Advertisement

Kundapura: ಆಶ್ರಯ ನೀಡಿದ ಕೊರಗರಿಗೇ ಈಗ ಭೂಮಿ ಇಲ್ಲ!

01:25 PM Jan 15, 2025 | Team Udayavani |

ಕುಂದಾಪುರ: ಆದಿವಾಸಿ ಬುಡಕಟ್ಟು ಜನರು ಭೂಮಿಯನ್ನು ಇಲ್ಲಿಗೆ ಆಗಮಿಸಿದ ಅನ್ಯರಿಗೆ ಆಶ್ರಯ ನೀಡಿದವರು. ಕೊರಗ ಸಮುದಾಯದವರು ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಮೂಲ ನಿವಾಸಿಗರು. ಆದರೆ ಆಶ್ರಯ ನೀಡಿದ ಮೂಲನಿವಾಸಿಗಳೇ ಇಂದು ಒಂದು ತುಂಡು ಭೂಮಿ ಇಲ್ಲದ ಸ್ಥಿತಿಯಲ್ಲಿದ್ದು, ಅವರ ಬಳಿ ಕೇಳುವ ಪರಿಸ್ಥಿತಿ ಬಂದಿದೆ ಎಂದು ವಕೀಲ ಮಂಜುನಾಥ ಗಿಳಿಯಾರು ಹೇಳಿದರು.

Advertisement

ಅವರು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ನಾಡ ವಲಯ ಸಮಿತಿ ಜನಶಕ್ತಿ ಕಚೇರಿಯಲ್ಲಿ ನಡೆದ ಆದಿವಾಸಿ ನಾಡ ವಲಯ ಸಮಿತಿ ಸಮಾವೇಶ ಹಾಗೂ ಕಾನೂನು ಮಾಹಿತಿ ಶಿಬಿರದಲ್ಲಿ ಮಾತನಾಡಿದರು.

ಕರಾವಳಿ ಜಿಲ್ಲೆಗಳಲ್ಲಿ ಕೊರಗ ಸಮುದಾಯದವರಿಗೆ ಭೂಮಿ ನೀಡಲು ಡಾಣ ಮಹಮ್ಮದ್‌ ಪೀರ್‌ ವರದಿ ಶಿಫಾರಸು ಮಾಡಿದ್ದರೂ, ಸಹ ಇಂದಿಗೂ ಕೊರಗ ಸಮುದಾಯಕ್ಕೆ ಭೂಮಿ ಸಿಕ್ಕಿಲ್ಲ. ಅಂದಿನ ದರ್ಖಾಸ್ತು ಕಾನೂನು, ಉಳುವವನೇ ಹೊಲದೊಡೆಯ ಕಾನೂನು ಪ್ರಯೋಜನ ಈ ಸಮುದಾಯಕ್ಕೆ ಸಿಕ್ಕಿಲ್ಲ. ಆದಿವಾಸಿ ಸಂಘಟನೆ ನಿರಂತರವಾಗಿ ನಡೆಸುತ್ತಿರುವ ಭೂಮಿ ಚಳುವಳಿ ಅಭಿನಂದನಾರ್ಹ ಎಂದರು.

ಉದ್ಘಾಟಿಸಿದ ಆದಿವಾಸಿ ಹಕ್ಕುಗಳ ಸಮಿತಿಯ ರಾಜ್ಯ ಸಮಿತಿ ಸದಸ್ಯ ಕೃಷ್ಣ ಇನ್ನಾ, ಕೊರಗ ಸಮುದಾಯದ ಘನತೆ, ಗೌರವದ ಬದುಕಿಗೆ, ಒಳ ಮೀಸಲಾತಿಗಾಗಿ, ಉದ್ಯೋಗ, ಆಹಾರ, ಆರೋಗ್ಯ ಮತ್ತು ಭೂಮಿಯ ಹಕ್ಕಿಗಾಗಿ ಮಂಗಳೂರಿನಲ್ಲಿ ಜ.23 ರಂದು ನಡೆಯಲಿರುವ ಆದಿವಾಸಿ ಆಕ್ರೋಶ ರ್ಯಾಲಿ ಹಾಗೂ ಬಹಿರಂಗ ಸಭೆಯಲ್ಲಿ ಸಮುದಾಯದವರು ಹಾಗೂ ಜನಪರ ಕಾಳಜಿಯ ಎಲ್ಲರೂ ಭಾಗವಹಿಸಿ ಎಂದು ಕರೆ ನೀಡಿದರು.

ಸಮಾವೇಶದ ನಿರ್ಣಯಗಳು
– ನಾಡ, ಆಲೂರು, ಹಕ್ಲಾಡಿ, ಗುಜ್ಜಾಡಿ, ನಾವುಂದ, ಮರವಂತೆ ಮತ್ತು ತ್ರಾಸಿ ಗ್ರಾ.ಪಂ. ವ್ಯಾಪ್ತಿಯ ಭೂರಹಿತ ಕುಟುಂಬಗಳಿಗೆ ಭೂಮಿ ನೀಡುವುದು, ಭೂಮಿಗೆ ಸಂಬಂಧಿಸಿದ ಎಲ್ಲ ಸಮಸ್ಯೆಗಳನ್ನೂ ಬಗೆಹರಿಸುವುದು.
– ಡೀಮ್ಡ್, ಅರಣ್ಯ ಭೂಮಿಯಲ್ಲಿ ವಾಸಿಸುವ ಕುಟುಂಬಗಳಿಗೆ ಭೂಮಿ ಹಕ್ಕು ನೀಡುವುದು.
– ಒಡೆಯರ ಭೂಮಿಯಲ್ಲಿ ವಾಸಿಸುವ ಕೊರಗರಿಗೆ ಅವರ ಹೆಸರಿನಲ್ಲಿ ಪಹಣಿ ಒದಗಿಸುವುದು.
– ಲಭ್ಯವಿರುವ ಡಿ.ಸಿ. ಮನ್ನಾ ಭೂಮಿ ಕೊರಗ ಕುಟುಂಬಗಳಿಗೆ ಮೊದಲ ಆದ್ಯತೆಯಲ್ಲಿ ಹಂಚುವುದು.
– ವಸತಿ ಸಮಸ್ಯೆ ಇರುವವರಿಗೆ ತುರ್ತು ವಸತಿ ಸೌಲಭ್ಯ ಕಲ್ಪಿಸಲು ಇಲಾಖೆಗಳು ಮುತುವರ್ಜಿ ವಹಿಸಬೇಕು.
– ಕುಲಕಸುಬುದಾರರಿಗೆ ಸ್ವಾವಲಂಬಿ ಬದುಕಿಗೆ ಯೋಜನೆ ರೂಪಿಸಿ ಜಾರಿಗೆ ತರಬೇಕು.
– ಕೊರಗ ಸಮುದಾಯದವರಿಗೆ ಆರೋಗ್ಯ ವೆಚ್ಚದ ಅನುದಾನ ಸರಕಾರ ಬಿಡುಗಡೆ ಮಾಡಬೇಕು.

Advertisement

ನಾಡ ಗ್ರಾ.ಪಂ. ಸದಸ್ಯೆ ಮಮತಾ ಪಡುಕೋಣೆ, ಗುಜ್ಜಾಡಿ ಗ್ರಾ.ಪಂ. ಸದಸ್ಯೆ ಜಯಂತಿ ಉಪಸ್ಥಿತರಿದ್ದರು. ಶ್ರೀಧರ ನಾಡ ಸ್ವಾಗತಿಸಿ, ಪ್ರಸ್ತಾವಿಸಿದರು. ಸುನೀತಾ ಪಡುಕೋಣೆ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.