Advertisement

ಕುಂದಾಪುರ: ಹೈವೆ ಕಾಮಗಾರಿ ನಿರ್ಲಕ್ಷಿಸಿದ ಹೆದ್ದಾರಿ ಪ್ರಾಧಿಕಾರ!

07:11 PM Jan 19, 2022 | Team Udayavani |

ಕುಂದಾಪುರ: ನಗರದಲ್ಲಿ ನವಯುಗ ಕಂಪೆನಿಯವರು ನಡೆಸುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಮುಗಿದು ವಾಹನಗಳ ಓಡಾಟ 10 ತಿಂಗಳಿನಿಂದ ನಡೆಯುತ್ತಿದೆ. ಆದರೆ ಕಾಮಗಾರಿಯಲ್ಲಿ ಸಾಕಷ್ಟು ನ್ಯೂನತೆಗಳಿವೆ. ಈ ಬಗ್ಗೆ ಪುರಸಭೆ ಸಾಕಷ್ಟು ನಿರ್ಣಯಗಳನ್ನು ಮಾಡಿದರೂ, ಕೇಂದ್ರ ಸಚಿವರು ಹೇಳಿದರೂ, ಜಿಲ್ಲಾಧಿಕಾರಿ ಪತ್ರ ಬರೆದರೂ ರಾಷ್ಟ್ರೀಯ ಹೆದ್ದಾರಿ ಇಲಾಖೆ ಸ್ಪಂದಿಸಿಲ್ಲ. ಎಸಿ ನೇತೃತ್ವದಲ್ಲಿ ಸಮಿತಿ ರಚಿಸಿ ಸಭೆಗೆ ಬನ್ನಿ ಎಂದರೂ ಬರುತ್ತಿಲ್ಲ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ದಿವ್ಯ ನಿರ್ಲಕ್ಷ್ಯದ ಕುರಿತು ಕುಂದಾಪುರ ಜನತೆ ರೋಸಿ ಹೋಗಿದ್ದಾರೆ.

Advertisement

ಆಮೆಗತಿಯ ಕಾಮಗಾರಿ
ನಿರಂತರ 10 ವರ್ಷಗಳ ಕಾಲ ಕಾಮಗಾರಿ ನಡೆಸಿ ಫ್ಲೈಒವರ್‌ ಕಳೆದ ವರ್ಷಕ್ಕೆ ಮುಗಿದಿದೆ. ಅದಕ್ಕೂ ಮುನ್ನ
ಕೇಸು, ಗಲಾಟೆ, ಪ್ರತಿಭಟನೆ, ನೋಟಿಸ್‌ ಎಂದು ಸಾಕಷ್ಟು ಮುಜುಗರಕ್ಕೊಳಗಾದರೂ ಗುತ್ತಿಗೆದಾರ ಸಂಸ್ಥೆ ಬುದ್ಧಿ
ಕಲಿತಂತಿಲ್ಲ. ಬಾಕಿ ಉಳಿದ ಕಾಮಗಾರಿಗಳ ಕಡೆಗೆ ತಿಂಗಳು ಹತ್ತಾದರೂ ಗಮನ ಹರಿಸಿಲ್ಲ. ಫ್ಲೈಒವರ್‌ ಅಡಿ ವರ್ಷಾನುಗಟ್ಟಲೆಯಿಂದ ಪಾಳುಬಿದ್ದಿದ್ದ ವಸ್ತು, ತ್ಯಾಜ್ಯವನ್ನು ಸಹಾಯಕ ಕಮಿಷನರ್‌ ಖುದ್ದು ಸ್ಥಳಕ್ಕೆ ತೆರಳಿ ಖಾಲಿ ಮಾಡಿಸಬೇಕಾಗಿ ಬಂದಿತ್ತು. ಈಗಲೂ ಪೂರ್ಣ ತೆರವು ಕಾರ್ಯ ನಡೆದಿಲ್ಲ.

ಈಡೇರದ ಬೇಡಿಕೆ
ಕುಂದಾಪುರ ನಗರಕ್ಕೆ ಪ್ರವೇಶ ನೀಡಿಲ್ಲ. ಹೆದ್ದಾರಿಯಿಂದ ಸರ್ವಿಸ್‌ ರಸ್ತೆಗೆ ತೆರಳಲು ಅವಕಾಶ ಕೊಡಿ ಎಂದು
ಫ್ಲೈಒವರ್‌ ಕಾಮಗಾರಿ ಪೂರ್ಣವಾಗುವ ಮೊದಲೇ “ಉದಯವಾಣಿ “ಸುದಿನ’ ಪತ್ರಿಕೆಯಲ್ಲಿ ವರದಿಯೂ ಆಗಿತ್ತು. ಜನರೂ ಬೇಡಿಕೆ ಇಟ್ಟಿದ್ದರು. ತಾಂತ್ರಿಕ ಕಾರಣ ಗಳನ್ನು ನೀಡಿ ಪ್ರವೇಶ ನೀಡುತ್ತಿಲ್ಲ.

ವ್ಯವಸ್ಥೆಗಳೇ ಇಲ್ಲ
ಬೀದಿದೀಪ ಅಳವಡಿಸಿಲ್ಲ. ಕೆಲವು ಉರಿಯುತ್ತಿಲ್ಲ. ಫ್ಲೈಒವರ್‌ನಿಂದ ಮಳೆನೀರು ಸರ್ವಿಸ್‌ ರಸ್ತೆಗೆ ಬೀಳುವಾಗ ವಾಹನ ತೆರಳುವಾಗ ಸವಾರರ ಮೇಲೆ ಹಾರುತ್ತದೆ. ಇದನ್ನು ಸರಿಪಡಿಸಲಾಗಿದೆ ಎಂದು ಅಧಿವೇಶನದಲ್ಲಿ ಸುಳ್ಳು ಮಾಹಿತಿ ನೀಡಲಾಗಿದೆ.

ಮನವಿಗೆ ಬೆಲೆ ಇಲ್ಲ
ಪುರಸಭೆ ಈ ಕುರಿತು ಸಾಕಷ್ಟು ನಿರ್ಣಯ ಮಾಡಿದೆ. ಪುರಸಭೆಯ ಸಾಮಾನ್ಯ, ವಿಶೇಷ ಸಭೆಗೆ ಹೆದ್ದಾರಿ ಇಲಾಖೆ
ಅಧಿಕಾರಿಗಳು ಸರಿಯಾಗಿ ಬರುವುದಿಲ್ಲ. ಬಂದರೂ ಮಾಹಿತಿ ಕೊಡುವುದಿಲ್ಲ. ಕೊಟ್ಟರೂ ಬೇಡಿಕೆ ಈಡೇರಿಸುವುದಿಲ್ಲ. ಜಿಲ್ಲಾಧಿಕಾರಿಗಳು ಎಸಿ ಅಧ್ಯಕ್ಷತೆ ಯಲ್ಲಿ ಸಮಿತಿಯೊಂದನ್ನು ಮಾಡಿ ನಗರ ಪ್ರವೇಶಕ್ಕೆ ಅನುವಾಗುವಂತೆ ವರದಿ ನೀಡಲು ಹೇಳಿದ್ದರೂ ಹೆದ್ದಾರಿ ಇಲಾಖೆ ಮೌನವಾಗಿದೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸೂಚಿಸಿದ್ದರೂ ಪ್ರಯೋಜನ ಮಾತ್ರ ಆಗಲೇ ಇಲ್ಲ.

Advertisement

10 ಬೇಡಿಕೆಗಳು
– ಪಾದಚಾರಿ ಪಥ ಸಮರ್ಪಕವಾಗಿಲ್ಲ.
-ರಸ್ತೆ ನೀರು ಸರಾಗವಾಗಿ ಚರಂಡಿಗೆ   ಹರಿಯುವಂತಿಲ್ಲ.
– ಫ್ಲೈಒವರ್‌ ನೀರು ಸರ್ವಿಸ್‌ ರಸ್ತೆಗೆ ಬೀಳುತ್ತದೆ.
– ರಸ್ತೆ ದೀಪ ಅಳವಡಿಸಿಲ್ಲ
– ನಗರಕ್ಕೆ ಪ್ರವೇಶ ನೀಡಿಲ್ಲ
– ಶಾಸ್ತ್ರಿ ಸರ್ಕಲ್‌ ಬಳಿ ಫ್ಲೈ ಒವರ್‌ ಅಡಿ ಸ್ಥಳ ಪಾರ್ಕಿಂಗ್‌ಗೆ ಕೊಟ್ಟಿಲ್ಲ
– ಫ್ಲೈ ಒವರ್‌ ಕೆಳಗೆ ಉದ್ಯಾನ ನಿರ್ಮಿಸಿಲ್ಲ.
– ಸರ್ವಿಸ್‌ ರಸ್ತೆ ದುರಸ್ತಿಗೊಳಿಸಿಲ್ಲ.
– ಸರ್ವಿಸ್‌ ರಸ್ತೆಗೆ ಕೂಡುವ ರಸ್ತೆಯ ಸಂಪರ್ಕ ಸುಗಮವಾಗಿಲ್ಲ.
– ಸ್ವಾಗತ ಕಮಾನು ಇಲ್ಲ; ಕುಂದಾಪುರ ನಗರ ಎಂಬ ಫ‌ಲಕವೇ ಇಲ್ಲ

ಸೂಚಿಸಲಾಗಿದೆ
ಎಸಿ ಅಧ್ಯಕ್ಷತೆಯ ಸಮಿತಿ ಸಭೆಗೆ 3 ಬಾರಿ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರು ಹಾಜರಾಗಿಲ್ಲ. ಇನ್ನೊಂದು ದಿನಾಂಕ ನಿಗದಿ ಮಾಡಿ ಸಭೆ ನಡೆಸುವಂತೆ ಎಸಿಯವರಿಗೆ ಸೂಚಿಸಲಾಗಿದೆ. ನಗರಕ್ಕೆ ಪ್ರವೇಶ ನೀಡುವ ಕುರಿತು ತೀರ್ಮಾನ ಆಗಲಿದೆ.
-ಎಂ. ಕೂರ್ಮಾ ರಾವ್‌,
ಜಿಲ್ಲಾಧಿಕಾರಿ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next