Advertisement

ಕುಂದಾಪುರ: ಸಾರ್ವಜನಿಕ ಪಾರ್ಕಿಂಗ್‌ಗೆ ದಿಗ್ಬಂಧನ!

10:34 AM May 02, 2022 | Team Udayavani |

ಕುಂದಾಪುರ: ಪಾರ್ಕಿಂಗ್‌ ಸಮಸ್ಯೆಯಿಂದ ಬಳಲುತ್ತಿರುವ ನಗರದ ನಟ್ಟ ನಡುವೆ ಖಾಸಗಿ ಸಾರಿಗೆ ಸಂಸ್ಥೆಯೊಂದು ಸಾರ್ವಜನಿಕ ಸ್ಥಳದಲ್ಲಿ ತಳ್ಳುಗಾಡಿ, ಬೃಹತ್‌ ಗಾತ್ರದ ಟಯರ್‌ಗಳನ್ನು ಇರಿಸಿ ಸಾರ್ವಜನಿಕ ಪಾರ್ಕಿಂಗ್‌ಗೆ ದಿಗ್ಬಂಧನ ಹೇರುತ್ತಿರುವ ಬಗ್ಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗುತ್ತಿದೆ.

Advertisement

ಬೆದರಿಕೆ

ಅತ್ಯಂತ ಜನ ನಿಬಿಡ ಪ್ರದೇಶವಾದ ಎರಡು ಪ್ರಮುಖ ಬೀದಿಗಳಲ್ಲಿ ಅನೇಕರ ಕಚೇರಿ, ಅಂಗಡಿ ಮುಂಭಾಗ ಪುರಸಭೆ ವ್ಯಾಪ್ತಿಗೆ ಒಳ ಪಡುವ, ಸಾರ್ವಜನಿಕರು ವಾಹನ ಪಾರ್ಕಿಂಗ್‌ ಮಾಡಬಹುದಾದ ವಿಶಾಲ ಸ್ಥಳವಿದೆ. ಆದರೆ ಅದು ತಮ್ಮ ಸಂಸ್ಥೆಗೆ ಸೇರಿದ ಸಾರಿಗೆ ವಾಹನಗಳನ್ನು ಮಾತ್ರ ಪಾರ್ಕಿಂಗ್‌ ಮಾಡುವ, ತಮ್ಮದೇ ಖಾಸಗಿ ಜಾಗ ಎಂದು ಜಿದ್ದಿಗೆ ಬಿದ್ದಂತಿರುವ ಅಂಗಡಿಗಳ ಮಾಲಕರು ಸುಖಾ ಸುಮ್ಮನೆ ಟಯರ್‌, ತಳ್ಳು ಗಾಡಿ ಅಥವಾ ತಮಗೆ ಸೇರಿದ ಕಾರೊಂದನ್ನು ಇರಿಸಿ ಸಾರ್ವಜನಿಕ ವಾಹನಗಳ ಪಾರ್ಕಿಂಗ್‌ಗೆ ಅಡ್ಡಿ ಮಾಡುವ ಘಟನೆ ದಿನಂಪ್ರತಿ ಹಲವು ಕಡೆ ಜರಗುತ್ತಿದೆ.

ದಂಡ

ದೊಡ್ಡ ದೊಡ್ಡ ಮಳಿಗೆಯವರೂ ಸ್ವಂತ ಪಾರ್ಕಿಂಗ್‌ ವ್ಯವಸ್ಥೆ ಮಾಡಿಕೊಳ್ಳದೇ, ಇದ್ದ ಪಾರ್ಕಿಂಗ್‌ ವ್ಯವಸ್ಥೆಯಲ್ಲೂ ಅಂಗಡಿ ಮಾಡಿ ಸಾರ್ವಜನಿಕರು ವಾಹನ ನಿಲ್ಲಿಸಲು ಬಂದಾಗ ಭದ್ರತಾ ಸಿಬಂದಿಯನ್ನು ಛೂ ಬಿಡುವ ಪ್ರಸಂಗ ನಡೆಯುತ್ತಿವೆ. ಸಣ್ಣ ಪುಟ್ಟ ಅಂಗಡಿಗಳಿಗೂ ಬೇರೆಡೆ ನಿಲ್ಲಿಸಿ ಹೋಗುವಂತಿಲ್ಲ ಎಂಬ ಸ್ಥಿತಿಯಿದೆ.

Advertisement

ಕಾಣುವುದಿಲ್ಲ

ಹೇಳಿಕೇಳಿ ಸಂಚಾರಿ ಠಾಣೆಗೆ ಹತ್ತಿರ ವಿರುವ ಈ ಮುಖ್ಯ ರಸ್ತೆಯಲ್ಲಿ ಟ್ರಾಫಿಕ್‌ ಠಾಣೆಯ ಜೀಪುಗಳು, ಸಂಚಾರಿ ಪೊಲೀಸರು ದಿನಕ್ಕೆ ಹಲವು ಬಾರಿ ರೌಂಡ್‌ನ‌ಲ್ಲಿರುತ್ತಾರೆ. ಆದರೆ ಕಣ್ಣಿಗೆ ರಾಚುವಂತೆ, ಅಕ್ರಮವಾಗಿ ದಿಗ್ಬಂಧಿಸಲ್ಪಟ್ಟ ಈ ಸಾರ್ವ ಜನಿಕ ಸ್ಥಳ ಅವರ ದೃಷ್ಟಿಗೆ ಗೋಚರಿಸಿಲ್ಲ. ರಸ್ತೆಯ ಅಂಚಿನಲ್ಲಿ ಪಾರ್ಕಿಂಗ್‌ ಮಾಡಿದ್ದಾರೆ ಎನ್ನುವ ಒಂದೇ ಕಾರಣಕ್ಕೆ ಅಂತಾರಾಷ್ಟ್ರೀಯ ಮಟ್ಟದ ಅಪರಾಧ ಎಂಬಂತೆ ವಾಹನಗಳಿಗೆ ಬೀಗ ಜಡಿದು ಬೇಕಾಬಿಟ್ಟಿ ದಂಡ ವಿಧಿಸುವ ಟ್ರಾಫಿಕ್‌ ಪೊಲೀಸರು ಸಾರ್ವಜನಿಕ ಸ್ಥಳವನ್ನು ಆಕ್ರಮಿಸಿರುವ ಸಂಸ್ಥೆಗಳ ಬಗ್ಗೆ ಸೊಲ್ಲೆತ್ತದಿರುವುದು ವಿಚಿತ್ರವಾಗಿದೆ.

ಸರಕು ಇಳಿಸುವುದೇ ಕಷ್ಟ

ಸಾರಿಗೆಯ ವಾಹನಗಳು ಹಗಲುಹೊತ್ತಿನಲ್ಲಿ ನಗರ ದೊಳಗೆ ಪ್ರವೇಶಿಸಿ ವಾಹನದಲ್ಲಿ ಚಾಲಕರು ಇದ್ದರೂ, ವಾಹನ ಚಾಲನ ಸ್ಥಿತಿಯಲ್ಲಿ ಇದ್ದರೂ ಲೋಡ್‌ ಆನ್‌ಲೋಡ್‌ ಮಾಡುವಂತಿಲ್ಲ. ಹಾಗಂತ ಸಂಚಾರ ಠಾಣೆ ಪೊಲೀಸರು ಹೇಳುತ್ತಾರೆ. ಆದರೆ ಸ್ಥಿತಿವಂತರ ಮಟ್ಟಿಗೆ ತಮ್ಮ ಸಾರಿಗೆ ವಾಹನಗಳು ಹಗಲುಹೊತ್ತಿನಲ್ಲಿ ಯಾವಾಗಲೂ ಬರಲಿ ತಮಗೆ ಯಾವುದೇ ಕಾನೂನು ಬಾಧಿಸದು ಎನ್ನುವಷ್ಟರ ಮಟ್ಟಿಗೆ ಸಾರ್ವಜನಿಕ ಸ್ಥಳಕ್ಕೆ ನಿರ್ಬಂಧ ಹೇರಿದ್ದಾರೆ.

ಅಣಕ

ಈಗಾಗಲೇ ಇಲಾಖೆಗಳ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ ಈ ಆಕ್ರಮ ಪ್ರಸ್ತಾವಿಸಲ್ಪಟ್ಟು ಇಲಾಖೆಯವರು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರೂ, ಇಷ್ಟರ ತನಕ ತಳ್ಳುಗಾಡಿ ಟಯರ್‌ಗಳು ಮಾತ್ರ ಯಥಾಸ್ಥಿತಿಯಲ್ಲಿವೆ. ಈ ಕುರಿತು ‘ಉದಯವಾಣಿ ಸುದಿನ’ ಸರಣಿ ವರದಿ ಪ್ರಕಟಿಸಿದ್ದು ಪುರಸಭೆ ಸಾಮಾನ್ಯ ಸಭೆಯಲ್ಲೂ ಚರ್ಚೆಗಳಾಗಿವೆ. ಪಾರ್ಕಿಂಗ್‌ಗೆ ಜಾಗ ಗುರುತಿಸಲಾಗಿದೆ. ಆದರೆ ಇನ್ನೂ ಅಂತಿಮ ಆಗಿಲ್ಲ. ಪೊಲೀಸರಾಗಲೀ, ಪುರಸಭೆಯಾಗಲೀ ಸಾರ್ವಜನಿಕ ಅಭಿಪ್ರಾಯಕ್ಕೆ ಸಭೆ ಕರೆದಿಲ್ಲ.

ಪ್ರತ್ಯೇಕ ಸಭೆ

ಸಂಚಾರ ದಟ್ಟಣೆ ಕುರಿತು ಪ್ರತ್ಯೇಕ ಸಭೆ ಕರೆಯಲು ಚಿಂತಿಸಲಾಗಿದೆ. ಪಾರ್ಕಿಂಗ್‌ಗೆ ಜಾಗ ಗುರುತಿಸಲಾಗಿದೆ. ಇನ್ನೂ ಅಂತಿಮಗೊಂಡಿಲ್ಲ –ವೀಣಾ ಭಾಸ್ಕರ ಮೆಂಡನ್,ಅಧ್ಯಕ್ಷರು, ಪುರಸಭೆ

Advertisement

Udayavani is now on Telegram. Click here to join our channel and stay updated with the latest news.

Next