Advertisement

ಶಿರೂರು ಟೋಲ್‌ ಆರಂಭವಾಯ್ತು; ಕಾಮಗಾರಿ ಮುಗಿದಿಲ್ಲ

01:22 AM Feb 21, 2020 | Sriram |

ಕುಂದಾಪುರ: ರಾಷ್ಟ್ರೀಯ ಹೆದ್ದಾರಿ 66 ರ ಶಿರೂರಿನಲ್ಲಿ ವಾರದ ಹಿಂದಷ್ಟೇ ಟೋಲ್‌ ಸಂಗ್ರಹ ಆರಂಭಗೊಂಡಿದೆ. ಆದರೆ ಕುಂದಾಪುರದಿಂದ ಬೈಂದೂರುವರೆಗಿನ ಹಲವೆಡೆಗಳಲ್ಲಿ ಸರ್ವಿಸ್‌ ರಸ್ತೆ, ಬಸ್‌ ನಿಲ್ದಾಣ, ಬೀದಿ ದೀಪ ಅಳವಡಿಕೆ ಕಾರ್ಯ ಸೇರಿದಂತೆ ಸಾಕಷ್ಟು ಕಾಮಗಾರಿ ಬಾಕಿ ಇದೆ. ಇಷ್ಟೆಲ್ಲ ಕಾಮಗಾರಿ ಬಾಕಿ ಇದ್ದರೂ, ಟೋಲ್‌ ಸಂಗ್ರಹ ಆರಂಭಿಸಿರುವುದು ಎಷ್ಟು ಸರಿ ಎನ್ನುವುದು ನಾಗರಿಕರ ಪ್ರಶ್ನೆಯಾಗಿದೆ.

Advertisement

ಕುಂದಾಪುರದಿಂದ ಗೋವಾ ಗಡಿವರೆಗಿನ 189.6 ಕಿ.ಮೀ. ಉದ್ದದ ಚತುಷ್ಪಥಕ್ಕೆ 2,639 ಕೋ.ರೂ. ಮಂಜೂರಾಗಿತ್ತು. ಈ ಪೈಕಿ ಕುಂದಾಪುರದಿಂದ ಹೊನ್ನಾವರ ವರೆಗಿನ ಕಾಮಗಾರಿಯ ಗುತ್ತಿಗೆಯ ಹೊಣೆಯನ್ನು ಐಆರ್‌ಬಿ ಸಂಸ್ಥೆಗೆ ವಹಿಸಲಾಗಿದೆ. ಕುಂದಾಪುರದಿಂದ ಶಿರೂರುವರೆಗಿನ 43 ಕಿ.ಮೀ. ವರೆಗಿನ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ ಎಂದು ಹೇಳಿ ಐಆರ್‌ಬಿ ಸಂಸ್ಥೆಯು ಶಿರೂರಿನಲ್ಲಿ ಟೋಲ್‌ ಸಂಗ್ರಹವನ್ನು ಆರಂಭಿಸಿದೆ.

ಬೀದಿ ದೀಪ ಬೇಕು
ಹೇರಿಕುದ್ರುವಿನಲ್ಲಿ ಅಂಡರ್‌ಪಾಸ್‌ ನಿರ್ಮಾಣಗೊಂಡಿದೆ. ಆದರೆ ಇಲ್ಲಿ ಅಂಡರ್‌ಪಾಸ್‌ ಮೇಲೆ ಬೀದಿ ದೀಪ ಹಾಕಲಾಗಿದೆ. ಇನ್ನು ಅಂಡರ್‌ಪಾಸ್‌ ಕೆಳಗೆ ವಾಹನಗಳು ಪಾಸ್‌ ಆಗುವಲ್ಲಿ ಯಾವುದೇ ಬೀದಿ ದೀಪಗಳನ್ನು ಹಾಕಿಲ್ಲ. ರಾತ್ರಿ ವೇಳೆ ಪಾದಚಾರಿಗಳಿಗೆ, ವಾಹನ ಸವಾರರಿಗೆ ಆತಂಕ ಹುಟ್ಟಿಸುವಂತಿದೆ.

ತಲ್ಲೂರು: ಬಸ್‌ ನಿಲ್ದಾಣ
ಕೊಲ್ಲೂರು, ಬೈಂದೂರು, ಕುಂದಾಪುರ ಮತ್ತಿತರೆಡೆಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಜಂಕ್ಷನ್‌ ತಲ್ಲೂರು. ಆದರೆ ಇಲ್ಲಿ ಎರಡು ಕಡೆಗಳಲ್ಲೂ ಇನ್ನೂ ಸರ್ವಿಸ್‌ ರಸ್ತೆ ಬೇಡಿಕೆ ಈಡೇರಿಲ್ಲ. ಇನ್ನು ಮೊದಲಿದ್ದ ಬಸ್‌ ನಿಲ್ದಾಣಗಳನ್ನು ಕಾಮಗಾರಿ ಸಲುವಾಗಿ ತೆಗೆದಿದ್ದು, ಈಗ ಕಾಮಗಾರಿ ಪೂರ್ಣಗೊಂಡರೂ, ಬಸ್‌ ನಿಲ್ದಾಣವಿಲ್ಲದೆ ಜನರು ಸಮಸ್ಯೆ ಅನುಭವಿಸುತ್ತಿದ್ದಾರೆ. ಸುಡುವ ಬಿಸಿಲಿನಲ್ಲಿ ಜನ ಯಾತನೆ ಪಡುವಂತಾಗಿದೆ. ಜಂಕ್ಷನ್‌ನಲ್ಲಿ ಬೀದಿ ದೀಪ ಕೂಡ ಇಲ್ಲ. ರಾತ್ರಿ ಕತ್ತಲಿದ್ದು, ಅಪಘಾತಕ್ಕೂ ಎಡೆಮಾಡಿಕೊಡುವ ಸಂಭವವಿದೆ. ಇನ್ನೂ ಹೆದ್ದಾರಿ ಸಮೀಪ ಐಆರ್‌ಬಿಯವರೇ ನಿರ್ಮಿಸಿದ ಕೃತಕ ಕೆರೆಯನ್ನು ಇನ್ನೂ ಮುಚ್ಚಿಲ್ಲ. ಮಳೆಗಾಲದಲ್ಲಿ ಮತ್ತೆ ಸಮಸ್ಯೆ ಸೃಷ್ಟಿಸುವ ಸಂಭವವಿದೆ. ಹೆಮ್ಮಾಡಿಯಲ್ಲಿಯೂ ಬಸ್‌ ನಿಲ್ದಾಣವಿಲ್ಲದೆ ನಾಗರಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ.

ನದಿಗಳಿಗೆ ಹೊಸ ನಾಮಕರಣ..!
ಹೆದ್ದಾರಿಯಲ್ಲಿರುವ ಸೇತುವೆಗಳ ಸಮೀಪ ಪಂಚಗಂಗಾವಳಿ ನದಿಗಳ ಹೆಸರುಗಳುಳ್ಳ ನಾಮಫಲಕಗಳನ್ನು ಹಾಕಲಾಗಿದೆ. ಆದರೆ ಈ ನಾಮಫಲಕಗಳಲ್ಲಿ ನದಿಗಳ ಹೆಸರುಗಳ ಬದಲು ನದಿ ಹಾದು ಹೋಗುವ ಊರಿನ ಹೆಸರನ್ನು ಹಾಕಲಾಗಿದೆ. ವಾರಾಹಿ ನದಿಗೆ ಹಾಲಾಡಿ ನದಿ ಎಂದು, ಸೌಪರ್ಣಿಕಾ ನದಿಗೆ ಕೊಲ್ಲೂರು ನದಿ ಎನ್ನುವ ಹೆಸರನ್ನು ಅಲ್ಲಿ ಹಾಕಲಾಗಿದೆ. ಈ ನದಿಗಳನ್ನು ಈ ಹೆಸರಿನಿಂದಲೂ ಕರೆಯಲಾಗುತ್ತಿದ್ದರೂ, ಅದಕ್ಕೊಂದು ಚೆಂದದ ಹೆಸರಿದ್ದರೂ, ಹೀಗೆ ಈ ಹೆಸರನ್ನು ಹಾಕಿರುವುದು ಎಷ್ಟು ಸರಿ ಎನ್ನುವುದು ಜನರ ಪ್ರಶ್ನೆಯಾಗಿದೆ.

Advertisement

ಮುಳ್ಳಿಕಟ್ಟೆ : ವಿಶ್ರಾಂತಿ ವಲಯ
ನದಿ – ಸಮುದ್ರಗಳ ನಡುವೆ ಹೆದ್ದಾರಿ ಹಾದು ಹೋಗುವ ಮರವಂತೆಯ ಕಡಲ ತೀರದ ಬಳಿ ನಿತ್ಯ ಲಾರಿಗಳು ಸಾಲುಗಟ್ಟಿ ನಿಂತಿರುತ್ತವೆ. ಇದರಿಂದ ಇಲ್ಲಿ ಸಂಚರಿಸುವರಿಗೆ ಕಡಲು -ನದಿಗಳ ಸಂಗಮ ದೃಶ್ಯ ಆಸ್ವಾದಿಸುವ ಅವಕಾಶ ಸಿಗುತ್ತಿಲ್ಲ. ಅದಕ್ಕಾಗಿ ಮುಳ್ಳಿಕಟ್ಟೆಯಲ್ಲಿ ವಿಶ್ರಾಂತಿ ವಲಯ (ರೆಸ್ಟ್‌ ಏರಿಯ) ನಿರ್ಮಿಸುವ ಯೋಜನೆಯಿದ್ದು, ಆದರೆ ಅದಕ್ಕಾಗಿ ಜಾಗ ಎಲ್ಲ ನಿಗದಿಯಾಗಿದ್ದರೂ, ಕಾಮಗಾರಿ ಮಾತ್ರ ಆಗಿಲ್ಲ.

ಎಲ್ಲೆಲ್ಲ ಸರ್ವಿಸ್‌ ರಸ್ತೆ ಬಾಕಿ
ಹೆಮ್ಮಾಡಿಯಿಂದ ಜಾಲಾಡಿಯವರೆಗೆ ಹಾಗೂ ಮತ್ತೂಂದು ಕಡೆ ಕನ್ನಡಕುದ್ರುವರೆಗೆ ಸರ್ವಿಸ್‌ ರಸ್ತೆ ಬೇಡಿಕೆಗಾಗಿ ಜನ ಹೋರಾಟ ಮಾಡುತ್ತಿದ್ದರೂ, ಇನ್ನೂ ಈಡೇರಿಸಿಲ್ಲ. ತಲ್ಲೂರು, ತ್ರಾಸಿ, ನಾವುಂದದಲ್ಲಿಯೂ ಸರ್ವಿಸ್‌ ರಸ್ತೆ ಬೇಡಿಕೆಯಿದೆ. ನಾಯ್ಕನಕಟ್ಟೆ ಒಂದು ಕಡೆ ಆಗಿದೆ, ಮತ್ತೂಂದು ಕಡೆ ಸರ್ವಿಸ್‌ ರಸ್ತೆ ಆಗಬೇಕಿದೆ. ಉಪ್ಪುಂದದಲ್ಲಿ 2 ಕಡೆ ಸರ್ವಿಸ್‌ ರಸ್ತೆ ಆಗಿದ್ದರೂ, ತಲಾ 100 ಮೀ. ಕಾಮಗಾರಿ ಬಾಕಿ ಇದೆ. ಬೈಂದೂರು ಸರ್ವಿಸ್‌ ರಸ್ತೆ ಆಗಿದೆ. ಆದರೆ ಶಿರೂರಿನಲ್ಲಿ ಈಗಷ್ಟೇ ಕಾಮಗಾರಿ ನಡೆಯುತ್ತಿದೆ.

ಪ್ರಸ್ತಾವನೆ ಸಲ್ಲಿಕೆ
ತಲ್ಲೂರು, ಹೆಮ್ಮಾಡಿಯಲ್ಲಿ ಸರ್ವಿಸ್‌ ರಸ್ತೆಗೆ ಹೆದ್ದಾರಿ ಪ್ರಾಧಿಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ತ್ರಾಸಿ, ನಾವುಂದ, ಕಿರಿಮಂಜೇಶ್ವರದಲ್ಲಿ ಭೂಸ್ವಾಧೀನ ಪ್ರಕ್ರಿಯೆ ಆಗಬೇಕಿದೆ. ನಾಯ್ಕನಕಟ್ಟೆಯಲ್ಲಿ ಒಂದು ಕಡೆ ಪೈಪ್‌ಲೈನ್‌ ಪಂಚಾಯತ್‌ನಿಂದ ತೆರವು ಮಾಡಿಕೊಡಬೇಕಿದೆ. ಇನ್ನೂ ಬೀದಿ ದೀಪ ಸುಮಾರು 9 ಕಿ.ಮೀ. ವರೆಗೆ ಅಳವಡಿಕೆ ಕಾರ್ಯ ಬಾಕಿ ಇದೆ. ಸದ್ಯದಲ್ಲಿಯೇ ಆಗಲಿದೆ. ಹೆಮ್ಮಾಡಿಯಲ್ಲಿ ಕಾಮಗಾರಿ ಆರಂಭಿಸಿದರೂ, ಸರ್ವಿಸ್‌ ರಸ್ತೆ ಆಗುವವರೆಗೆ ಸ್ಥಗಿತಗೊಳಿಸಲಾಗಿದೆ. ತಲ್ಲೂರಿನಲ್ಲಿ ಇನ್ನೂ ಜಾಗ ನಿಗದಿಯಾಗಿಲ್ಲ.
-ಸುರೇಶ್‌ ಶೆಟ್ಟಿ, ಸೈಟ್‌ ಎಂಜಿನಿಯರ್‌ ಐಆರ್‌ಬಿ

ಬೀದಿ ದೀಪ ತತ್‌ಕ್ಷಣ ಅಳವಡಿಕೆ
ಎಲ್ಲೆಲ್ಲ ಸರ್ವಿಸ್‌ ರಸ್ತೆಗಳಿಗೆ ಭೂಸ್ವಾಧೀನಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆಯೋ, ಆ ಪ್ರಕ್ರಿಯೆಗಳನ್ನು ಮಾಡಲಾಗುತ್ತಿದೆ. ಮುಳ್ಳಿಕಟ್ಟೆಯಲ್ಲಿ ರೆಸ್ಟ್‌ ಏರಿಯಾಕ್ಕೆ ಜಾಗವನ್ನು ನಿಗದಿಪಡಿಸಲಾಗಿದೆ. ಇನ್ನು ಬೀದಿ ದೀಪ ಅಳವಡಿಕೆ ಕುರಿತಂತೆ ಸಂಬಂಧಪಟ್ಟ ಐಆರ್‌ಬಿ ಸಂಸ್ಥೆಗೆ ತತ್‌ಕ್ಷಣ ಕ್ರಮ ವಹಿಸುವಂತೆ ಸೂಚಿಸಲಾಗುವುದು.
– ಕೆ. ರಾಜು, ಸಹಾಯಕ ಆಯುಕ್ತ, ಕುಂದಾಪುರ ಉಪ ವಿಭಾಗ

– ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next