Advertisement

ಶ್ರೀಚಾಮುಂಡೇಶ್ವರಿ ದೇಗುಲದಲ್ಲಿ ಕುಂಭಾಭಿಷೇಕ

02:21 PM Jun 26, 2018 | |

ಮೈಸೂರು: ನಾಡದೇವತೆ ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಾಲಯದ ಜೀರ್ಣೋದ್ಧಾರಗೊಂಡ ರಾಜಗೋಪುರ, ವಿಮಾನ ಗೋಪುರ ಹಾಗೂ ಧ್ವಜಸ್ತಂಭಗಳ ಕುಂಭಾಭಿಷೇಕ ಹಾಗೂ ವಿವಿಧ ಪೂಜಾ ಕೈಂಕರ್ಯಗಳನ್ನು ಸೋಮವಾರ ನೆರವೇರಿಸಲಾಯಿತು.

Advertisement

ಗಾಳಿ, ಮಳೆ ಹಾಗೂ ಕೋತಿಗಳ ಹಾವಳಿಯಿಂದಾಗಿ ಚಾಮುಂಡೇಶ್ವರಿ ದೇವಾಲಯದ ರಾಜಗೋಪುರ ಹಾಗೂ ವಿಮಾನ ಗೋಪುರಗಳಲ್ಲಿ ಕೆತ್ತಲಾಗಿರುವ ದೇವತಾ ಮೂರ್ತಿಗಳು ವಿರೂಪವಾಗಿದ್ದವು. ಅಲ್ಲದೆ, ಗೋಪುರದ ಗೋಡೆಗಳ ಮೇಲೆ ಗಿಡಗಳು ಬೆಳೆದು ಶಿಥಿಲಗೊಳ್ಳುತ್ತಿದ್ದರಿಂದ

ಟಿವಿಎಸ್‌ ಕಂಪನಿ ಸಹಯೋಗದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ದುರಸ್ತಿ ಕಾರ್ಯ ಕೈಗೊಂಡಿತ್ತು. ಕಳೆದ ಒಂದು ವರ್ಷದಿಂದ ತಮಿಳುನಾಡು ಮೂಲದ 70 ಮಂದಿ ಕೆಲಸಗಾರರು ದುರಸ್ತಿ ಕಾರ್ಯದಲ್ಲಿ ತೊಡಗಿದ್ದರು. ದುರಸ್ತಿ ಕಾಮಗಾರಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಸೋಮವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಕುಂಭಾಭಿಷೇಕ ನೆರವೇರಿಸಲಾಯಿತು.

ಕುಂಭಾಭಿಷೇಕ: ಚಾಮುಂಡೇಶ್ವರಿ ದೇವಾಲಯದ ಪ್ರಧಾನ ಆಗಮಿಕರಾದ ಡಾ.ಎನ್‌.ಶಶಿಶೇಖರ ದೀಕ್ಷಿತ್‌ ಸಮ್ಮುಖದಲ್ಲಿ  ಕಳೆದ ಎರಡು ದಿನಗಳಿಂದ ವಿವಿಧ ಪೂಜಾ ಕಾರ್ಯಗಳು ನಡೆದಿದ್ದವು. ಸೋಮವಾರ ಪ್ರಾತಃಕಾಲದಿಂದಲೇ ಜೀವನ್ಯಾಸ, ತತ್ವನ್ಯಾಸ, ಪ್ರಾಣ ಪ್ರತಿಷ್ಠೆ, ಮೂಲ ಹೋಮ, ಕಲಶಾರ್ಚನೆ, ನಾಡಿ ಸಂಧಾನ, ಕಲಾತತ್ವ ಹೋಮ, ಪೂರ್ಣಾಹುತಿ,

ದಶದಾನ ಕುಂಭೋದ್ವಾಸನೆ, ಕುಂಭಾಭಿಷೇಕ, ಮಹಾ ಮಂಗಳಾರತಿ, ಆಚಾರ್ಯಾದಿ ಋತ್ವಿಕ್‌ ಪೂಜೆ, ಯಾಗ ಫ‌ಲ ಸ್ವೀಕಾರ, ಆಶೀರ್ವಾದ ಮತ್ತು ಪ್ರಸಾದ ವಿನಿಯೋಗ ನಡೆಯಿತು. ಬೆಳಗ್ಗೆ 9.55 ರಿಂದ 10.10ರವರೆಗೆ ಸಲ್ಲುವ ಶುಭ ಸಿಂಹ ಲಗ್ನದಲ್ಲಿ ರಾಜಗೋಪುರ, ವಿಮಾನ ಗೋಪುರ ಹಾಗೂ ಧ್ವಜ ಸ್ತಂಭಗಳ ಜೀಣೊìàದ್ಧಾರ ಕುಂಭಾಭಿಷೇಕ ನೆರವೇರಿಸಲಾಯಿತು.  

Advertisement

ಕಲಶ ಪೂಜೆ: 125 ಅಡಿ ಎತ್ತರವಿರುವ  ದೇವಾಲಯದ ರಾಜಗೋಪುರದ ಮೇಲಿನ ಏಳು ಕಲಶಗಳಿಗೆ, ದೇವಾಲಯದ ಗರ್ಭಗುಡಿ ಮೇಲಿರುವ ರಾಜಗೋಪುರದ ಮೇಲಿನ ಕಲಶ ಹಾಗೂ ಧ್ವಜಸ್ತಂಭದ ಮೇಲಿನ ಕಲಶಕ್ಕೆ ಪೂಜೆ ಸಲ್ಲಿಸಲಾಯಿತು. ಇದರಿಂದಾಗಿ ಬೆಳಗ್ಗೆ 9.30ರಿಂದ 11 ಗಂಟೆವರೆಗೂ ಭಕ್ತರಿಗೆ ದೇವಾಲಯಕ್ಕೆ ಪ್ರವೇಶ ನಿರ್ಬಂಧಿಸಲಾಗಿತ್ತು.

ವಿವಿಧೆಡೆಗಳಿಂದ ಚಾಮುಂಡಿಬೆಟ್ಟಕ್ಕೆ ಬಂದಿದ್ದ ಸಹಸ್ರಾರು ಯಾತ್ರಿಕರು, ಪ್ರವಾಸಿಗರು ದೇವಾಲಯದ ಹೊರಗೆ ನಿಂತು ಗೋಪುರದ ಮೇಲಿನ ಕಲಶಗಳಿಗೆ ಪೂಜೆ ಸಲ್ಲಿಸುತ್ತಿದ್ದ ದೃಶ್ಯವನ್ನು ಕಣ್ತುಂಬಿಕೊಂಡು ಭಕ್ತಿಭಾವ ಮೆರೆದರು.

ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಪ್ರಸಾದ್‌, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕಾಳಯ್ಯ,  ಟ್ರಸ್ಟಿಗಳಾದ ಯು.ಸಿ.ಕುಮಾರ್‌, ಶಶಿಕಲಾ, ಸಾಕಣ್ಣ, ಮಾಜಿ ಟ್ರಸ್ಟಿ ಉತ್ತನಹಳ್ಳಿ ಶಿವಣ್ಣ, ಮುಜರಾಯಿ ತಹಶೀಲ್ದಾರ್‌ ಯತಿರಾಜ್‌ ಸಂಪತ್‌ಕುಮಾರನ್‌, ಟಿವಿಎಸ್‌ ಕಂಪನಿಯ ಹಿರಿಯ ಅಧಿಕಾರಿಗಳು ಹಾಜರಿದ್ದರು.

ಚಾಮುಂಡೇಶ್ವರಿ ದೇವಾಲಯದ ರಾಜಗೋಪುರ, ವಿಮಾನ ಗೋಪುರ ಹಾಗೂ ಧ್ವಜ ಸ್ತಂಭಗಳ ಜೀರ್ಣೋದ್ಧಾರದ ಹಿನ್ನೆಲೆಯಲ್ಲಿ ಶುದ್ಧೀ ಕಾರ್ಯಕ್ಕಾಗಿ ಕುಂಭಾಭಿಷೇಕ ನೆರವೇರಿಸಲಾಯಿತು. ಹಳೆಯ ಗೋಪುರವನ್ನು ಜೀರ್ಣೋದ್ಧಾರ ಮಾಡಿ ಕಲಶಾರೋಹಣ ಮಾಡಿದರೆ ಕೋಟಿ ಪುಣ್ಯ ಬರುತ್ತದೆ ಎಂಬ ಪ್ರತೀತಿ ಇದೆ. ಇದರಿಂದ ನಾಡಿನಲ್ಲಿ ಶಾಂತಿ, ನೆಮ್ಮದಿ ನೆಲೆಸುತ್ತದೆ. ಮೈಸೂರು ಮಹಾರಾಜರ ಹೆಸರಿನಲ್ಲಿ ದೇವಿಗೆ ಮೊದಲ ಪೂಜೆ ನೆರವೇರಿಸಿದ್ದು ನಾಡಿಗೆ ಸುಭಿಕ್ಷೆಯಾಗಲಿದೆ.
-ಡಾ.ಎನ್‌.ಶಶಿಶೇಖರ ದೀಕ್ಷಿತ್‌, ಚಾಮುಂಡೇಶ್ವರಿ ದೇಗುಲ ಪ್ರಧಾನ ಆಗಮಿಕ

Advertisement

Udayavani is now on Telegram. Click here to join our channel and stay updated with the latest news.

Next