ಕುಮಟಾ : ತಾಲೂಕಿನಾದ್ಯಂತ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಕಳೆದೆರಡು ದಿನಗಳಿಂದ ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದ ನದಿ, ಹಳ್ಳ , ಕೊಳ್ಳ, ಗದ್ದೆಗಳು ಮಳೆ ನೀರಿನಿಂದ ತುಂಬಿಕೊಂಡಿದೆ.
ಬುಧವಾರ ಸಂಜೆ ಆರಂಭಗೊಂಡ ಮಳೆಯು ಶುಕ್ರವಾರದವರೆಗೂ ಮುಂದುವರೆದಿದೆ. ಬುಧವಾರ ಮಧ್ಯಾಹ್ನ ಮತ್ತು ಸಂಜೆ ವೇಳೆ ತುಂತುರು ಮಳೆ ಸುರಿದಿತ್ತು. ತಡರಾತ್ರಿ ಬಿರುಸಾಗಿ ಮಳೆಯಾಗಿತ್ತು. ಗುರುವಾರ ನಸುಕಿನ ಜಾವ ಆರಂಭಗೊಂಡ ತುಂತುರು ಮಳೆ ಮುಂದುವರೆಯುತ್ತಲೇ ಇದೆ. ದಟ್ಟ ಕಾರ್ಮೋಡ ಕವಿದು, ತಂಗಾಳಿ ಬೀಸುತ್ತಿದ್ದು , ಬಿಸಿಲು ಕಾಣದೇ ವಾತಾವರಣ ಸಂಪೂರ್ಣ ತಂಪಾಗಿದೆ. ಮೂಲೆ ಸೇರಿದ್ದ ಛತ್ರಿಗಳು, ಸ್ವೆಟರ್ ಮತ್ತು ಜರ್ಕಿನ್ ಜಡಿ ಮಳೆ ಮತ್ತು ತೀವ್ರ ಚಳಿಯಿಂದಾಗಿ ಹೊರಬಂದಿವೆ.
ಮಳೆಯ ಅಬ್ಬರ ಅಷ್ಟಾಗಿ ಇರದಿದ್ದರೂ ಚಿಟಿ ಚಿಟಿ ಮಳೆಯಿಂದಾಗಿ ರಸ್ತೆಗಳಲ್ಲಿ ಜನರ ಸಂಚಾರ ಕಡಿಮೆ ಇದೆ. ರಸ್ತೆಗಳಲ್ಲಿ ವಾಹನ ಸಂಚಾರ ಮತ್ತು ಜನರ ಓಡಾಟ ವಿರಳವಾಗಿದೆ. ಮಳೆಯ ಕಾರಣದಿಂದ ವ್ಯಾಪಾರಿಗಳ ಮುಖದಲ್ಲಿಯೂ ಕಳೆಗಟ್ಟಿದೆ.ಮಾರುಕಟ್ಟೆ ಮತ್ತು ವಾಣಿಜ್ಯ ಸ್ಥಳಗಳಲ್ಲಿ ಬಹುಪಾಲು ಅಂಗಡಿಗಳು ಇಡೀ ದಿನ ಬಿಕೋ ಎನ್ನುವಂತಿದ್ದವು. ಹೊಲಗಳಲ್ಲಿ ನೀರು ನಿಂತಿದ್ದು, ರಸ್ತೆಗುಂಡಿಗಳಲ್ಲೂ ಮಳೆ ನೀರು ತುಂಬಿ ವಾಹನ ಸವಾರರು ಪರದಾಡಿದರು. ರಸ್ತೆಯಲ್ಲಿ ವಾಹನಗಳು ನಿಧಾನಗತಿಯಲ್ಲಿ ಸಂಚರಿಸಿದ್ದರಿಂದ, ದಟ್ಟಣೆಯೂ ಕಂಡುಬಂತು.
ಇದನ್ನೂ ಓದಿ : ಗುಜರಾತ್, ಹಿಮಾಚಲದಲ್ಲೂ ಕಾಂಗ್ರೆಸ್ ಸೋಲು ಖಚಿತ: ಪ್ರಶಾಂತ್ ಕಿಶೋರ್