Advertisement

Kundapura: 2 ದಶಕಗಳಿಂದ ಈಡೇರದ ಮೇಲ್ದರ್ಜೆ ಬೇಡಿಕೆ

01:05 PM Sep 10, 2024 | Team Udayavani |

ಕುಂದಾಪುರ: ಉಡುಪಿ ರೈಲು ನಿಲ್ದಾಣ ಬಿಟ್ಟರೆ ಜಿಲ್ಲೆಯ ಪ್ರಮುಖ ರೈಲು ನಿಲ್ದಾಣವಾದ ಕುಂದಾಪುರದ ಮೂಡ್ಲಕಟ್ಟೆ ರೈಲು ನಿಲ್ದಾಣವು ಕಳೆದ 10 ವರ್ಷಗಳಿಂದ ಯಾವುದೇ ಅಭಿವೃದ್ಧಿ ಕಾಣದೇ, ನಿರ್ಲಕ್ಷ್ಯ ವಹಿಸಲಾಗಿದೆ. 2 ದಶಕಗಳಿಂದ ಮೇಲ್ದರ್ಜೆ ಬೇಡಿಕೆಯಿದ್ದರೂ, ಅದಕ್ಕೆ ಮನ್ನಣೆಯೇ ಸಿಕ್ಕಿಲ್ಲ.

Advertisement

ಪ್ರತೀ ದಿನ ಎರಡು ಲಕ್ಷ ರೂ.ಗೂ ಹೆಚ್ಚು ಆದಾಯವಿರುವ, ಕೊಲ್ಲೂರು ದೇಗುಲಕ್ಕೆ ಅತ್ಯಂತ ವೇಗವಾಗಿ ತಲುಪಿಸಬಲ್ಲ ನಿಲ್ದಾಣ ಇದಾಗಿದೆ. ಹಲವು ಧಾರ್ಮಿಕ ಹಾಗೂ ಪ್ರವಾಸಿ ತಾಣಗಳಿಗೂ ಈ ನಿಲ್ದಾಣ ಹತ್ತಿರವಿದೆ. 10 ವರ್ಷಗಳಲ್ಲಿ ಕಾರವಾರ ವಿಭಾಗೀಯ ಮಟ್ಟದಲ್ಲಿ ನಡೆದ ಅಭಿವೃದ್ಧಿ ಬಿಟ್ಟರೆ, ಕೊಂಕಣ ನಿಗಮದ ಕೇಂದ್ರ ಕಚೇರಿಯ ಬಜೆಟ್‌ ಮೂಲದಿಂದ ಯಾವುದೇ ಅಭಿವೃದ್ಧಿಯಾಗಿಲ್ಲ.

ನೆಲಹಾಸು ಏರುತಗ್ಗು…
1992ರ ಆಸುಪಾಸಿನಲ್ಲಿ ನಿರ್ಮಾಣಗೊಂಡ ಈ ನಿಲ್ದಾಣದ ನೆಲ ಹಾಸು ಅವೈಜ್ಞಾನಿಕವಾಗಿದ್ದು, ಒಂದೆಡೆ ಎತ್ತರ, ಇನ್ನೊಂದೆಡೆ ತಗ್ಗು ಇದ್ದು, ಇಲ್ಲಿ ವೀಲ್‌ ಚೇರ್‌, ಗೂಡ್ಸ್‌ ಪೊರ್ಟರ್‌ ಸಂಚರಿಸುವುದು ತುಂಬಾ ಕಷ್ಟ. ಮಾರ್ಬಲ್‌ ನೆಲ ಹಾಸು ಅಳವಡಿಸಿದರೆ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ರೈಲು ಬರುವ ಗಡಿಬಿಡಿಯಲ್ಲಿ ಓಡಿ ಹೋಗಿ ರೈಲು ಹತ್ತುವುದು ಅಪಾಯಕಾರಿ. ಮಳೆಗಾಲದಲ್ಲಂತೂ ಅಲ್ಲಲ್ಲಿ ನೆಲದ ಮೇಲೆಯೇ ನೀರು ನಿಲ್ಲುತ್ತಿದೆ. ವಿಶ್ರಾಂತಿ ಕೊಠಡಿಯಲ್ಲಿ ಶೌಚಾಲಯ ಬಿಟ್ಟರೆ, ಬರುವಂತಹ ಪ್ರಯಾಣಿಕರಿಗೆ ಇಲ್ಲಿ ಬೇರೆ ಯಾವುದೇ ಶೌಚಾಲಯ ವ್ಯವಸ್ಥೆಯೇ ಇಲ್ಲ.

ಸಂಪೂರ್ಣ ಮೇಲ್ಛಾವಣಿ ಅಗತ್ಯ
ಜೋರು ಮಳೆ ಬಂದರಂತೂ ನಿಲ್ದಾಣದೊಳಗೆ ನೀರು ಜೋರಾಗಿ ರಾಚುತ್ತಿದೆ. ಹಳಿ ದಾಟಲು ಇರುವ ಮೇಲ್ಸೆತುವೆಗೆ ಮೇಲಿನಿಂದ ಚಾವಣಿಯೇ ಇಲ್ಲ. ಮಳೆ ಬಂದರೆ ಮೇಲ್ಸೆತುವೆಯಲ್ಲಿ ನಡೆದುಕೊಂಡು ಹೋಗಲು ಸಾಧ್ಯವಿಲ್ಲ. ಹೆಚ್ಚು ಮಳೆ ಪ್ರದೇಶವಾಗಿರುವುದರಿಂದ ಎರಡೂ ಪ್ಲಾಟ್‌ಫಾರಂ ಸಂಪೂರ್ಣ ಮುಚ್ಚುವ ಮೇಲ್ಛಾವಣಿ ಅಗತ್ಯವಿದೆ. ಬೇಸಗೆಯಲ್ಲಿ ಸರಿಯಾದ ನೀರಿನ ಪೂರೈಕೆಯೂ ಸರಿಯಿಲ್ಲ. ಇನ್ನು ಸಂಪರ್ಕ ರಸ್ತೆಗೆ ಇನ್ನಷ್ಟು ಬೆಳಕಿನ ವ್ಯವಸ್ಥೆ ಬೇಕಿದೆ.

ಸಮಿತಿಯ ಪ್ರಯತ್ನ
ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ ಸತತ ಹೋರಾಟದ ಫಲವಾಗಿ ಪಂಚಗಂಗಾ ರೈಲು, ಮೈಸೂರು ರೈಲು, ವಿಶೇಷ ರೈಲುಗಳ ಆರಂಭವಾಗಿದೆ. ಇವುಗಳ ಜತೆಗೆ ದಾನಿಗಳ ಮೂಲಕ ನಿಲ್ದಾಣಕ್ಕೆ ಟಿಕೆಟ್‌ ಬುಕ್ಕಿಂಗ್‌, ಬೆಳಕು, ಶೆಲ್ಟರ್‌, ಡಿಜಿಟಲ್‌ ಮಾಹಿತಿ ಟಿವಿ, ಸೆಲ್ಫಿ ಪಾಯಂಟ್‌ ಇತ್ಯಾದಿ ಸೌಲಭ್ಯಗಳು ಸಿಕ್ಕಿವೆ. ಈಗ ಹಂಗಳೂರು ಲಯನ್ಸ್‌ ಕ್ಲಬ್‌ನವರು ನೆಲಹಾಸು, ಮೇಲ್ಛಾವಣಿ ಅಳವಡಿಕೆ ಮಾಡಲು ಮುಂದೆ ಬಂದಿದ್ದಾರೆ.

Advertisement

ಅಮೃತ್‌ ಭಾರತ್‌ಗೆ ಸೇರಿಸಲಿ
ಆದಾಯನುಸಾರ ಉಡುಪಿ ಬಳಿಕ ಕುಂದಾಪುರ ನಿಲ್ದಾಣ ನಿಲುಗಡೆಯಾಗಲು ಬೇಕಾದ ಆದಾಯ ಹೊಂದಿದೆ. ಪ್ರಮುಖ ಪ್ರವಾಸಿ ಹಾಗೂ ಭೌಗೋಳಿಕ ಪ್ರಾಮುಖ್ಯತೆಯ ತಾಣಗಳನ್ನು ಹೊಂದಿವೆ. ಹೆಚ್ಚು ರೈಲುಗಳ ನಿಲುಗಡೆಗೆ ಇದಿಷ್ಟು ಸಾಕು. ಆದರೆ ಇಲ್ಲಿ ಅಭಿವೃದ್ಧಿಯೂ ಆಗುತ್ತಿಲ್ಲ, ರೈಲುಗಳ ನಿಲುಗಡೆಯೂ ಹೆಚ್ಚುತ್ತಿಲ್ಲ. ಈಗಲಾದರೂ ಕೊಂಕಣ್‌ ರೈಲ್ವೆ ನಿಗಮದ ವಿಶೇಷ ಅನುದಾನ ಹಾಗೂ ಅಮೃತ್‌ ಭಾರತ್‌ ಯೋಜನೆಗೆ ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ಸಮಿತಿಯ ಗೌತಮ್‌ ಶೆಟ್ಟರು ಒತ್ತಾಯಿಸಿದ್ದಾರೆ.

ಮೇಲ್ದರ್ಜೆಗೇರಬೇಕಿದೆ…
ಈ ನಿಲ್ದಾಣದ ಅಭಿವೃದ್ಧಿಗೆ ಕೊಂಕಣ್‌ ರೈಲ್ವೇ ನಿರ್ಲಕ್ಷé ವಹಿಸಿದೆ. 10 ವರ್ಷಗಳಿಗೂ ಹೆಚ್ಚು ಕಾಲದಿಂದ ಮೇಲ್ದರ್ಜೆ ಬೇಡಿಕೆಯಿದೆ. ಈ ಬಗ್ಗೆ ಸಂಸದರ ಗಮನಕ್ಕೆ ತರಲಾಗಿದ್ದು, ಅವರು ಸಹ ಸಹ ಆಸಕ್ತಿ ವಹಿಸಿದ್ದಾರೆ. ನಿಲ್ದಾಣದ ಮೇಲ್ದರ್ಜೆಯೊಂದಿಗೆ ಎಲ್ಲ ರೀತಿಯ ಸೌಲಭ್ಯ ಕಲ್ಪಿಸುವುದು ಬಹಳ ಅಗತ್ಯ.
– ಗಣೇಶ್‌ ಪುತ್ರನ್‌, ಅಧ್ಯಕ್ಷ, ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣ ಸಮಿತಿ.

ಮೇಲ್ದರ್ಜೆಗೆ ಪ್ರಯತ್ನ
ಮೂಡ್ಲಕಟ್ಟೆ ನಿಲ್ದಾಣ ಮೇಲ್ದರ್ಜೆಗೇರಿಸಲು ಆದ್ಯತೆ ನೆಲೆಯಲ್ಲಿ ಪ್ರಯತ್ನಿಸಲಾಗುವುದು. ಅಗತ್ಯ ಮೂಲಸೌಕರ್ಯ ಅಭಿವೃದ್ಧಿ, ಅಮೃತ್‌ ಭಾರತ್‌ ಯೋಜನೆಯಡಿ ಪರಿಗಣಿಸಲು ರೈಲ್ವೇ ಬೋರ್ಡ್‌ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.
– ಕೋಟ ಶ್ರೀನಿವಾಸ ಪೂಜಾರಿ, ಸಂಸದರು ಉಡುಪಿ

ನಿಲುಗಡೆ ಇರುವ ರೈಲುಗಳು
ಪಂಚಗಂಗಾ ರೈಲು, ಮತ್ಸ್ಯಗಂಧ, ಮುಂಬಯಿ – ಮಂಗಳೂರು ಎಕ್ಸ್‌ ಪ್ರಸ್‌, ಮಂಗಳಾ, ನೇತ್ರಾವತಿ ರೈಲುಗಳು, ಎರಡು ಪ್ಯಾಸೆಂಜರ್‌ ರೈಲು, ಮುರ್ಡೇಶ್ವರ – ಮೈಸೂರು ರೈಲು ನಿತ್ಯ ನಿಲುಗಡೆ ಇವೆ. ವಾರಕ್ಕೊಂದು ರೈಲಿನಂತೆ ವಾರದಲ್ಲಿ 7-8 ರೈಲುಗಳು ಸಂಚರಿಸುತ್ತವೆ.

ಯಾವೆಲ್ಲ ರೈಲುಗಳ ಬೇಡಿಕೆ?
ಈ ನಿಲ್ದಾಣವಾಗಿ 30 ವರ್ಷವಾದರೂ ಇಂದಿಗೂ ಕೆಲ ಪ್ರಮುಖ ರೈಲುಗಳ ನಿಲುಗಡೆಗೆ ಅವಕಾಶವೇ ಕೊಡುತ್ತಿಲ್ಲ. ಬೆಂಗಳೂರಿಗೆ ಹೊಸದಾಗಿ ಇನ್ನೊಂದು ರೈಲಿನ ಅಗತ್ಯವಿದೆ. ಎರ್ನಾಕುಲಂ – ಮುಂಬಯಿ ವಂದೇ ಭಾರತ್‌ ರೈಲು ನಿಲುಗಡೆ, ಅಮೃತ್‌ಸರ- ಕೊಚ್ಚುವೇಲಿ, ಡೆಹ್ರಾಡೂನ್‌ – ಕೊಚ್ಚುವೇಲಿ, ಪೋರ್‌ಬಂದರ್‌ – ಕೊಚ್ಚುವೇಲಿ ರೈಲುಗಳು, ದಿಲ್ಲಿ, ಕೇರಳ ರೈಲುಗಳ ನಿಲುಗಡೆ ಸಿಗಬೇಕಿದೆ. ತಿರುಪತಿ, ಅಯೋಧ್ಯೆಗೆ ಹೊಸ ರೈಲು ಬೇಡಿಕೆಯಿದೆ.

-ಪ್ರಶಾಂತ್‌ ಪಾದೆ

 

Advertisement

Udayavani is now on Telegram. Click here to join our channel and stay updated with the latest news.