Advertisement

ಕುಂದಾಪುರ: ತಂಡದಿಂದ ಮೊಬೈಲ್‌ ಅಂಗಡಿ ಮಾಲಕನ ಅಪಹರಣ: ನಗದು ಲೂಟಿ

08:17 PM Sep 22, 2021 | Team Udayavani |

ಕುಂದಾಪುರ : ಇಲ್ಲಿನ ಮೊಬೈಲ್‌ ಶಾಪ್‌ ಮಾಲಕನನ್ನು ಅಪಹರಿಸಿದ ತಂಡವೊಂದು 4.50 ಲಕ್ಷ ರೂ.ಗೂ ಅಧಿಕ ಮೊತ್ತದ ನಗದು, ಮೊಬೈಲ್‌ ಲೂಟಿ ಮಾಡಿದ ಘಟನೆ ಬೆಳಕಿಗೆ ಬಂದಿದ್ದು, ಈ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದಲ್ಲಿ 6 ಮಂದಿ ವಿರುದ್ಧ ಕೇಸು ದಾಖಲಾಗಿದೆ.

Advertisement

ಬೈಂದೂರು ತಾಲೂಕು ಅರೆಹೊಳೆ ನಿವಾಸಿ, ಪ್ರಸ್ತುತ ಕುಂದಾಪುರದ ಅಪಾರ್ಟ್‌ಮೆಂಟ್‌ ಒಂದರ ನಿವಾಸಿ ಮುಸ್ತಾಫ್‌ (34) ಅಪಹರಣಕ್ಕೊಳಗಾದವರು. ಮುಕ್ತಾರ್‌ ಹಾಗೂ ಇತರ ಐವರು ಅಪಹರಣ ಮಾಡಿ 4.64 ಲಕ್ಷ ರೂ. ಹಣ ಹಾಗೂ 1 ಲಕ್ಷ ರೂ. ಮೌಲ್ಯದ ಸೊತ್ತುಗಳು ಮತ್ತು ಅಮೂಲ್ಯ ದಾಖಲಾತಿಗಳನ್ನು ಸುಲಿಗೆ ಮಾಡಿದ್ದಾಗಿ ಮುಸ್ತಾಫ್‌ ಕುಂದಾಪುರ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಘಟನೆ ವಿವರ
ಕುಂದಾಪುರದ ಚಿಕನ್‌ ಸಾಲ್‌ ರಸ್ತೆಯಲ್ಲಿ “ಮೊಬೈಲ್‌ ಎಕ್ಸ್‌’ ಎನ್ನುವ ಅಂಗಡಿ ಹೊಂದಿದ್ದ ಮುಸ್ತಾಫ್ ಸೆ. 17ರ ರಾತ್ರಿ ವ್ಯವಹಾರ ಮುಗಿಸಿ 50 ಸಾವಿರ ರೂ. ನಗದು, ಆಧಾರ್‌ ಕಾರ್ಡ್‌, ಪಾನ್‌ ಕಾರ್ಡ್‌, ಮೂರ್‍ನಾಲ್ಕು ಬ್ಯಾಂಕ್‌ಗಳ ಚೆಕ್‌ ಪುಸ್ತಕ ಹಾಗೂ ಇನ್ನಿತರ ದಾಖಲಾತಿಗಳು, ಐಫೋನ್‌, ಸ್ಯಾಮ್‌ಸಂಗ್‌ ಫೋನ್‌, ಆಪಲ್‌ ಸ್ಮಾರ್ಟ್‌ ವಾಚ್‌ ಹಾಗೂ ಏರ್‌ಪಾಡ್‌ಗಳನ್ನು ಬ್ಯಾಗಿನಲ್ಲಿ ಹಾಕಿಕೊಂಡು ದ್ವಿಚಕ್ರ ವಾಹನದಲ್ಲಿ ವಾಸದ ಫ್ಲ್ಯಾಟ್‌ನತ್ತ ಹೋಗುತ್ತಿದ್ದರು. ಮನೆ ಸಮೀಪ ಹೋದಾಗ ಒಂದು ಸ್ವಿಫ್ಟ್ ಕಾರು ಅನುಮಾನಾಸ್ಪದವಾಗಿ ಕಂಡುಬಂದಿದ್ದು, ಅದರಲ್ಲಿ ಚಾಲಕ ಆರೋಪಿ ಮುಕ್ತಾರ್‌ ಹಾಗೂ ಇತರರಿದ್ದರು. ಅವರಲ್ಲೊಬ್ಬ ಅಪರಿಚಿತ ವ್ಯಕ್ತಿ ದೈಹಿಕ ಹಲ್ಲೆ ಮಾಡಿ ಕಾರಿನ ಒಳಗೆ ಎಳೆದುಕೊಂಡಿದ್ದು ಕಾರಿನಲ್ಲಿದ್ದ ಇನ್ನೊರ್ವ ಅಪರಿಚಿತ ವ್ಯಕ್ತಿ ರಿವಾಲ್ವರ್‌ ತೋರಿಸಿ ಬೆದರಿಸಿದ್ದಾನೆ. ಆರೋಪಿಗಳ ಪೈಕಿ ಒಬ್ಬ ಮುಸ್ತಾಫ್‌ ಮುಖಕ್ಕೆ ಗುದ್ದಿ ಕೈ ಹಾಗೂ ಬಾಯಿಯನ್ನು ಕಟ್ಟಿ ಕೂಗದಂತೆ ಮಾಡಿ ಬೆಂಗಳೂರಿನತ್ತ ಕರೆದೊಯ್ದಿದ್ದಾರೆ. ಕಾರಿನಲ್ಲಿ ತೆರಳುವ ಮಾರ್ಗ ಮಧ್ಯೆ ಮಹಿಳೆಯೊಬ್ಬಳು ಕಾರು ಏರಿದ್ದು, ಬೆಂಗಳೂರಿನ ಲಾಡ್ಜ್ ಒಂದರಲ್ಲಿ ಮತ್ತಿಬ್ಬರು ಅಪರಿಚಿತ ಆರೋಪಿಗಳು ಜತೆಯಾಗಿದ್ದರು.

ಇದನ್ನೂ ಓದಿ :ಕುಂದಾಪುರ: 6 ಮಂದಿಯಿಂದ ಉದ್ಯಮಿಯ ಅಪಹರಣ, ನಗದು ದೋಚಿದ ತಂಡ

ಬೆಂಗಳೂರಿಗೆ ಕರೆದೊಯ್ದರು!
ಲಾಡ್ಜ್ ನಲ್ಲಿ ಮಹಿಳಾ ಆರೋಪಿಯ ಮೊಬೈಲ್‌ಗೆ ಮುಸ್ತಾಫ್ನ ಸಿಮ್‌ ಕಾರ್ಡ್‌ ಹಾಕಿ ಮನೆಯವರಿಗೆ ಕರೆ ಮಾಡಿಸಿ ಅವರಿಂದ ತಲಾ ಒಂದೊಂದು ಲಕ್ಷ ಬೇಕೆಂದು ಬೇಡಿಕೆ ಮುಂದಿಟ್ಟಿದ್ದರು. ಬ್ಯಾಂಕ್‌ ಖಾತೆಗೆ ಹಣ ವರ್ಗಾವಣೆ ಮಾಡಿಸಿಕೊಂಡಿದ್ದು, ಮುಸ್ತಾಫ್ ಖಾತೆಯಲ್ಲಿದ್ದ ಹಣ ಸಹಿತ ಮೊಬೈಲ್‌ ಮೂಲಕ ಬ್ಯಾಂಕ್‌ ಖಾತೆಯಿಂದ ಆರೋಪಿಗಳ ಖಾತೆಗೆ ಹಣ ವರ್ಗಾವಣೆ ಮಾಡಿಸಿಕೊಳ್ಳಲಾಗಿತ್ತು. ಕುಂದಾಪುರದಿಂದ ಬೆಂಗಳೂರಿಗೆ ಕರೆದುಕೊಂಡು ಹೋಗುವಾಗ ದಾರಿ ಮಧ್ಯೆ ಬೆಂಗಳೂರಿನ ಎಟಿಎಂ ಹಾಗೂ ಸ್ವೆ„ಪಿಂಗ್‌ ಮೆಷಿನ್‌ನಿಂದ 3.14 ಲಕ್ಷ ರೂ.ಗಳನ್ನು ಡ್ರಾ ಮಾಡಿಸಿದ್ದಾರೆ. ಚೆಕ್‌ ಪುಸ್ತಕ ತೆಗೆದುಕೊಂಡು ಸಹಿ ಮಾಡಲು ಹೇಳಿ ಊರಿಗೆ ಹೋದ ಮೇಲೆ ಖಾತೆಗೆ ಹಣ ಜಮಾ ಮಾಡಬೇಕು. ಜಮಾ ಮಾಡಿದರೆ ಮಾತ್ರ ದಾಖಲಾತಿ, ಮೊಬೈಲ್‌ ಹಾಗೂ ಇನ್ನಿತರ ವಸ್ತುಗಳನ್ನು ಹಿಂತಿರುಗಿಸುವುದಾಗಿ ಹೇಳಿದ್ದಾರೆ.

Advertisement

ಹಣಕ್ಕೆ ಬೇಡಿಕೆಯಿಟ್ಟು 2 ಮೊಬೈಲ್‌, ದಾಖಲೆಗಳನ್ನು ತಮ್ಮಲ್ಲಿಯೇ ಇರಿಸಿಕೊಂಡ ಆರೋಪಿಗಳು ಸೆ. 18ರ ರಾತ್ರಿ 9.30ಕ್ಕೆ ಮುಸ್ತಾಫ್‌ ಅವರನ್ನು ಬೆಂಗಳೂರಿನಲ್ಲಿ ಬಿಟ್ಟಿದ್ದಾರೆ. ಸ್ನೇಹಿತರ ಸಹಾಯದಿಂದ ಮುಸ್ತಾಫ‌ ಅವರು ಸೆ. 19ಕ್ಕೆ ಊರು ಸೇರಿದ್ದಾರೆ. ಒಟ್ಟು 4.64 ಲಕ್ಷ ರೂ. ಹಣ, ಹಾಗೂ 1 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ಆರೋಪಿಗಳು ಸುಲಿಗೆ ಮಾಡಿದ ಬಗ್ಗೆ ದೂರಿನಲ್ಲಿ ವಿವರಿಸಲಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರ್ಥಿಕ ವ್ಯವಹಾರ ಸೇರಿದಂತೆ ವಿವಿಧ ಆಯಾಮಗಳಲ್ಲಿ ಪೊಲೀಸ್‌ ತನಿಖೆ ನಡೆಯುತ್ತಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next