ದೇವನಹಳ್ಳಿ: ತಾಲೂಕಿನ ಕುಂದಾಣ ಹೋಬಳಿಯ ತೈಲಗೆರೆ ಗ್ರಾಮದ ಸರ್ವೆ ನಂ. 110ರಲ್ಲಿ 80 ಎಕರೆ 20 ಗುಂಟೆ ಜಾಗವನ್ನು 20 ಜನರ ಹೆಸರಿಗೆ ಅಕ್ರಮವಾಗಿ ನಮೂದು ಮಾಡಿರುವ ಆರೋಪದ ಮೇಲೆ ರಾಜಸ್ವ ನಿರೀಕ್ಷಕ ಟಿ.ಎನ್.ಮಂಜುನಾಥ್ ಅವರನ್ನು ಅಮಾನತು ಮಾಡಬೇಕು ಎಂದು ಆರ್ ಟಿಐ ಕಾರ್ಯಕರ್ತರಾದ ಬೀರಸಂದ್ರ ರವಿ, ಕೊಯಿರಾ ಚಿಕ್ಕೇಗೌಡ ಆಗ್ರಹಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ದಾಖಲೆ ಪ್ರದರ್ಶಿಸಿ ಮಾತನಾಡಿದ ಅವರು, ಕುಂದಾಣನಾಡಕಚೇರಿಯಲ್ಲಿ ಅಭಿಲೇಖಾಲಯದ ವಿಷಯ ನಿರ್ವಾಹಕಿ ಲಾವಣ್ಯಾರಿಂದ ಬಲವಂತವಾಗಿಬೀರುವಿನ ಬೀಗದ ಕೀ ತೆಗೆದುಕೊಂಡು ಯಾರಗಮನಕ್ಕೂ ತಾರದೆ ಕಾರಹಳ್ಳಿ, ಮೂಡಿಗಾನಹಳ್ಳಿ, ತೈಲಗೆರೆ ಮತ್ತು ಮೀಸಗಾನಹಳ್ಳಿ ಗ್ರಾಮದ 1993-94ರ ಕೈಬರಹದ ಪಹಣಿ ಪುಸ್ತಕ ತೆಗೆದುಕೊಂಡು ಹೋಗಿದ್ದಾರೆ ಎಂದು ದೂರಿದ್ದಾರೆ.
ಇಲ್ಲ ಎಂದು ಸಮಜಾಯಿಸಿ: ಈ ಬಗ್ಗೆ ಕಚೇರಿಯಲ್ಲಿ ಅಟಲ್ ಜನಸ್ನೇಹಿ ಕೇಂದ್ರದ ಕಂಪ್ಯೂಟರ್‌ಆಪರೇಟರ್ ವಿಜಯಕುಮಾರ್ ಅವರನ್ನುವಿಚಾರಿಸಿದಾಗ ಅಲ್ಮೇರಾದಲ್ಲಿದ್ದಂತಹ ಕೈಬರಹದ ಪಹಣಿಗಳನ್ನು ರಾಜಸ್ವ ನಿರೀಕ್ಷಕರು ತೆಗೆದುಕೊಂಡು ಹೋಗಿದ್ದಾರೆಂದು ಮಾಹಿತಿ ನೀಡಿದ್ದಾರೆ. ಮತ್ತೆರಾಜ್ಯಸ್ವ ನಿರೀಕ್ಷಕರನ್ನು ಕೇಳಿದ್ರೆ, ನನ್ನ ಬಳಿಯಲ್ಲಿ ಯಾವುದೇ ಕೈಬರಹದ ಪಹಣಿ ಪುಸ್ತಕಗಳು ಇಲ್ಲ ಎಂದು ಸಮಜಾಯಿಸಿ ನೀಡಿದ್ದಾರೆ ಎಂದು ಕಾರ್ಯಕರ್ತರು ತಿಳಿಸಿದ್ದಾರೆ.
ಅನುಮತಿ ಇಲ್ಲದೆ ತಿದ್ದುಪಡಿ?: ಸರ್ವೆ ನಂ. 110 ಗೋಮಾಳವಾಗಿದ್ದು, ಅಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ತೈಲಗೆರೆ ಗ್ರಾಮದ ರಾಜಸ್ವ ನಿರೀಕ್ಷಕ ಅವರ ಕುಟುಂಬಸ್ಥರ ಹೆಸರಿನಲ್ಲಿ ಹಾಗೂ 20 ಅನಾಮಧೇಯ ಹೆಸರಿನಲ್ಲಿ ಉಪತಹಶೀಲ್ದಾರ್ ಅವರ ಅನುಮತಿ ಇಲ್ಲದೆ, ತಹಶೀಲ್ದಾರ್ ಗಮನಕ್ಕೂ ತಾರದೆ ಪಹಣಿಗಳಲ್ಲಿ ತಿದ್ದಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಇಷ್ಟೆಲ್ಲಾ ಅವ್ಯವಹಾರ ಆಗಿರುವುದರಿಂದ ಕೂಡಲೇ ಅವರನ್ನು ಅಮಾನತ್ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಇವರು ದೊಡ್ಡಬಳ್ಳಾಪುರ, ಹೊಸಕೋಟೆ ತಾಲೂಕಿನ ರಾಜಸ್ವ ನಿರೀಕ್ಷಕರಾಗಿದ್ದಾಗ ಅಮಾನತು ಗೊಂಡಿದ್ದರು. ಇವರಿಗೆ ತಹಶೀಲ್ದಾರ್ ಕೂಡ ನೋಟಿಸ್ ನೀಡಿದ್ದು, ಜಿಲ್ಲಾಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.