Advertisement

ಕುಂದರಗಿ ಕುವರಿಗೆ ಪೈಲೆಟ್‌ ಆಗುವ ಕನಸು!

02:00 PM Oct 05, 2018 | |

ಬಾಗಲಕೋಟೆ: ಜಿಲ್ಲೆಯ ಗ್ರಾಮೀಣ ಪ್ರತಿಭೆಯೊಂದು ದೂರದ ಆಸ್ಟ್ರೇಲಿಯಾದಲ್ಲಿ ಪೈಲೆಟ್‌ ತರಬೇತಿ ಪಡೆಯುತ್ತಿದ್ದು, ಇನ್ನೇನು ಎರಡು ವರ್ಷ ಕಳೆದರೆ ಆಸ್ಟ್ರೇಲಿಯಾದ ಆಗಸದಲ್ಲಿ ಈಕೆ ಬಾಗಲಕೋಟೆ ಜಿಲ್ಲೆಯ ಕೀರ್ತಿ ಹೆಚ್ಚಿಸಲಿದ್ದಾಳೆ.

Advertisement

ಹೌದು. ಸದ್ಯ ಆಸ್ಟ್ರೇಲಿಯಾದ ಅಡಿಲೇಡ್‌ ನಗರದ ಬ್ರಾಯಿಟನ್‌ ಸೆಕೆಂಡರಿ ಸ್ಕೂಲ್‌ನಲ್ಲಿ 9ನೇ ತರಗತಿ ಓದುತ್ತಿರುವ ಬೀಳಗಿ ತಾಲೂಕಿನ ಕುಂದರಗಿ ಗ್ರಾಮದ ಪ್ರೀತಿಕಾ ವೆಂಕಟೇಶ ಗಾಣಗೇರ(14) ಎಂಬ ಕುವರಿಯ ಪೈಲೆಟ್‌ ಆಗುವ ಕನಸು ನನಸು ಮಾಡಲು ಆಸ್ಟ್ರೇಲಿಯಾ ಸರ್ಕಾರ ಸಹಕಾರ ನೀಡಿದೆ. 

ಆಕೆಯ ಜಾಣ್ಮೆ, ಚಾಣಾಕ್ಷತನಕ್ಕೆ ಕೈ ಜೋಡಿಸಿದೆ. ಸರ್ಕಾರದ ಶಿಷ್ಯವೇತನದಡಿ ಆಸ್ಟ್ರೇಲಿಯನ್‌ ಏರ್‌ ಲೀಗ್‌ನ ಪ್ರಾಮರಿ
ಸ್ಕೂಲ್‌ ಆಫ್‌ ಎಲಿಯೇಶನ್‌ನಲ್ಲಿ ಆರು ವರ್ಷಗಳಿಂದ ಪೈಲೆಟ್‌ ತರಬೇತಿ ಪಡೆಯುತ್ತಿದ್ದಾಳೆ.

8 ವರ್ಷದವಳಿದ್ದಾಗಲೇ ತರಬೇತಿ: ಪ್ರೀತಿಕಾ ಪೈಲೆಟ್‌ ಆಗುವ ಕನಸು ಕಂಡಿದ್ದು ಅವರ ಸಹೋದರ ಮಣಿಸಾಗರರಿಂದ. ತನಗೆ 8 ವರ್ಷ ಇರುವಾಗಲೇ ಪೈಲೆಟ್‌ ತರಬೇತಿ ಪಡೆಯುತ್ತಿದ್ದು, ಆಸ್ಟ್ರೇಲಿಯಾ ಮಾಧ್ಯಮಗಳು ಇದನ್ನು ದೊಡ್ಡ ಸುದ್ದಿಯನ್ನೂ ಮಾಡಿವೆ.

ತಂದೆ-ತಾಯಿ ಉದ್ಯೋಗದಲ್ಲಿ: ಪ್ರೀತಿಕಾ ತಂದೆ ವೆಂಕಟೇಶ ಗಾಣಿಗೇರ ಎನ್‌ಟಿಟಿಎಫ್‌ ಎಂಜಿನಿಯರ್‌  ಆಗಿದ್ದು, ಆಸ್ಟ್ರೇಲಿಯಾದಲ್ಲಿ ಉದ್ಯೋಗಿಯಾಗಿದ್ದಾರೆ. ತಾಯಿ ಬಾಗಲಕೋಟೆಯ ಅರ್ಚನಾ ಸಜ್ಜನ (ಗಾಣಗೇರ) ಕೂಡ ಅಲ್ಲಿಯೇ ಉದ್ಯೋಗಿಯಾಗಿದ್ದಾರೆ. ಮಣಿಸಾಗರ ಎಂಬ ಪುತ್ರ ಬಿಇ ಎಲೆಕ್ಟ್ರಾನಿಕ್ಸ್‌ ವ್ಯಾಸಂಗ ಮಾಡುತ್ತಿದ್ದು, ಪುತ್ರಿ ಪ್ರೀತಿಕಾ 9ನೇ ತರಗತಿ ಜತೆಗೆ ಪೈಲೆಟ್‌ ತರಬೇತಿ ಪಡೆಯುತ್ತಿದ್ದಾಳೆ. ಆಸ್ಟ್ರೇಲಿಯಾದಲ್ಲಿ ಪೈಲೆಟ್‌ ಆಗಲು 16 ವರ್ಷ ಕಡ್ಡಾಯ ಮಾಡಿದೆ.

Advertisement

ಭಾರತದಲ್ಲಿ ಸೇವೆ ಸಲ್ಲಿಸುವ ಆಸೆ: ಹಲವರು ಭಾರತದಲ್ಲಿ ಶಿಕ್ಷಣ ಕಲಿತು, ವಿದೇಶದಲ್ಲಿ ಕೆಲಸ ಮಾಡುತ್ತಾರೆ. ಆದರೆ, ವಿದೇಶದಲ್ಲಿ ಕಲಿತು ಭಾರತದಲ್ಲಿ ಸೇವೆ ಸಲ್ಲಿಸಬೇಕೆಂಬ ಆಸೆ ಇದೆ. ತನ್ನ ವ್ಯಾಸಂಗ ಮತ್ತು ಪೈಲೆಟ್‌ ತರಬೇತಿ ಮುಗಿದ ಬಳಿಕ ಭಾರತಕ್ಕೆ ಬಂದು ಇಲ್ಲಿನ ಹೆಣ್ಣು ಮಕ್ಕಳಿಗೆ ಪೈಲೆಟ್‌ ತರಬೇತಿ ಕೊಡುವ ಆಸೆ ಹೊಂದಿದ್ದಾಳೆ. ಮಗಳ ಆಸೆಗೆ ತಾಯಿ ಅರ್ಚನಾ ಬೆಂಗಾವಲಾಗಿ ನಿಂತಿದ್ದಾರೆ.

ದೊಡ್ಡ ದೊಡ್ಡ ನಗರಗಳಲ್ಲಿರುವವರು, ಶ್ರೀಮಂತರು ಮಾತ್ರ ಪೈಲೆಟ್‌ ಆಗುತ್ತಾರೆ ಎಂಬ ಮಾತು ಸುಳ್ಳು. ಉತ್ತಮ ಗುರಿ, ಸದೃಢ ಮನಸ್ಸಿನೊಂದಿಗೆ ಕಲಿತರೆ ಏನು ಬೇಕಾದರೂ ಸಾಧನೆ ಮಾಡಬಹುದು ಎನ್ನುತ್ತಾಳೆ ಪ್ರೀತಿಕಾ. 

ನಾನು ಪೈಲೆಟ್‌ ಆಗಬೇಕೆಂಬ ಆಸೆ ಬಂದಿದ್ದು 8ನೇ ವಯಸ್ಸಿಗೆ. ಆಗ ತಾಯಿಗೆ ಏರ್ಪಾಡು ಮಾಡಿ ದರು.
ಶಿಷ್ಯವೇತನದಲ್ಲೇ ತರಬೇತಿ ಪಡೆ ಯುತ್ತಿದ್ದೇನೆ. ತರಬೇತಿ ಬಳಿಕ ಭಾರತದಲ್ಲಿ ಹೆಣ್ಣು ಮಕ್ಕಳಿಗೆ ಪೈಲೆಟ್‌ ತರಬೇತಿ ಕೊಡಬೇಕೆಂಬ ಗುರಿ ಇದೆ. ಭಾರತೀಯ ಮಹಿಳೆಯರೂ ವಿಶ್ವ ಮಟ್ಟದಲ್ಲಿ ಸಾಧನೆ ಮಾಡಬೇಕು ಎಂಬುದು ನನ್ನ ಆಸೆ.
 ಪ್ರೀತಿಕಾ ಗಾಣಗೇರ

ಎಷ್ಟೋ ಜನರು ನಮ್ಮಲ್ಲಿ ಕಲಿತು, ವಿದೇಶದಲ್ಲಿ ಉದ್ಯೋಗ ಮಾಡುತ್ತಾರೆ. ಆದರೆ ಪ್ರೀತಿಕಾ ವಿದೇಶದಲ್ಲಿ ಶಿಕ್ಷಣ, ತರಬೇತಿ ಪಡೆದು ಭಾರತದಲ್ಲಿ ಪೈಲೆಟ್‌ ತರಬೇತಿ ಕೊಡುವ ಗುರಿ ಹಾಕಿಕೊಂಡಿದ್ದು ಹೆಮ್ಮೆಯ ವಿಷಯ. 
 ಡ್ಯಾನಿಯಲ್‌ ನ್ಯೂಟನ್‌, ಸಾಮಾಜಿಕ ಕಾರ್ಯಕರ್ತ

„ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next