Advertisement

ಸವದಿ ನೆರಳಲ್ಲಿ ಕುಮಟಳ್ಳಿ ಸಾವ್ಕಾರ!

10:13 PM Dec 09, 2019 | Lakshmi GovindaRaj |

ಬೆಳಗಾವಿ: ಗಡಿ ಭಾಗದ ಅಥಣಿ ಕ್ಷೇತ್ರದಲ್ಲಿ ಎಲ್ಲ ರಾಜಕೀಯ ಲೆಕ್ಕಾಚಾರಗಳು ನಿರೀಕ್ಷಿಸಿದಂತೆ ಕೆಲಸ ಮಾಡಿವೆ. ಪಕ್ಷ ವಿರೋಧಿ ಚಟುವಟಿಕೆ ಆರೋಪಗಳಿಂದ ಅನರ್ಹ ಶಿಕ್ಷೆಗೆ ಗುರಿಯಾಗಿದ್ದ ಮಹೇಶ ಕುಮಟಳ್ಳಿ, ಜನತಾ ನ್ಯಾಯಾಲಯ ದಲ್ಲಿ ಅರ್ಹ ಎಂಬ ಪ್ರಮಾಣ ಪತ್ರ ಪಡೆದಿದ್ದಾರೆ. ರಾಜ್ಯದ ಅತ್ಯಂತ ಪ್ರತಿಷ್ಠೆಯ ಕಣವಾಗಿದ್ದ ಅಥಣಿಯಲ್ಲಿ ಮಹೇಶ ಕುಮಟಳ್ಳಿ ಗೆದ್ದು ಬಂದರೆ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ತಾವೇ ಗೆದ್ದಂತೆ ಮಂದಹಾಸ ಬೀರಿದರು. ಇಲ್ಲಿ ಗೆಲುವಿನ ಶ್ರೇಯಸ್ಸು ಕುಮಟಳ್ಳಿ ಜತೆಗೆ ಸವದಿಗೂ ಸಲ್ಲಬೇಕು.

Advertisement

ಸರ್ಕಾರದ ಉಳಿವಿನ ಪ್ರಶ್ನೆಯಾಗಿದ್ದರಿಂದ ಸಿಎಂ ಯಡಿ ಯೂರಪ್ಪ ತಾವೇ ರಂಗಪ್ರವೇಶ ಮಾಡಿದರು. ಅಥಣಿಗೆ ತೆರಳಿ ಕುಮಟಳ್ಳಿ ಗೆಲುವಿನ ಜವಾಬ್ದಾರಿಯನ್ನು ಸವದಿ ಹೆಗಲಿಗೆ ಹಾಕಿದರು. ಕ್ಷೇತ್ರದಲ್ಲಿ ನಿರ್ಣಾಯಕರಾಗಿರುವ ಲಿಂಗಾಯತ ಮತದಾರರ ಮನವೊಲಿಸಲು ಮುಂದಾದ ಯಡಿಯೂರಪ್ಪ ಸಮಾಜದ ಮುಖಂಡರ ಸಭೆ ನಡೆಸಿದರು. ಅವರ ಸಲಹೆ ಹಾಗೂ ಅಭಿಪ್ರಾಯ ಕೇಳಿ ಅನುಷ್ಠಾನದ ಭರವಸೆ ನೀಡಿದರು.

ಯಡಿಯೂರಪ್ಪ, ಮುಂದಾಲೋಚನೆ ಕುಮಟಳ್ಳಿ ಅವರನ್ನು ಆತಂಕದಿಂದ ಪಾರು ಮಾಡಿತು. ತಮ್ಮ ಉಪಮುಖ್ಯಮಂತ್ರಿ ಸ್ಥಾನ ಗಟ್ಟಿಯಾಗಿರಬೇಕಾದರೆ ಕುಮಟಳ್ಳಿ ಗೆಲುವು ಅನಿವಾರ್ಯ ಎಂಬುದನ್ನು ಅರಿತ ಸವದಿ ಪ್ರಚಾರದ ನೇತೃತ್ವ ವಹಿಸಿದರು. ಪ್ರಚಾರಕ್ಕೆ ಹೋದಲ್ಲೆಲ್ಲ ಸವದಿ ಅವರನ್ನು ಕರೆದುಕೊಂಡು ಹೋಗುತ್ತಿದ್ದ ಮಹೇಶ ಕುಮಟಳ್ಳಿಗೆ ನೆರೆ ಸಂತ್ರಸ್ತರ ಪ್ರತಿಭಟನೆಯ ಸ್ವಾಗತ ಸಿಕ್ಕಿತಾದರೂ, ಕೊನೆಯ ಕ್ಷಣದಲ್ಲಿ ಸಮಯದಲ್ಲಿ ಮತದಾರರು ಕೈಹಿಡಿದರು.

ಸವದಿ, ಬಿರುಸಿನ ಪ್ರಚಾರದ ಜೊತೆಗೆ ಕುಮಟಳ್ಳಿ ಗೆದ್ದರೆ ಸಚಿವರನ್ನಾಗಿ ಮಾಡಲಾಗುವುದು ಎಂದು ಸಿಎಂ ಯಡಿಯೂರಪ್ಪ ನೀಡಿದ ಭರವಸೆ ಮತದಾರರ ಮೇಲೆ ಪರಿಣಾಮ ಬೀರಿತು. ಕಾಂಗ್ರೆಸ್‌ನಲ್ಲಿ ಚುನಾವಣೆ ಗಂಭೀರ ಕಾಣಲಿಲ್ಲ. ಅಭ್ಯರ್ಥಿಯ ಆಯ್ಕೆ ಆಸಮಾಧಾನ ಕೊನೆ ವರೆಗೂ ಮುಂದುವರಿಯಿತು. ಕುಮಟಳ್ಳಿ ಬಗ್ಗೆ ಮತದಾರರಿಗೆ ಇದ್ದ ಸಿಟ್ಟನ್ನು ಸರಿಯಾಗಿ ಬಳಸಿ ಕೊಳ್ಳಲು ಕಾಂಗ್ರೆಸ್‌ ನಾಯಕರು ವಿಫಲರಾದರು. ಇನ್ನೊಂದು ಕಡೆ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರ ವಿವಾದಾತ್ಮಕ ಭಾಷಣ ಕಾಂಗ್ರೆಸ್‌ ಮೇಲೆ ಪ್ರತಿಕೂಲ ಪರಿಣಾಮ ಬೀರಿತು.

ಗೆದ್ದವರು
ಮಹೇಶ ಕುಮಟಳ್ಳಿ (ಬಿಜೆಪಿ)
ಪಡೆದ ಮತ: 99,203
ಗೆಲುವಿನ ಅಂತರ‌: 39,989

Advertisement

ಸೋತವರು
ಗಜಾನನ ಮಂಗಸೂಳಿ (ಕಾಂಗ್ರೆಸ್‌)
ಪಡೆದ ಮತ: 59,214

ಶ್ರೀಶೈಲ ಹಳ್ಳದಮಳ(ಪಕ್ಷೇತ ರ)
ಪಡೆದ ಮತ: 1,892

ಗೆದ್ದದ್ದು ಹೇಗೆ?
-ಅಭ್ಯರ್ಥಿ ಮಹೇಶ ಕುಮಟಳ್ಳಿ ಗೆಲುವಿನ ಹೊಣೆ ಹೊತ್ತು ಡಿಸಿಎಂ ಲಕ್ಷ್ಮಣ ಸವದಿ ಪ್ರಚಾರ

-ಲಿಂಗಾಯತ ಸಮಾಜ ನಮ್ಮನ್ನು ಕೈಬಿಡಬಾರದು ಎಂದು ಸಿಎಂ ಯಡಿಯೂರಪ್ಪ ಮನವಿ

-ಮಹೇಶ ಕುಮಟಳ್ಳಿ ಗೆಲ್ಲಿಸಿದರೆ ಸರ್ಕಾರದಲ್ಲಿ ಸಚಿವ ಸ್ಥಾನ, ಸವದಿಗೆ ಡಿಸಿಎಂ ಪಟ್ಟ ಕಾಯಂ ಭರವಸೆ

ಸೋತದ್ದು ಹೇಗೆ?
-ಕಾಂಗ್ರೆಸ್‌ ಅಭ್ಯರ್ಥಿ ಗಜಾನನ ಮಂಗಸೂಳಿ ಬಗ್ಗೆ ಕ್ಷೇತ್ರದ ಜನರಿಗೆ ಪರಿಚಯ ಇಲ್ಲದ್ದು

-ಸಿದ್ದರಾಮಯ್ಯ, ಎಂ.ಬಿ. ಪಾಟೀಲ ಹೊರತುಪಡಿಸಿ, ಹಿರಿಯ ನಾಯಕರು ನಿರಾಸಕ್ತಿ

-ಶಾಸಕಿ ಲಕ್ಷ್ಮೀ ಹೆಬ್ಬಾಳಕರ, ಮಹೇಶ ಕುಮಟಳ್ಳಿ ವಿರುದ್ಧ ಮಾಡಿದ ವಿವಾದಾತ್ಮಕ ಭಾಷಣ.

ವಿರೋಧಿಗಳಿಗೆ ಮತದಾರರು ಅದಕ್ಕೆ ತಕ್ಕ ಉತ್ತರ ನೀಡಿದ್ದಾರೆ. ನಮ್ಮ ವಿರುದ್ಧ ಡ್ಯಾಶ್‌ ಡ್ಯಾಶ್‌ ಎಂದು ಹೇಳಿದ್ದ ಹೆಬ್ಬಾಳಕರ, ಅದೇ ಹೆಸರಿನಿಂದ ಖ್ಯಾತರಾಗಲಿದ್ದಾರೆ.
-ಮಹೇಶ ಕುಮಟಳ್ಳಿ, ಬಿಜೆಪಿ ವಿಜೇತ ಅಭ್ಯರ್ಥಿ

ನಾನು ಸೋಲು ನಿರೀಕ್ಷೆ ಮಾಡಿರಲಿಲ್ಲ. ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ನನಗೆ ಎಲ್ಲ ರೀತಿಯಿಂದ ಸಹಾಯ ಹಾಗೂ ಸಹಕಾರ ನೀಡಿದ ಕಾಂಗ್ರೆಸ್‌ ನಾಯಕರು, ಕಾರ್ಯಕರ್ತರಿಗೆ ಧನ್ಯವಾದ ಸಲ್ಲಿಸುತ್ತೇನೆ.
-ಗಜಾನನ, ಕಾಂಗ್ರೆಸ್‌ ಪರಾಜಿತ ಅಭ್ಯರ್ಥಿ

Advertisement

Udayavani is now on Telegram. Click here to join our channel and stay updated with the latest news.

Next