Advertisement

 ಕುಂದಾಪುರ ಪುರಸಭೆ: ರಾಜಕೀಯ ಜಿದ್ದಾಜಿದ್ದಿ; 7 ಕಡೆ ನೇರ ಹಣಾಹಣಿ 

11:03 AM Aug 25, 2018 | |

ಕುಂದಾಪುರ: ಪುರಸಭೆಗೆ ನಡೆಯುವ ಚುನಾವಣೆಯಲ್ಲಿ 7 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಬಿಜೆಪಿ ನೇರ ಹಣಾಹಣಿ ಹೊಂದಿದೆ. ಈ ಮಧ್ಯೆ ಕಾಂಗ್ರೆಸ್‌ ಹಾಗೂ ಬಿಜೆಪಿಗೆ ಬಂಡಾಯದ ತಲೆಬಿಸಿಯೂ ಇದೆ. ಬಿಜೆಪಿಯಲ್ಲಿ ಉಚ್ಚಾಟನಾ ಪರ್ವವೂ ನಡೆದಿದೆ. ಒಟ್ಟು 74 ಅಭ್ಯರ್ಥಿಗಳು ಅದೃಷ್ಟ  ಪರೀಕ್ಷೆಗೆ ಇಳಿದಿದ್ದಾರೆ. 

Advertisement

 ನಾಗಾಲೋಟಕ್ಕೆ ತಡೆ
ಫೆರ್ರಿ ವಾರ್ಡ್‌, ಈಸ್ಟ್‌ಬ್ಲಾಕ್‌, ಚಿಕ್ಕನ್‌ಸಾಲ್‌, ಸರಕಾರಿ ಆಸ್ಪತ್ರೆ, ಚರ್ಚ್‌ ರೋಡ್‌, ವೆಸ್ಟ್‌ಬ್ಲಾಕ್‌,ಕೋಡಿ ಉತ್ತರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿಯ ಅಭ್ಯರ್ಥಿಗಳು ಮಾತ್ರ ಇರುವುದು. ಹಾಗಾಗಿ ನೇರ ಸ್ಪರ್ಧೆಯಲ್ಲಿ ಅಭ್ಯರ್ಥಿಗಳ ನಡುವೆ ಬಲಾಬಲ ಪ್ರದರ್ಶನ ಆಗಲಿದೆ. ಬಹದ್ದೂರ್‌ಶಾ, ಮೀನು ಮಾರುಕಟ್ಟೆ, ಚಿಕ್ಕನ್‌ಸಾಲ್‌ ಬಲಬದಿ, ಸೆಂಟ್ರಲ್‌,ಟಿಟಿ ವಾರ್ಡ್‌, ನಾನಾ ಸಾಹೇಬ್‌, ಶಾಂತಿನಿಕೇತನ, ಕಲ್ಲಾಗರ ವಾರ್ಡ್‌ನಲ್ಲಿ ತಲಾ ಮೂವರು ಸ್ಪರ್ಧಿಗಳಿದ್ದಾರೆ. ನಾನಾ ಸಾಹೇಬ್‌, ಕಲ್ಲಾಗರ, ಶಾಂತಿನಿಕೇತನದಲ್ಲಿ ಸಿಪಿಐಎಂ, ಟಿಟಿ ವಾರ್ಡ್‌ನಲ್ಲಿ ಜೆಡಿಎಸ್‌, ಸೆಂಟ್ರಲ್‌ ವಾರ್ಡ್‌, ಬಹದ್ದೂರ್‌ಶಾದಲ್ಲಿ ಪಕ್ಷೇತರ, ಚಿಕ್ಕನ್‌ಸಾಲ್‌ ಬಲಬದಿ, ಮೀನು ಮಾರುಕಟ್ಟೆಯಲ್ಲಿ ಬಿಎಸ್‌ಪಿ ಪಕ್ಷಗಳು ಕಾಂಗ್ರೆಸ್‌ ಬಿಜೆಪಿಯ ಮತಗಳಿಕೆಯ ನಾಗಾಲೋಟಕ್ಕೆ ತಡೆಯೊಡ್ಡಲು ಸಜ್ಜಾಗಿವೆ. 

ಐವರ ಕಣ
ಖಾರ್ವಿಕೇರಿ, ಕೋಡಿ ದಕ್ಷಿಣ, ಕೋಡಿ ಮಧ್ಯ ವಾರ್ಡಿನಲ್ಲಿ ತಲಾ ನಾಲ್ವರು, ಟೈಲ್‌ ಫ್ಯಾಕ್ಟರಿ, ಮದ್ದುಗುಡ್ಡೆ, ಕುಂದೇಶ್ವರ, ಹುಂಚಾರುಬೆಟ್ಟು ವಾರ್ಡಿನಲ್ಲಿ ತಲಾ ಐವರು ಸ್ಪರ್ಧೆಯಲ್ಲಿದ್ದಾರೆ. ಐದಕ್ಕಿಂತ ಹೆಚ್ಚಿನ ಸ್ಪರ್ಧಿಗಳು ಎಲ್ಲಿಯೂ ಇಲ್ಲ. 

ಮುನಿಸಿಕೊಂಡವರು
ಪುರಸಭೆಯ ಜನಸಂಖ್ಯೆ 30,444 ಇದ್ದು ಇದರಲ್ಲಿ 23,220 ಮತದಾರರಿದ್ದಾರೆ. 23 ವಾರ್ಡ್‌ಗಳಿದ್ದು ಕಳೆದ ಅವಧಿಯಲ್ಲಿ ಬಿಜೆಪಿ ಆಡಳಿತ ನಡೆಸಿ ಕಾಂಗ್ರೆಸ್‌ ಪ್ರತಿಪಕ್ಷವಾಗಿದೆ. ಸಿಪಿಐಎಂ ಎರಡು ಸ್ಥಾನಗಳನ್ನು ಹೊಂದಿತ್ತು. ಆದರೆ ಈ ಬಾರಿ ಸಿಪಿಐಎಂನ ಗೆಲುವಿನ ಅಭ್ಯರ್ಥಿ ಎಂದು ಬಿಂಬಿಸಲ್ಪಟ್ಟ ಸತತ 4 ಅವಧಿಯಲ್ಲಿ ಗೆದ್ದ ಗುಣರತ್ನಾ ಅವರು ಬಿಜೆಪಿ ತೆಕ್ಕೆಗೆ ಸರಿದು ಸ್ಪರ್ಧಿಸುತ್ತಿದ್ದಾರೆ. ಅಂತೆಯೇ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದು ಉಪಾಧ್ಯಕ್ಷರಾಗಿದ್ದ ಇದಕ್ಕೂ ಮೊದಲು ಬಿಜೆಪಿ ಅಧ್ಯಕ್ಷರೂ ಆಗಿದ್ದ ರಾಜೇಶ್‌ ಕಾವೇರಿ ಅವರು ಪಕ್ಷದಿಂದ ಟಿಕೆಟ್‌ ಸಿಗದೇ ಪಕ್ಷೇತರರಾಗಿ ಸ್ಪರ್ಧಿಸಿದ್ದಾರೆ. ಪಕ್ಷದಿಂದ ಉಚ್ಚಾಟಿಸಲ್ಪಟ್ಟಿದ್ದಾರೆ. ಆದ್ದರಿಂದ ಇವರ ಸ್ಪರ್ಧೆ ಹೇಗೆ ಪರಿಣಾಮ ಬೀರಲಿದೆ ಎನ್ನುವುದು ಕುತೂಹಲಕಾರಿಯಾಗಿದೆ. ಬಿಜೆಪಿಯಿಂದ ಟಿಕೆಟ್‌ ಸಿಗದೇ ಗೌರಿ ದೇವಾಡಿಗ ಅವರು ಕಾಂಗ್ರೆಸ್‌ ಬಾಗಿಲು ತಟ್ಟಿ ಅಲ್ಲಿ ಟಿಕೆಟ್‌ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಬಿಜೆಪಿಯಿಂದ ಸ್ಪರ್ಧಿಸಿ ಅಧಿಕಾರದಲ್ಲಿದ್ದವರಿಗೆ ಮೀಸಲಾತಿ ದೆಸೆಯಿಂದ ಕೆಲವರಿಗೆ ಸ್ಪರ್ಧೆಗೆ ಅವಕಾಶ ದೊರೆಯಲಿಲ್ಲ. ಬದಲಿ ಕ್ಷೇತ್ರ ಕೇಳಿದರೂ ಕೆಲವರಿಗೆ ದೊರೆಯಲಿಲ್ಲ. ಹಾಗಾಗಿ ಒಳಗಿಂದ ಒಳಗೆ ಕಾಂಗ್ರೆಸ್‌ ಹಾಗೂ ಬಿಜೆಪಿಯಲ್ಲಿ ಅಸಮಾಧಾನದ ಹೊಗೆ ಇದೆ. ಇದರಲ್ಲಿ ಒಂದಷ್ಟು ಅಸಮಾಧಾನ ನಾಯಕರ ಮಧ್ಯಪ್ರವೇಶ, ಪಂಚಾಯತಿಕೆ ಮೂಲಕ ಬಗೆಹರಿಯಲಿದೆ. 

ನಾಯಕರ ಭೇಟಿ
ರಾಜಕೀಯ ಪಕ್ಷಗಳು ಈಗಾಗಲೇ ಎರಡು ಸುತ್ತಿನ ಮನೆ ಮನೆ ಭೇಟಿ ಪ್ರಚಾರ ಮುಗಿಸಿವೆ. ಕಾಂಗ್ರೆಸ್‌ ಪರವಾಗಿ ಸಚಿವೆ ಡಾ| ಜಯಮಾಲಾ ಅವರು ಆಗಮಿಸುವ ಸಾಧ್ಯತೆಯಿದೆ. ವಿಧಾನ ಪರಿಷತ್‌ ಸದಸ್ಯ ಐವನ್‌ ಡಿ’ಸೋಜಾ ಅವರು ಭೇಟಿ ನೀಡಿದ್ದಾರೆ. ಬಿಜೆಪಿಯಿಂದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಮನೆ ಮನೆ ಭೇಟಿ ಕೂಡ ನಡೆಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next