗೊಂಡಿದ್ದು ಅನಂತರ ಕುಂದೇಶ್ವರದಿಂದ ಪೀಂದ್ರಬೆಟ್ಟುವರೆಗಿನ ಎರಡು ಕಿ.ಮೀ. ಮಣ್ಣಿನ ರಸ್ತೆ ಹಾಗೆಯೇ ಉಳಿದಿದೆ.

Advertisement

50 ಮನೆಗಳಿಗೆ ಅನುಕೂಲ
ಈ ಪರಿಸರದಲ್ಲಿ ಸುಮಾರು 50ರಷ್ಟು ಮನೆಗಳವರು ಈ ರಸ್ತೆಯನ್ನೇ ಅವಲಂಬಿಸಿದ್ದಾರೆ. ಪಾದೆಮಾರು, ಪೀಂದ್ರಬೆಟ್ಟು ಪರಿಸರದವರು ದಿನನಿತ್ಯದ ವ್ಯವಹಾರಕ್ಕಾಗಿ ಮೂರೂರು ಪೇಟೆಯನ್ನೇ ಅವಲಂಬಿಸಿದ್ದು ಈ ದಾರಿಯನ್ನೇ ಬಳಸುತ್ತಿದ್ದಾರೆ. ಈ ರಸ್ತೆಯಲ್ಲಿ ಸಂಚರಿಸಲು ರಿಕ್ಷಾ ಚಾಲಕರೂ ಹಿಂದೇಟು ಹಾಕುತ್ತಾರೆ. ಅನಾರೋಗ್ಯ ಪೀಡಿತರು ಹಿರ್ಗಾನ ಪ್ರಾಥಮಿಕ ಆರೋಗ್ಯ ಕೇಂದ್ರ ಸಂಪರ್ಕಿಸಲು ಸಮಸ್ಯೆಯಾಗಿದೆ.

ತಾತ್ಕಾಲಿಕ ತೇಪೆ
ಹಿರ್ಗಾನ ಪಂಚಾಯತ್‌ ತನ್ನ ಸೀಮಿತ ಅನುದಾನದಲ್ಲಿ ಪ್ರತೀ ವರ್ಷ ಬೃಹತ್‌ ಹೊಂಡಗಳಿಗೆ ಕ್ರಷರ್‌ ಹುಡಿ ತುಂಬಿಸಿ ಸ್ವಲ್ಪ ಮಟ್ಟಿಗೆ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿತ್ತು. ಆದರೆ ಮಳೆ ಬಂದ ಸಂದರ್ಭ ಇದು ಮತ್ತೆ ಸಂಪೂರ್ಣ ಹಾಳಾಗಿ ಪಾದಚಾರಿಗಳಿಗೆ ಕೆಸರಿನ ಸಿಂಚನವಾಗುತ್ತದೆ.

ಕೂಡು ರಸ್ತೆ
ಈ ರಸ್ತೆ ಅಭಿವೃದ್ಧಿಗೊಳಿಸಿ ಚಿಕ್ಕಲ್‌ಬೆಟ್ಟುವಿಗೆ ಸಂಪರ್ಕ ಕಲ್ಪಿಸಲು ಕೂಡುರಸ್ತೆ ನಿರ್ಮಾಣ ಮಾಡಿದಲ್ಲಿ ಪೀಂದ್ರಬೆಟ್ಟು, ಚಿಕ್ಕಲ್‌ಬೆಟ್ಟು, ಯರ್ಲಪಾಡಿ, ಜಾರ್ಕಳ ಭಾಗದ ಸುಮಾರು 300ಕ್ಕೂ ಅಧಿಕ ಮನೆಗಳಿಗೆ ಅನುಕೂಲವಾಗಲಿದೆ. ರಸ್ತೆ ದುರಸ್ತಿಗೆ ಸಂಬಂಧಪಟ್ಟ ಇಲಾಖಾಧಿಕಾರಿಗಳು, ಜನಪ್ರತಿನಿಧಿಗಳಿಗೆ ಮನವಿ ನೀಡಿದರೂ ಇದುವರೆಗೂ ಯಾವುದೇ ಪ್ರಯೋಜನ ವಾಗಿಲ್ಲ ಎಂಬುದು ಗ್ರಾಮಸ್ಥರ ಆರೋಪ.

ತುರ್ತು ಕ್ರಮ ಕೈಗೊಳ್ಳಿ
ಇದು ಈ ಭಾಗದ ಏಕೈಕ ಸಂಪರ್ಕ ರಸ್ತೆಯಾಗಿದ್ದು ದಶಕಗಳಿಂದ ರಸ್ತೆ ಡಾಮರಿಗೆ ಮನವಿ ಮಾಡುತ್ತ ಬಂದಿದ್ದರೂ ಜನಪ್ರತಿನಿಧಿಗಳು, ಇಲಾಖಾಧಿಕಾರಿಗಳು ಸ್ಥಳೀಯರ ಸಮಸ್ಯೆಗೆ ಸ್ಪಂದಿಸಿಲ್ಲ. ಇನ್ನಾದರೂ ತುರ್ತು ಕ್ರಮ ಕೈಗೊಂಡು ರಸ್ತೆ ಅಭಿವೃದ್ಧಿಗೊಳ್ಳಲಿ.
-ಮಹಾವೀರ್‌ ಜೈನ್‌, ಸ್ಥಳೀಯರು

Advertisement

ಪ್ರಸ್ತಾವನೆ ಸಲ್ಲಿಕೆ
ಪೀಂದ್ರಬೆಟ್ಟು-ಕುಂದೇಶ್ವರ ರಸ್ತೆ ಅಭಿವೃದ್ಧಿಪಡಿಸುವಂತೆ ಪಂಚಾಯತ್‌ನಿಂದ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಅತ್ಯಂತ ಅಗತ್ಯದ ರಸ್ತೆ ಇದಾಗಿದ್ದು ಪಂಚಾಯತ್‌ನ ಸೀಮಿತ ಅನುದಾನದಲ್ಲಿ ಅಭಿವೃದ್ಧಿಪಡಿಸುವುದು ಅಸಾಧ್ಯ. ಈ ನಿಟ್ಟಿನಲ್ಲಿ ಜಿ.ಪಂ. ಸದಸ್ಯರು ಹಾಗೂ ಶಾಸಕರ ಗಮನಕ್ಕೆ ಮತ್ತೆ ತರಲಾಗುವುದು.
-ಸಂತೋಷ್‌ ಕುಮಾರ್‌ ಶೆಟ್ಟಿ,ಅಧ್ಯಕ್ಷರು, ಹಿರ್ಗಾನ ಗ್ರಾ.ಪಂ.

Advertisement

Udayavani is now on Telegram. Click here to join our channel and stay updated with the latest news.

Next