Advertisement

ಕುಂದಾಪುರ ಕ್ಷೇತ್ರಕ್ಕೆ ಇನ್ನೂ ಸಿಕ್ಕಿಲ್ಲ ಸಚಿವ ಸ್ಥಾನ

12:27 AM Aug 05, 2021 | Team Udayavani |

ಕುಂದಾಪುರ: ಕುಂದಾಪುರ ವಿಧಾನ ಸಭಾ ಕ್ಷೇತ್ರ ಆರಂಭವಾದಾಗಿನಿಂದ ಇಲ್ಲಿಯತನಕ ಸಚಿವ ಸ್ಥಾನ ದೊರೆಯಲೇ ಇಲ್ಲ. ಆಡಳಿತ ಪಕ್ಷದ ಶಾಸಕರೇ ಆರಿಸಿ ಬಂದರೂ, ಅವರದ್ದೇ ಸರಕಾರ ಆಸ್ತಿತ್ವದಲ್ಲಿ ಇದ್ದರೂ, ಐದು ಬಾರಿ ಶಾಸಕರಾಗಿ ಆಯ್ಕೆಯಾದರೂ ಸಚಿವ ಪದವಿಗೆ ಆಯ್ಕೆ ಮಾಡುವಾಗ ಕುಂದಾಪುರ ಗಣನೆಗೆ ಬಂದಿಲ್ಲ.

Advertisement

ಸ್ಪೀಕರ್‌ ಹುದ್ದೆ :

ಪ್ರತಿಬಾರಿ ಹೊಸ ಸರಕಾರ ಬಂದಾಗ, ಸಚಿವ ಸಂಪುಟ ವಿಸ್ತರಣೆಯಾಗುವಾಗ ಕುಂದಾಪುರ ಕ್ಷೇತ್ರಕ್ಕೆ ಸಚಿವ ಸ್ಥಾನ ದೊರೆಯುತ್ತದೆ ಎಂಬ ನಿರೀಕ್ಷೆ ಇಲ್ಲಿನ ಜನರದ್ದಾಗಿತ್ತು. ಈ ಹಿಂದೆ ಪ್ರತಾಪಚಂದ್ರ ಶೆಟ್ಟಿ ಅವರು ಕಾಂಗ್ರೆಸ್‌ನಿಂದ 4 ಬಾರಿ ಗೆದ್ದಾಗಲೂ ಸಚಿವ ಪದವಿ ದೊರೆತಿರಲಿಲ್ಲ. ವಿಧಾನಪರಿಷತ್‌ ಸ್ಪೀಕರ್‌ ಹುದ್ದೆ ದೊರೆತಿದೆ.

ಕುಂದಾಪುರ ಕ್ಷೇತ್ರವನ್ನು ಸಚಿವ ಪದವಿಯ ಸಂದರ್ಭ ಎಲ್ಲ ಪಕ್ಷಗಳ ಸರಕಾರಗಳೂ ಕಡೆಗಣಿಸಿವೆ. ಹಾಗಂತ ಅಭಿವೃದ್ಧಿಯಲ್ಲಿ ಕುಂದಾಪುರ ಹಿಂದೆ ಬಿದ್ದಿಲ್ಲ. ಸಚಿವ ಪದವಿ ದೊರೆತಿದ್ದರೆ, ರಾಜ್ಯದ ಅಥವ ಕೇಂದ್ರದ ದೊಡ್ಡ ಯೋಜನೆಗಳು ಅನುಷ್ಠಾನವಾಗುವ ಸಾಧ್ಯತೆಯಿತ್ತು. ಎಂಜಿನಿಯರಿಂಗ್‌, ವೈದ್ಯಕೀಯ ದಂತಹ ಕಾಲೇಜು, ಬೃಹತ್‌ ಕೈಗಾರಿಕೆ, ಪ್ರವಾಸೋ ದ್ಯಮದಲ್ಲಿ ಅಭಿವೃದ್ಧಿ ನಿರೀಕ್ಷಿಸಬಹುದಿತ್ತು.

ಉಡುಪಿ ಜಿಲ್ಲೆಯಲ್ಲಿ ಉಡುಪಿ, ಕಾರ್ಕಳ, ಕಾಪು, ಬ್ರಹ್ಮಾವರ ವಿಧಾನಸಭಾ ಕ್ಷೇತ್ರಗಳಿಗೆ ಸಚಿವ ಪದವಿ ದೊರೆತಿದೆ. ಬೈಂದೂರು ಕ್ಷೇತ್ರದ ಹಿಂದಿನ ಶಾಸಕರಿಗೆ ಕೆಎಸ್‌ಆರ್‌ಟಿಸಿ ನಿಗಮ ಅಧ್ಯಕ್ಷತೆ ದೊರೆತಿದೆ.

Advertisement

ಸಚಿವಗಿರಿಗೆ ಮನವಿ:

ಬುಧವಾರ ಬೆಳಗ್ಗೆ ಸಚಿವರ ಪಟ್ಟಿ ಅಂತಿಮವಾಗುವ ಮುನ್ನ  ಕುದಾಪುರದಿಂದ ತೆರಳಿದ್ದ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಅಭಿಮಾನಿಗಳು ಕುಂದಾಪುರ ಕ್ಷೇತ್ರವನ್ನು ಸಚಿವಗಿರಿಗೆ ಪರಗಣಿಸಬೇಕೆಂದು ಮೌನವಾಗಿ ಹೂ ಹಿಡಿದು, ಫ‌ಲಕ ಹಿಡಿದು ಒತ್ತಾಯಿಸಿದರು. ಇಷ್ಟು ಮಾತ್ರವಲ್ಲದೇ  ಸತತ ಐದು ಬಾರಿ ಗೆದ್ದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಕ್ಯಾಬಿನೆಟ್‌ ದರ್ಜೆ ಸ್ಥಾನ ಪಡೆಯಬೇಕು ಎಂದು ಜಾಲತಾಣದಲ್ಲಿ ಅಭಿಯಾನ ನಡೆದಿತ್ತು. ಬಹಿರಂಗ ಪತ್ರಗಳನ್ನು ಬರೆಯಲಾಗಿತು. ವಾಟ್ಸ್‌ಆ್ಯಪ್‌, ಫೇಸ್‌ಬುಕ್‌ ಮೊದಲಾದೆಡೆ ಹಾಲಾಡಿ ಅವರ ಕುರಿತು ಬರಹ, ಚಿತ್ರಗಳು, ಸಚಿವ ಪದವಿ ಕೊಡಿ ಎಂಬ ಮನವಿಗಳು ಹರಿದಾಡಿತ್ತು. ಹಾಲಾಡಿ ಅವರ ಅನುಭವ ಹಾಗೂ ಹಿರಿತನಕ್ಕೆ ಬೆಲೆ ಕೊಡಬೇಕೆಂಬ ಒತ್ತಾಯ ಕೇಳಿ ಬಂದಿತ್ತು.

ಹಾಲಾಡಿ ನಿರಾಳ:

ರಾಜ್ಯ ರಾಜಕಾರಣದಲ್ಲಿ ಇಷ್ಟೆಲ್ಲ ಬೆಳವಣಿಗೆ, ವಿಪ್ಲವಗಳು ನಡೆಯುತ್ತಿದ್ದರೂ, ಹಾಲಾಡಿ ಅವರು ಮಾತ್ರ ಊರಲ್ಲೇ ಇದ್ದಾರೆ. ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆ, ಪ್ರಮಾಣವಚನ ಸ್ವೀಕಾರ, ಸಚಿವರ ಪ್ರಮಾಣವಚನ ಸ್ವೀಕಾರ ಇತ್ಯಾದಿಗೆ ತೆರಳಲೇ ಇಲ್ಲ. ಸಚಿವ ಪದವಿಗೆ ಯಾವುದೇ ಲಾಬಿ ಮಾಡುವುದಿಲ್ಲ , ಅದಕ್ಕಿರುವ ಅರ್ಹತೆ ಏನು ಎಂದೂ ನನಗೆ ತಿಳಿದಿಲ್ಲ ಎಂದೇ ಈವರೆಗೂ ಹೇಳಿಕೊಂಡು ಬಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next