ಕುಮಟಾ: ತಾಲೂಕಿನ ನುಸಿಕೋಟೆ ಬಳಿ ಮೀನುಗಾರರೊಬ್ಬರಿಗೆ ಕಲ್ಲಾಗಿ ರೂಪುಗೊಂಡ ಏಡಿಯ ದೇಹ ಸಿಕ್ಕಿದ್ದು, ಇದು ನೂರಾರು ವರ್ಷಗಳ ಹಳೆಯ ಪಳೆಯುಳಿಕೆ ಇರಬಹುದು ಎಂದು ತಜ್ಞರು ಅಂದಾಜಿಸುತ್ತಿದ್ದಾರೆ.
ಅಘನಾಶಿನಿ ನದಿಯಲ್ಲಿ ಮೀನುಗಾರಿಕೆ ನಡೆಸುತಿದ್ದ ವೇಳೆ ಮೀನುಗಾರ ಈಶ್ವರ ಹರಿಕಂತ್ರ ಎಂಬುವರಿಗೆ ಏಡಿ ಕಲ್ಲು ಸಿಕ್ಕಿದೆ. ಮೊದಲು ಇದು ಏಡಿ ಎಂದು ಕೈಯಲ್ಲಿ ಹಿಡಿದಾಗ ಸಾಮಾನ್ಯ ಏಡಿಯಂತೆ ಇರದೇ ಕಲ್ಲಿನಂತೆ ಸ್ಪರ್ಶ ಅನುಭವ ಆಗಿದೆ. ಹೀಗಾಗಿ ಈ ಏಡಿಯಲ್ಲಿ ವಿಶೇಷ ಏನೋ ಇದೆ ಎಂದು ಕಾರವಾರದ ಮೀನುಗಾರ ವಿನಾಯಕ ಹರಿಕಂತ್ರ ಎಂಬವರಿಗೆ ಅದನ್ನು ಕಳುಹಿಸಿಕೊಟ್ಟಿದ್ದಾರೆ. ಅವರು ಕಾರವಾರದ ಕಡಲ ಜೀವಶಾಸ್ತ್ರಜ್ಞರ ಗಮನಕ್ಕೆ ತಂದು ಹಸ್ತಾಂತರಿಸಿದ್ದಾರೆ. ಈ ವೇಳೆ ಈ ಏಡಿ ನದಿಯಲ್ಲಿ ನೂರಾರು ವರ್ಷಗಳು ಸವೆಸಿ ಕಲ್ಲಿನ ರೂಪ ಪಡೆದಿದೆ ಎಂದು ತಿಳಿಸಿದ್ದಾರೆ.
ಏಡಿ ಕಲ್ಲುಗಳು ಸಮಾನ್ಯವಾಗಿ ಬಂಡೆಕಲ್ಲುಗಳಿರುವ ಕಡಲತೀರದಲ್ಲಿ ಪತ್ತೆಯಾಗುತ್ತವೆ. ಆದರೆ ಸಿಹಿ ನೀರಿನ ಅಘನಾಶಿನಿ ನದಿಯಲ್ಲಿ ಕಾಣಸಿಕ್ಕಿದ್ದು ಅಪರೂಪವೆನ್ನುತ್ತಾರೆ ಕಡಲ ಜೀವಶಾಸ್ತ್ರಜ್ಞ ವಿ.ಎನ್.ನಾಯಕ.ಏಡಿ ಕಲ್ಲು ಏಡಿಯ ಪಳಿಯುಳಿಕೆಯಾಗಿದ್ದು, ನೂರು ವರ್ಷಗಳದ್ದು ಇರಬಹುದು ಎಂದು ಅಂದಾಜಿಸಲಾಗಿದೆ.
ಆದರೆ, ಕಾರ್ಬನ್ ಡೇಟಿಂಗ್‌ಗೆ ಒಳಪಡಿಸದೇ, ಅದರ ನಿಖರ ಆಯಸ್ಸು ಎಷ್ಟು ಎಂದು ಹೇಳಲು ಆಗುವುದಿಲ್ಲ. ಹೀಗಾಗಿ ಕಡಲ ಜೀವಶಾಸ್ತ್ರಜ್ಞರ ಜೊತೆ ಇದೀಗ ಪುರಾತತ್ವ ಸಂಶೋಧಕರು ಸಹ ಈ ಏಡಿ ಹಿಂದೆ ಬಿದ್ದಿದ್ದು ಇದರ ನಿಜವಾದ ಆಯುಷ್ಯವನ್ನು ಹುಡುಕುವತ್ತ ಗಮನ ಹರಿಸಿದ್ದಾರೆ.
ಒಟ್ಟಿನಲ್ಲಿ ಅಪರೂಪದ ಕಲ್ಲಾಗಿ ಪರಿವರ್ತನೆ ಗೊಂಡ ಏಡಿ ಪಳಯುಳಿಕೆ ಇದೀಗ ಸಂಶೋಧಕರಿಗೆ ಸಂಶೋಧನೆಗೆ ವಸ್ತುವಾಗಿದೆ ಮಾರ್ಪಟ್ಟಿದೆ.