Advertisement
ಶಿವನ ಪರಮ ಆರಾಧಕರು, ಧರ್ಮ ರಕ್ಷಕರು ಎಂದು ಕರೆಯಲ್ಪಡುವ ಶೈವ ಅಖಾಡಗಳ ಸದಸ್ಯರಾದ ನಾಗಾ ಸಾಧುಗಳು ತ್ರಿವೇಣಿ ಸಂಗಮದಲ್ಲಿ ಮೊದಲು ಮಿಂದೇಳುವ ಮೂಲಕ ಶಾಹಿ ಸ್ನಾನಕ್ಕೆ ಚಾಲನೆ ನೀಡಿ ದ್ದಾರೆ. ಅವರ ಬಳಿಕ 13 ಅಖಾಡಗಳ ಇತರೆ ಸಂತರು, ಸಾಧುಗಳು ಮಿಂದಿದ್ದಾರೆ. ನಂತರದಲ್ಲಿ ಭಕ್ತರಿಗೆ ಶಾಹಿ ಸ್ನಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಸೋಮವಾರ ನಡೆದ ಪುಣ್ಯಸ್ನಾನದಲ್ಲಿಯೂ 1.60 ಕೋಟಿ ಭಕ್ತರು ಮಿಂದೆದ್ದಿದ್ದರು.
Related Articles
Advertisement
ಕುಂಭಮೇಳ ಆರಂಭವಾದ ಕಾಲದಿಂದಲೂ ಮಹಾಶಿವಭಕ್ತರು, ತಪಸ್ವಿಗಳಾದ ನಾಗಾಸಾಧುಗಳಿಗೇ ಶಾಹಿ ಸ್ನಾನದಲ್ಲಿ ಮೊದಲ ಆದ್ಯತೆ ನೀಡುವ ಪರಂಪರೆ ಇದೆ. ಸಮುದ್ರ ಮಥನದಲ್ಲಿ ಶಿವನು ವಿಷ ಸೇವಿಸಿ, ಜಗತ್ತನ್ನು ರಕ್ಷಿಸಿದ ಕಾರಣ ಆತನ ಪರಮಭಕ್ತರಾದ ನಾಗಾಗಳಿಗೆ ಈ ಅವಕಾಶ ನೀಡಲಾಗುತ್ತದೆ ಎನ್ನುವ ನಂಬಿಕೆ ಇದೆ.
ಕುಂಭದಲ್ಲಿ ಭಕ್ತರ ಸಾವು ವದಂತಿ: ಎಸ್‌ಪಿ ಕಾರ್ಯಕರ್ತನ ಮೇಲೆ ಕೇಸು
ಕುಂಭಮೇಳಕ್ಕೆ ಆಗಮಿಸಿದ್ದ ಭಕ್ತರ ಪೈಕಿ 11 ಮಂದಿ ಮೃತಪಟ್ಟಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ವದಂತಿ ಹಬ್ಬಿಸಿದ್ದಕ್ಕಾಗಿ ಸಮಾಜವಾದಿ ಪಕ್ಷದ ಕಾರ್ಯಕರ್ತ ಎನ್ನಲಾದ ಲಾಲು ಯಾದವ್ ಸಂಜೀವ್ ಎಂಬ ಯುವಕನ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಸ್ಟೀವ್ ಪತ್ನಿಗೆ ಅಲರ್ಜಿ: ಗಂಗಾ ಸ್ನಾನ ಬಳಿಕ ಚೇತರಿಕೆ
ಕುಂಭಮೇಳದಲ್ಲಿ ಕಲ್ಪವಾಸ್ ವ್ರತ ಕೈಗೊಂಡಿರುವ ಆ್ಯಪಲ್ ಸಹಸಂಸ್ಥಾಪಕ ಸ್ಟೀವ್ ಜಾಬ್ಸ್ ಪತ್ನಿ ಲಾರೆನ್ ಪೂವೆಲ್ ಅವರಿಗೆ ಅಲರ್ಜಿ ಉಂಟಾಗಿದೆ. ಆದಾಗ್ಯೂ ಅವರು ಗಂಗಾಸ್ನಾನ ಮಾಡಿದ್ದಾರೆ. ಮೊದಲ ಬಾರಿ ತೀವ್ರ ಜನಸಂದಣಿ ನಡುವೆ ಇರುವ ಕಾರಣ ಅವರಿಗೆ ಅಲರ್ಜಿ ಆಗಿದೆ ಎಂದು ಲಾರೆನ್‌ಗೆ ದೀಕ್ಷೆ ನೀಡಿರುವ ಸ್ವಾಮಿ ಕೈಲಾಸಾನಂದ ಗಿರಿ ಹೇಳಿದ್ದಾರೆ. ಬೆನ್ನಲ್ಲೇ ಗಂಗಾ ಸ್ನಾನದ ಬಳಿಕ ಲಾರೆನ್ ಚೇತರಿಸಿ ಕೊಂಡಿದ್ದಾರೆ ಎಂದು ಸರಕಾರ ಹೇಳಿದೆ.
ಮಹಾಕುಂಭಮೇಳಕ್ಕೆ ಗೂಗಲ್ ಪುಷ್ಪವೃಷ್ಟಿ
ಗೂಗಲ್ ಮಹಾಕುಂಭಮೇಳಕ್ಕೆ ವಿಶೇಷ ಎಐ ಆ್ಯನಿಮೇಷನ್ ರೂಪಿಸಿದೆ. ಗೂಗಲ್‌ನಲ್ಲಿ ಕುಂಭಮೇಳ, ಮಹಾ ಕುಂಭ ಎಂದು ಸರ್ಚ್ ಮಾಡುತ್ತಿದ್ದಂತೆ ಪೇಜ್‌ನಲ್ಲಿ ಗುಲಾಬಿ ದಳಗಳ ವೃಷ್ಟಿಯಾಗುತ್ತಿರುವಂತೆ ಆ್ಯನಿಮೇಷನ್ ಮಾಡಲಾಗಿದೆ.