ಕುಂದಾಪುರ: ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮೊಳಹಳ್ಳಿ ಗ್ರಾಮದ ನಿವಾಸಿ ಲೋಕೇಶ್ ಅವರನ್ನು ಗೌರಿಬಿದನೂರಿನ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಹಾಗೂ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ನ್ಯಾಯಾಲಯ ದೋಷಮುಕ್ತಗೊಳಿಸಿ ಆದೇಶಿಸಿದೆ.
ಆರೋಪಿಯ ಸಹೋದರ ಪ್ರವೀಣ್ ಗೌರಿಬಿದನೂರು ತಾಲೂಕಿನ ತೊಂಡೆಬಾವಿಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸಾಲ ಪಡೆದಿದ್ದು ಸಾಲಕ್ಕೆ ದೂರುದಾರರ ಮಗ ಗೌರಿಬಿದನೂರು ಪೊಲೀಸ್ ಠಾಣೆಯ ಮುಖ್ಯ ಪೇದೆ ರವಿಕುಮಾರ್ ಜಾಮೀನುದಾರರಾಗಿದ್ದರು.
ಕೋವಿಡ್ ಸಮಯದಲ್ಲಿ ಪ್ರವೀಣ್ ಅವರಿಗೆ ಸಾಲ ಮರುಪಾವತಿಸಲು ಅನನುಕೂಲವಾಗಿದ್ದು ಸಂಪೂರ್ಣ ಸಾಲವನ್ನು ರವಿಕುಮಾರ್ ಅವರೇ ಪಾವತಿಸಿದ್ದರು. ಅನಂತರ ಪ್ರವೀಣ್ ರವಿಕುಮಾರ್‌ಗೆ ಹಣ ಮರುಪಾವತಿಸಿದ್ದರೂ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಗೌರಿಬಿದನೂರು ಠಾಣೆಯ ತನ್ನ ಸಹೋದ್ಯೋಗಿ ಸಿಬಂದಿಗಳೊಂದಿಗೆ ಕೋಟ ಪೊಲೀಸ್ ಠಾಣೆಯ ಸಿಬ್ಬಂದಿ ಸಹಾಯದಿಂದ ಪ್ರವೀಣ್ ಅವರನ್ನು ಸುತ್ತುವರಿದು ಅವರ ಸಹೋದರ ಲೋಕೇಶ್ ಅವರ ಖಾಲಿ ಚೆಕ್‌ಗಳನ್ನು ಪಡೆದು, ಪ್ರವೀಣ್‌ರನ್ನು ಕೋಟ ಪೊಲೀಸ್ ಠಾಣೆಯಲ್ಲಿಟ್ಟಿದ್ದರು. ಅಲ್ಲಿಂದ ತಪ್ಪಿಸಿಕೊಂಡ ಪ್ರವೀಣ್ ಇಲಾಖೆಯ ಮೇಲಧಿಕಾರಿಗಳಿಗೆ ದೂರು ನೀಡಿದ್ದು, ತನಿಖಾ ಹಂತದಲ್ಲಿರುವಾಗಲೇ ಪ್ರವೀಣ್‌ರಿಂದ ಪಡೆದ ಲೋಕೇಶ್ ಅವರ ಎರಡು ಚೆಕ್‌ಗಳನ್ನು ರವಿಕುಮಾರ್ ತನ್ನ ತಂದೆ ಹಾಗೂ ತಾಯಿಯ ಹೆಸರಿನಲ್ಲಿ ನಗದೀಕರಣಕ್ಕೆ ಹಾಕಿದ್ದರು. ಆರೋಪಿಯ ಖಾತೆಯಲ್ಲಿ ಸಾಕಷ್ಟು ಹಣ ಇಲ್ಲದ ಕಾರಣ ಚೆಕ್ ಅಮಾನ್ಯಗೊಂಡಿತು. ರವಿಕುಮಾರ್ ತಂದೆಯ ಮೂಲಕ ನ್ಯಾಯಾಲಯದಲ್ಲಿ ಚೆಕ್ ಅಮಾನ್ಯ ಪ್ರಕರಣ ದಾಖಲಿಸಿದ್ದರು. ಇದೀಗ ನ್ಯಾಯಾಲಯ ಆರೋಪಿಯನ್ನು ದೋಷಮುಕ್ತಗೊಳಿಸಿ ಆದೇಶಿಸಿದೆ. ಆರೋಪಿ ಮೊಳಹಳ್ಳಿ ಲೋಕೇಶ್ ಪರವಾಗಿ ಗೌರಿಬಿದನೂರು ನ್ಯಾಯಾಲಯದಲ್ಲಿ ಕುಂದಾಪುರದ ನ್ಯಾಯವಾದಿ ನೀಲ್ ಬ್ರಿಯಾನ್ ಪಿರೇರಾ ವಾದಿಸಿದ್ದರು.