Advertisement

Kundapura: ನರೇಗಾದಿಂದ ಆಲೂರಿನ ಮಹಿಳೆಯ ಸ್ವಾವಲಂಬಿ ಬದುಕು

02:57 PM Jan 06, 2025 | Team Udayavani |

ಕುಂದಾಪುರ: ಗ್ರಾಮೀಣ ಭಾಗದ ಜನರ ಜೀವನೋಪಾಯಕ್ಕಾಗಿ ವರದಾನವಾಗಿರುವ ನರೇಗಾ ಯೋಜನೆ ಯಡಿ ಸಹಾಯಧನ ಪಡೆದುಕೊಂಡು, ಹೈನುಗಾರಿಕೆಯನ್ನು ಆರಂಭಿಸಿ, ಅದರ ಮೂಲಕವೂ ಸ್ವಾವಲಂಬಿ ಜೀವನವನ್ನು ಮಾಡಬಹುದು ಅನ್ನುವುದು ಆಲೂರಿನ ಮಹಿಳೆಯೊಬ್ಬರು ನಿರೂಪಿಸಿದ್ದಾರೆ.
ಆಲೂರು ಗ್ರಾಮದ 55 ವರ್ಷ ಪ್ರಾಯದ ಜಲಜಾ ಅವರಿಗೆ ಹೈನುಗಾರಿಕೆಯೇ ಜೀವನಾಧಾರ. ಕೃಷಿ ಹಾಗೂ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ಅವರ ಆಸಕ್ತಿಗೆ ಮತ್ತಷ್ಟು ಆಸರೆ ಹಾಗೂ ಶಕ್ತಿ ತುಂಬಿದ್ದು ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ.

Advertisement

ಹಟ್ಟಿ, ಗೊಬ್ಬರಗುಂಡಿಗೆ ಸಹಾಯಧನ
ಜಲಜಾ ಅವರು ಕಳೆದ ಹಲವು ವರ್ಷಗಳಿಂದ ಹೈನುಗಾರಿಕೆ ಮಾಡುತ್ತಿದ್ದರೂ ಜಾನುವಾರುಗಳಿಗೆ ಸರಿಯಾದ ಸೂರು ಇರಲಿಲ್ಲ. ಇದರಿಂದ ಹೆಚ್ಚಿನ ದನ ಸಾಕಲು ಕಷ್ಟವಾಗುತ್ತಿತ್ತು. ಅನಂತರ ಆಲೂರು ಗ್ರಾಮ ಪಂಚಾಯತ್‌ ಸಂಪರ್ಕಿಸಿ ನರೇಗಾ ಯೋಜನೆಯಡಿ ದನ ಸಾಕಾಣಿಕೆ ಶೆಡ್‌ (ಹಟ್ಟಿ) ಹಾಗೂ ಗೊಬ್ಬರ ಗುಂಡಿ ನಿರ್ಮಿಸಿಕೊಳ್ಳಲು 2023ರಲ್ಲಿ ಅರ್ಜಿ ಸಲ್ಲಿಸಿದ್ದರು. ಅದರಂತೆ ನರೇಗಾ ಯೋಜನೆಯಡಿ ದನದ ಹಟ್ಟಿಗೆ 57 ಸಾವಿರ ರೂ. ಹಾಗೂ ಗೊಬ್ಬರ ಗುಂಡಿ ನಿರ್ಮಾಣಕ್ಕೆ 25 ಸಾವಿರ ರೂ. ಸಹಾಯಧನ ಪಡೆದು ಹೈನುಗಾರಿಕೆ ಮುಂದುವರಿಸಿದ್ದು, ಈಗ ಅದರಲ್ಲಿ ಯಶಸ್ಸು ಕಂಡಿದ್ದಾರೆ.

ಕೈಹಿಡಿದ ಹೈನುಗಾರಿಕೆ: ಜಲಜಾ ಅವರಲ್ಲಿ ಮೊದಲು 4-5 ದನಗಳಷ್ಟೇ ಇದ್ದವು. ನರೇಗಾ ಯೋಜನೆಯಡಿ ಜಾನುವಾರುಗಳಿಗೆ ಉತ್ತಮ ರೀತಿಯಾದ ಹಟ್ಟಿ ನಿರ್ಮಾಣಗೊಂಡಿದ್ದರಿಂದ ಹೆಚ್ಚಿನ ದನಗಳನ್ನು ಖರೀದಿಸಿದರು. ಈಗ ಒಟ್ಟು 14 ದನಗಳನ್ನು ಜಲಜಾ ಅವರು ಸಾಕುತ್ತಿದ್ದಾರೆ. ಇದರಲ್ಲಿ 10 ದನಗಳು ಹಾಲು ಕೊಡುತ್ತಿದ್ದು, ಒಂದು ದಿನಕ್ಕೆ 58 ರಿಂದ 60 ಲೀ. ಹಾಲು ದೊರೆಯುತ್ತಿದೆ. ದಿನಕ್ಕೆ ಸರಾಸರಿ 1,800 ರೂ.ನಿಂದ 2 ಸಾವಿರ ರೂ.ವರೆಗೆ ಆದಾಯ ಗಳಿಸುತ್ತಿದ್ದಾರೆ. ಜತೆಗೆ ಗೊಬ್ಬರಗುಂಡಿ ನಿರ್ಮಾಣದಿಂದ ಸಾವಯವ ಗೊಬ್ಬರ ತಯಾರಿಸಿ ತಮಗಿರುವ ಅಲ್ಪ ಕೃಷಿ ಜಮೀನಿಗೆ ಬಳಸುತ್ತಿದ್ದಾರೆ.

ಸಹಾಯಧನಕ್ಕೆ ಏನು ಮಾಡಬೇಕು?
ನರೇಗಾದಡಿ ಹೈನುಗಾರಿಕೆ ಸಹಿತ ವಿವಿಧ ಸೌಲಭ್ಯಗಳನ್ನು ಪಡೆಯಲು ಎಲ್ಲರಿಗೂ ಅವಕಾಶವಿದೆ. ಅದಕ್ಕಾಗಿ ಆಯಾಯ ಗ್ರಾ.ಪಂ.ಗೆ ಜಾಬ್‌ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವಾಗ ಆಧಾರ್‌ ಕಾರ್ಡ್‌, ಭಾವಚಿತ್ರ, ಬ್ಯಾಂಕ್‌ ಖಾತೆ ವಿವರ ಹಾಗೂ ಪಡಿತರ ಕಾರ್ಡ್‌ ಪ್ರತಿಗಳನ್ನು ಕೊಡಬೇಕು. ಆ ಬಳಿಕ ಪಂಚಾಯತ್‌ನಿಂದ ಜಾಬ್‌ ಕಾರ್ಡ್‌ ಸಿಗುತ್ತದೆ. ಅದರ ಅನಂತರ ಹೈನುಗಾರಿಕೆ, ಮಲ್ಲಿಗೆ ಕೃಷಿ, ನರ್ಸರಿ ತೋಟ ಸಹಿತ ವಿವಿಧ ಕಾಮಗಾರಿಗಳಿಗೆ ಸಹಾಯಧನ ಪಡೆಯಲು ಪಂಚಾಯತ್‌ಗೆ ಅರ್ಜಿ ಸಲ್ಲಿಸಬಹುದು.

ಮತ್ತಷ್ಟು ಪ್ರಯೋಜನ
ನರೇಗಾ ಯೋಜನೆಯಡಿ ದನದ ಹಟ್ಟಿ, ಗೊಬ್ಬರಗುಂಡಿ ನಿರ್ಮಿಸಿಕೊಂಡಿದ್ದರಿಂದ ಹೈನುಗಾರಿಕೆ ನಡೆಸಿ ಜೀವನ ಸಾಗಿಸಲು ಸಾಧ್ಯವಾಗಿದೆ. ಮುಂದಿನ ದಿನದಲ್ಲಿ ಕೋಳಿ ಶೆಡ್‌ ನಿರ್ಮಿಸಿ, ಕೋಳಿ ಸಾಕಾಣಿಕೆ ಆರಂಭಿಸಬೇಕು ಅನ್ನುವ ಯೋಚನೆಯಿದೆ. ಗ್ರಾಮ ಪಂಚಾಯತ್‌ನವರು, ಅಧಿಕಾರಿಗಳ ಸಹಕಾರದಿಂದ ಇದೆಲ್ಲ ಸಾಧ್ಯವಾಗಿದೆ.
-ಜಲಜಾ ಆಲೂರು, ಹೈನುಗಾರರು

Advertisement
Advertisement

Udayavani is now on Telegram. Click here to join our channel and stay updated with the latest news.

Next