Advertisement

ಕುಂದಾಪುರ: ಹೆದ್ದಾರಿಯಲ್ಲಿ ಅಪಾಯಕಾರಿ ಬ್ಯಾರಿಕೇಡ್‌; ಸವಾರರ ಪ್ರಾಣಕ್ಕೆ ಎರವಾಗುವ ಭೀತಿ

01:31 PM Jan 26, 2023 | Team Udayavani |

ಕುಂದಾಪುರ: ಬೈಂದೂರಿನಿಂದ ಕುಂದಾಪುರದವರೆಗಿನ ರಾಷ್ಟ್ರೀಯ ಹೆದ್ದಾರಿ 66ರ ಪ್ರಮುಖ ಜಂಕ್ಷನ್‌ಗಳಲ್ಲಿ ಇಡಲಾದ ಬ್ಯಾರಿಕೇಡ್‌ಗಳ ಪೈಕಿ ಕೆಲವೆಡೆಗಳಲ್ಲಿ ದುಸ್ಥಿತಿಯಲ್ಲಿದ್ದು, ರಾತ್ರಿ ವೇಳೆ ವಾಹನ ಸವಾರರ ಪ್ರಾಣಕ್ಕೆ ಎರವಾಗುವ ಭೀತಿಯೂ ಇದೆ.

Advertisement

ಕುಂದಾಪುರದ ಸಂಗಮ್‌ನಿಂದ ಆರಂಭಗೊಂಡು ಬೈಂದೂರು, ಶಿರೂರು ವರೆಗಿನ ಹೆದ್ದಾರಿಯ ಹಲವೆಡೆಗಳ ಜಂಕ್ಷನ್‌ಗಳಲ್ಲಿ ವಾಹನ ಮುಂಜಾಗ್ರತೆಯಿಂದ ಚಲಿಸಲು, ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ. ಆದರೆ ಕೆಲವೆಡೆಗಳಲ್ಲಿ ಇಡಲಾದ ಬ್ಯಾರಿಕೇಡ್‌ಗಳು ಅರ್ಧಂಬರ್ಧ ತುಂಡಾದ ಸ್ಥಿತಿಯಲ್ಲಿದ್ದು, ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಿಗೆ ತಿಳಿಯದ ಸ್ಥಿತಿಯಿದೆ.

ಸಂಗಮ್‌, ತಲ್ಲೂರು, ಹೆಮ್ಮಾಡಿ, ಮುಳ್ಳಿಕಟ್ಟೆ, ತ್ರಾಸಿ, ಮರವಂತೆ, ನಾವುಂದ, ಕಂಬದಕೋಣೆ, ನಾಗೂರು, ಕಿರಿಮಂಜೇಶ್ವರ, ಉಪ್ಪುಂದ, ಯಡ್ತರೆ, ಬೈಂದೂರು ಹೀಗೆ ಹೆದ್ದಾರಿಯುದ್ದಕ್ಕೂ ಹಲವೆಡೆಗಳಲ್ಲಿ ಬ್ಯಾರಿಕೇಡ್‌ ಗಳನ್ನು ಅಳವಡಿಸಲಾಗಿದೆ. ಆದರೆ ಸಂಗಮ್‌ ಸೇರಿದಂತೆ ವಿವಿಧೆಡೆಗಳಲ್ಲಿ ಕೆಲ ಬ್ಯಾರಿಕೇಡ್‌ಗಳು ದುಸ್ಥಿತಿಯಲ್ಲಿದ್ದು, ವಾಹನಗಳ ಬೆಳಕು ಬಿದ್ದಾಗ ರಿಫ್ಲೆಕ್ಟರ್‌ ಆಗದಿರುವುದರಿಂದ ಅಪಾಯ ಎದುರಾಗುವ ಸಾಧ್ಯತೆಗಳು ಇವೆ.

ಬದಲಾಯಿಸಲು ಆಗ್ರಹ
ಹೆದ್ದಾರಿಯಲ್ಲಿ ಹಗಲು – ರಾತ್ರಿಯೆನ್ನದೆ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಅದರಲ್ಲೂ ಈಗ ಬೆಳಗ್ಗಿನ ಜಾವ ಮಂಜು ಮುಸುಕಿದ ಹೆದ್ದಾರಿಯಲ್ಲಿ ಇಂತಹ ತುಂಡಾದ ಬ್ಯಾರಿಕೇಡ್‌ಗಳಂತೂ ಪ್ರಾಣಕ್ಕೆ ಅಪಾಯ ತಂದೊಡ್ಡುವ ಆತಂಕವೂ ಇದೆ. ದ್ವಿಚಕ್ರ ವಾಹನ ಸವಾರರಂತೂ ಎಚ್ಚರಿಕೆಯಿಂದ ಸಂಚರಿಸಬೇಕಾಗಿದೆ. ಆದಷ್ಟು ಬೇಗ ಸಂಬಂಧಪಟ್ಟ ಪೊಲೀಸ್‌ ಇಲಾಖೆ ಹಾಗೂ ಸ್ಥಳೀಯ ಗ್ರಾ.ಪಂ.ನವರು ಈ ಬಗ್ಗೆ ಎಚ್ಚೆತ್ತುಕೊಂಡು, ಹೊಸ ಬ್ಯಾರಿಕೇಡ್‌ಗಳನ್ನು ಇಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next