ತೆಕ್ಕಟ್ಟೆ : ನಿಯಂತ್ರಣ ತಪ್ಪಿ ಬೈಕ್ ಗದ್ದೆಗೆ ಉರುಳಿ ಬಿದ್ದು ಸವಾರ ಸ್ಥಳದಲ್ಲೇ ದಾರುಣವಾಗಿ ಸಾವಿಗೀಡಾದ ಘಟನೆ ಶುಕ್ರವಾರ ತಡರಾತ್ರಿ(ನ1) ತೆಕ್ಕಟ್ಟೆ ಸಮೀಪದ ಕೊಮೆಯಲ್ಲಿ ಸಂಭವಿಸಿದೆ.
ಕೋಟತಟ್ಟು ಪಡುಕರೆ ನಿವಾಸಿ ಚಂದ್ರ ಮರಕಾಲ ಅವರ ಪುತ್ರ ಮಹೇಂದ್ರ (32) ಮೃತ ದುರ್ದೈವಿ.
ಮಹೇಂದ್ರ ಅವರು ತೆಕ್ಕಟ್ಟೆಯಲ್ಲಿರುವ ತನ್ನ ಸಂಬಂಧಿಕರ ಮನೆಯಲ್ಲಿ ದೀಪಾವಳಿ ಹಬ್ಬದ ಕಾರ್ಯಕ್ರಮವನ್ನು ಮುಗಿಸಿ ತಡರಾತ್ರಿ ತನ್ನ ಬೈಕ್ ನಲ್ಲಿ ಬರುತ್ತಿದ್ದ ವೇಳೆ ತೆಕ್ಕಟ್ಟೆ– ಕೊಮೆ ರಸ್ತೆಯ ತಿರುವಿನಲ್ಲಿ ನಿಯಂತ್ರಣ ತಪ್ಪಿ ಬೈಕ್ ಸಹಿತ ರಸ್ತೆ ಬದಿಯ ಗದ್ದೆಗೆ ಆಯತಪ್ಪಿ ಬಿದ್ದಿದ್ದಾರೆ. ಪರಿಣಾಮ ಗದ್ದೆಯಲ್ಲಿ ನೀರಿದ್ದುದರಿಂದ ಉಸಿರುಗಟ್ಟಿ ಸ್ಥಳದಲ್ಲೇ ಮೃತ ಪಟ್ಟಿದ್ದಾರೆ ಎಂದು ಹೇಳಲಾಗಿದೆ.
ಎರಡು ದಿನಗಳಿಂದಲೂ ಸುರಿಯುತ್ತಿರುವ ಮಳೆಯಿಂದಾಗಿ ಭತ್ತದ ಕಟಾವು ಕಾರ್ಯ ಪೂರ್ಣಗೊಂಡಿತ್ತು. ಕೃಷಿಭೂಮಿಯಲ್ಲಿ ಅಪಾರ ಪ್ರಮಾಣದಲ್ಲಿ ನೀರು ತುಂಬಿ ಕೊಂಡಿದ್ದು, ಬೈಕ್ ಚಾಲಕನ ನಿಯಂತ್ರಣ ತಪ್ಪಿ ಆಕಸ್ಮಿಕವಾಗಿ ಮಗುಚಿ ಬಿದ್ದಿದ್ದರಿಂದ ನೀರಿನಲ್ಲಿ ಉಸಿರುಗಟ್ಟಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆ ಸಂಭವಿಸುತ್ತಿದ್ದಂತೆ ಕೋಟ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿದ್ದಾರೆ. ಕೋಟದ
ಜೀವನ್ ಮಿತ್ರ ನಾಗರಾಜ ಪುತ್ರನ್ ಅವರ ಆ್ಯಂಬುಲೆನ್ಸ್ ಸಹಾಯದಿಂದ ಮೃತ ದೇಹವನ್ನು ಕುಂದಾಪುರ ಸರಕಾರಿ ಆಸ್ಪತ್ರೆ ಸಾಗಿಸಲಾಗಿದೆ.