Advertisement

ಕುಂದಾಪುರ: ಅಕ್ರಮ ಸಕ್ರಮಕ್ಕಾಗಿ ಮುಂಜಾನೆ 5 ಗಂಟೆಗೆ ಸರದಿ ಸಾಲು!

01:00 AM Mar 08, 2019 | Harsha Rao |

ಕುಂದಾಪುರ: ಅಕ್ರಮ ಸಕ್ರಮಕ್ಕಾಗಿ ಅರ್ಜಿ ನಮೂನೆ 57ರಲ್ಲಿ ಅರ್ಜಿ ಸಲ್ಲಿಸಲು ಹಾಗೂ ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ಗೆ ಅರ್ಜಿ ಸಲ್ಲಿಸಲು ಇಲ್ಲಿನ ತಾಲೂಕು ಕಚೇರಿಗೆ ಮುಂಜಾನೆ 5ಕ್ಕೂ ಮುನ್ನ ಜನ ಆಗಮಿಸಿ ಸರದಿಯಲ್ಲಿ ಬಂದು ನಿಲ್ಲುತ್ತಾರೆ. 

Advertisement

ಇಲ್ಲಷ್ಟೇ ಅಲ್ಲ ವಂಡ್ಸೆ ಸೇರಿದಂತೆ ಇತರ ಇತರ ನಾಡಕಚೇರಿಗಳಲ್ಲಿ, ಜನಸ್ನೇಹಿ ಕೇಂದ್ರಗಳಲ್ಲಿ ಇದೇ ಮಾದರಿಯಲ್ಲಿ ಜನಸಂದಣಿ ಮುಂದುವರಿದಿದೆ. 

ಮುಂಜಾನೆ ಸಾಲು
ಗುರುವಾರ ಮುಂಜಾನೆ 5 ಗಂಟೆಗೆ ತಹಶೀಲ್ದಾರ್‌ ತಿಪ್ಪೆಸ್ವಾಮಿ ಅವರು ಕಚೇರಿಗೆ ಆಗಮಿಸಿ ಪಿಯುಸಿ ಪ್ರಶ್ನೆಪತ್ರಿಕೆ ತರಲು ಕರ್ತವ್ಯನಿಮಿತ್ತ ಉಡುಪಿಗೆ ತೆರಳಲು ಖಜಾನೆಗೆ ಹೋಗುತ್ತಿದ್ದಾಗ ಈ ಸರದಿ ಸಾಲಿಗೆ ಪ್ರತ್ಯಕ್ಷ ಸಾಕ್ಷಿಯಾಗಿದ್ದಾರೆ. ಮಧ್ಯಾಹ್ನ ಮಿನಿ ವಿಧಾನಸೌಧಕ್ಕೆ ಆಗಮಿಸಿದ ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಅವರು ಕೂಡಾ ಸರದಿ ಸಾಲು ವೀಕ್ಷಿಸಿ ಅಚ್ಚರಿ ವ್ಯಕ್ತಪಡಿಸಿದ್ದು ತತ್‌ಕ್ಷಣ ಸೂಕ್ತ ಕ್ರಮಕೈಗೊಳ್ಳುವಂತೆ ಸೂಚಿಸಿದ್ದಾರೆ.

ಸರ್ವರ್‌ ಡೌನ್‌
57 ಮಾದರಿಯಲ್ಲಿ ಅರ್ಜಿ ಸಲ್ಲಿಸಲು ಟೋಕನ್‌ ಪದ್ಧತಿ ಮಾಡಲಾಗಿದೆ. ಪ್ರತಿದಿನ 60 ಮಂದಿಗೆ ಟೋಕನ್‌ ನೀಡಲಾಗುತ್ತದೆ. ಆದರೆ ಸರ್ವರ್‌ ಸಮಸ್ಯೆಯಿಂದಾಗಿ ಪ್ರತಿ ಅರ್ಜಿಗೆ ಅರ್ಧ ತಾಸಿಗೂ ಅಧಿಕ ಸಮಯ ಬೇಕಾಗುತ್ತದೆ. ಈ ಕಾರಣದಿಂದ ದಿನವೊಂದಕ್ಕೆ 20 ಮಂದಿಯ ಅರ್ಜಿಯನ್ನಷ್ಟೇ ಸ್ವೀಕರಿಸಲು ಸಾಧ್ಯವಾಗುತ್ತದೆ. ಮರುದಿನ ಮತ್ತೆ 60 ಮಂದಿಗೆ ಟೋಕನ್‌ ನೀಡುವುದು, ಈ ಹಿಂದೆ ಟೋಕನ್‌ ಪಡೆದವರು ಅರ್ಜಿ ಸಲ್ಲಿಸಲಾಗದೇ ಬಾಕಿಯಾಗಿ ಬಂದಿರುವುದು ಎಂದು, ಒಟ್ಟಿನಲ್ಲಿ ಇಂದು ಟೋಕನ್‌ ಪಡೆದವರಿಗೆ ಎಂದೋ ಅರ್ಜಿ ಸಲ್ಲಿಕೆಗೆ ಅವಕಾಶ ದೊರೆಯುವುದು, ಇದಕ್ಕಾಗಿ ಪ್ರತಿದಿನ ತಾಲೂಕು ಕಚೇರಿ, ನಾಡ ಕಚೇರಿಗೆ ಅಲೆಯುವುದು ನಡೆಯುತ್ತಿದೆ. ಕೆಲಸ ಕಾರ್ಯ ಬಿಟ್ಟು ಕೂಲಿ ವೇತನ ಬಿಟ್ಟು ಇದಕ್ಕಾಗಿ ದಿನಗಟ್ಟಲೆ ಅಲೆದಾಡುವ ಪರಿಸ್ಥಿತಿ ಬಂದಿದೆ.  

ಕಿಸಾನ್‌ ಸಮ್ಮಾನ್‌ಗೂ ಸಾಲು
ಕಿಸಾನ್‌ ಸಮ್ಮಾನ್‌ ಸಹಾಯಧನಕ್ಕೆ ಆರ್‌ಟಿಸಿ ಬೇಕಾಗಿಲ್ಲ, ಸರ್ವೆ ನಂಬರ್‌ ಸಾಕು ಎಂದು ಅದೆಷ್ಟು ಬಾರಿ ಹಿರಿಯ ಅಧಿಕಾರಿಗಳು ಹೇಳಿದರೂ ಕೆಲವು ಅಧಿಕಾರಿಗಳು ಆರ್‌ಟಿಸಿಗಾಗಿ ಸತಾಯಿಸುತ್ತಾರೆ. ಇದರಿಂದಾಗಿ ಜನ ಆರ್‌ಟಿಸಿಗಾಗಿ ಸರದಿ ಸಾಲಿನಲ್ಲಿ ಕಾಯುತ್ತಾರೆ. ಎಲ್ಲ ಪಂಚಾಯತ್‌ಗಳಲ್ಲಿ, ಜನಸ್ನೇಹಿ ಕೇಂದ್ರಗಳಲ್ಲಿ ಆರ್‌ಟಿಸಿ ದೊರೆಯುತ್ತದೆ. ಆದರೆ ಅಲ್ಲೆಲ್ಲ ಸರ್ವರ್‌ ಸಮಸ್ಯೆಯಿಂದಾಗಿ ಜನ ತಾಲೂಕು ಕಚೇರಿಗೇ ಬರಬೇಕಾಗುತ್ತದೆ. 

Advertisement

ಇಲ್ಲಿಯೂ ಸರ್ವರ್‌ ಸಮಸ್ಯೆಯಿದೆ. ಆದ್ದರಿಂದ ಜನರ ಸಾಲು ದೊಡ್ಡದಾಗುತ್ತಲೇ ಇರುತ್ತದೆ. ಪಂಚಾಯತ್‌ಗಳಲ್ಲಿ ಸಮರ್ಪಕವಾಗಿ ಆರ್‌ಟಿಸಿ ದೊರೆತರೆ ಇಲ್ಲಿಗೆ ಬರುವುದು ತಪ್ಪುತ್ತದೆ. ಜತೆಗೆ ತಾಲೂಕು ಕಚೇರಿಯಲ್ಲಿ ಸಿಬಂದಿ ಕೊರತೆಯಿದ್ದು ಕಂಪ್ಯೂಟರ್‌ಗಳ ಕೊರತೆ ಕೂಡಾ ಇದ್ದು ಜನರ ಕೆಲಸ ಕಾರ್ಯಗಳಿಗೆ ಅಡಚಣೆಯಾಗುತ್ತಿದೆ.

ಹೆಚ್ಚುವರಿ ಕಂಪ್ಯೂಟರ್‌
ಜನಸಂದಣಿಯಿಂದಾಗಿ ಅನಗತ್ಯ ಗೊಂದಲ ಆಗದಂತೆ ಹೆಚ್ಚುವರಿ ಕಂಪ್ಯೂಟರ್‌ ಹಾಗೂ ಹೆಚ್ಚುವರಿ ಸಿಬಂದಿ ಹಾಕಲಾಗಿದೆ. ಆದರೆ ಸರ್ವರ್‌ ಸಮಸ್ಯೆ ಇಲ್ಲಿ ಪರಿಹಾರವಾಗುವುದಿಲ್ಲ. ಹಾಗಾಗಿ ಜನರ ಸಾಲು ದೊಡ್ಡದಾಗುತ್ತಿದೆ.
-ತಿಪ್ಪೆಸ್ವಾಮಿ,  ತಹಶೀಲ್ದಾರ್‌, ಕುಂದಾಪುರ

ಗಮನಕ್ಕೆ ಬಂದಿದೆ
ಗ್ರಾ.ಪಂ.ಗಳಲ್ಲಿ ಅಕ್ರಮಸಕ್ರಮ ಅರ್ಜಿ 
ಗ್ರಾಮ ಪಂಚಾಯತ್‌ಗಳಲ್ಲಿ ಆರ್‌ಟಿಸಿ ದೊರೆಯುತ್ತದೆ. ಹಾಗಿದ್ದರೂ ತಾಲೂಕು ಕಚೇರಿ, ನಾಡಕಚೇರಿ, ಜನಸ್ನೇಹಿ ಕೇಂದ್ರಗಳಲ್ಲಿ ಜನಸಂದಣಿ ಇರುವುದು ನನ್ನ ಗಮನಕ್ಕೆ ಬಂದಿದೆ. ಇದಕ್ಕಾಗಿ ಅಂತೆಯೇ ನಮೂನೆ57ರಲ್ಲಿ ಅಕ್ರಮ ಸಕ್ರಮ ಅರ್ಜಿ ಕೂಡಾ ಅಲ್ಲಿಯೇ ಸ್ವೀಕಾರವಾಗುವಂತೆ ಮಾಡಲು ಕಂದಾಯ ಇಲಾಖಾ ಕಾರ್ಯದರ್ಶಿಗಳಲ್ಲಿ ಮಾತನಾಡುತ್ತೇನೆ.
-ಬಿ.ಎಂ. ಸುಕುಮಾರ ಶೆಟ್ಟಿ ಬೈಂದೂರು ಶಾಸಕರು 

Advertisement

Udayavani is now on Telegram. Click here to join our channel and stay updated with the latest news.

Next