Advertisement

ಕುಂಬಳೆ ಬಸ್‌ ನಿಲ್ದಾಣ: ಶೌಚಾಲಯವಿಲ್ಲದೆ ಸಂಕಷ್ಟ

01:59 AM Dec 06, 2019 | mahesh |

ಕುಂಬಳೆ : ಕೇರಳ ಮತ್ತು ಕರ್ನಾಟಕದ ಪ್ರಯಾಣಿಕರು ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳು ಸೇರಿ ದಿನನಿತ್ಯ ಸಾವಿರಾರು ಸಂಖ್ಯೆಯ ಪ್ರಯಾಣಿಕರು ಆಶ್ರಯಿಸುತ್ತಿರುವ ಕುಂಬಳೆ ಪೇಟೆಯಲ್ಲಿ ಬಸ್‌ ನಿಲ್ದಾಣ ಮತ್ತು ಸಾರ್ವಜನಿಕ ಶೌಚಾಲಯವಿಲ್ಲದೆ ಸಾರ್ವಜನಿಕರು ಸಂಕಷ್ಟಕ್ಕೀಡಾಗಬೇಕಾಗಿದೆ.

Advertisement

ಕುಂಬಳೆ ಪೇಟೆಯಲ್ಲಿ ಓಬಿರಾಯನ ಕಾಲದ ಬಸ್‌ ನಿಲ್ದಾಣವನ್ನು ಸಾರ್ವ ವನಿಕರ ಹಿತಾಸಕ್ತಿಗೋಸ್ಕರ ಗ್ರಾ.ಪಂ.ಆಡಳಿತ ಸಮಿತಿಯ ನೇತೃತ್ವದಲ್ಲಿ ಕೆಡವಿ ವರ್ಷಗಳೇ ಸಂದರೂ ಈ ತನಕ ಕನಿಷ್ಠ ಪಕ್ಷ ನೂತನ ಕಟ್ಟಡಕ್ಕೆ ಶಿಲಾನ್ಯಾಸ ಮಾಡದಿರುವುದು ಪಂ; ಆಡಳಿತ ಸಮಿತಿಯ ನಿರ್ಲ ಕ್ಷಕ್ಕೆ ಕೈಗನ್ನಡಿ ಎಂಬುದು ಸಾರ್ವಜನಿಕರ ಆರೋಪ.

ಜನರ ಈ ಸಂಕಷ್ಟಗಳನ್ನು ಮನಗಂಡು ಸ್ಥಳೀಯ ವ್ಯಾಪಾರೀ ಸಂಘಟನೆಯೊಂದು ಗ್ರಾಮ ಪಂಚಾಯತ್‌ಗೆ ಸಹಕರಿಸಿ ತಾತ್ಕಾಲಿಕ ಬಸ್‌ ತಂಗುದಾಣ ನಿರ್ಮಿಸಿದ್ದು ಇದರಿಂದ ಕೇವಲ ಬೆರಳೆಣಿಕೆಯ ಪ್ರಯಾಣಿಕರಿಗೆ ಮಾತ್ರ ಪ್ರಯೋಜನವಾಗಿದೆ.

ಅತ್ಯಧಿಕ ಪ್ರಯಾಣಿಕರು ಯಾತ್ರೆ ಮಾಡುವ ಸಂಜೆ ಸಮಯದಲ್ಲಿ ಮಂಗಳೂರು ಕಾಸರಗೋಡು ಸಂಚರಿಸುವ ಹೆಚ್ಚಿನ ಉಭಯ ಸರಕಾರಿ ಬಸ್‌ಗಳು ಬಸ್‌ ನಿಲ್ದಾಣಕ್ಕೆ ಆಗಮಿಸದೇ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲೇ ಪ್ರಯಾಣಿಕರನ್ನು ಇಳಿಸುತ್ತಿರುವ ಬಗ್ಗೆ ಕಾನೂನು ಪಾಲಕರಿಗೆ ಅರಿವಿದ್ದು ಯಾವುದೇ ಕ್ರಮ ಕೈಗೊಳ್ಳದಿರುವುದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಬದಿಯಡ್ಕ ಮುಳ್ಳೇರಿಯಾ ಭಾಗಗಳಿಗೆ ತೆರಳುವ ಬಸ್‌ಗಳಿಗೆ ನಿಲ್ದಾಣವಿಲ್ಲದೆ ಬದಿ ಯಡ್ಕ ರಸ್ತೆಯ ಇಕ್ಕೆಲಗಳನ್ನು ಅತಿಕ್ರಮಿಸಿದ್ದು ಗ್ರಾಮ ಪಂಚಾಯತ್‌ ಆಡಳಿತ ಸಮಿತಿ ವತಿಯಿಂದ ತಾತ್ಕಾಲಿಕ ಬಸ್‌ ತಂಗುದಾಣ ವನ್ನು ನಿರ್ಮಿಸುವಂತೆ ಬಸ್‌ ಸಿಬಂದಿ ಬೇಡಿಕೆ ಸಲ್ಲಿಸಿ ವರ್ಷಗಳೇ ಸಂದಿವೆ.

Advertisement

ಕೇರಳ ರಾಜ್ಯ ಸರಕಾರದ ಕಳೆದ ಸಾಲಿನ 2018-19 ವಾರ್ಷಿಕ ಮುಂಗಡ ಪತ್ರದಲ್ಲಿ ಮಂಜೂರುಗೊಂಡ ಒಟ್ಟುಮೊತ್ತದ 50 ಶತಮಾನಕ್ಕಿಂತ ಹೆಚ್ಚು ನಿಧಿಯನ್ನು ವಿನಿಯೋಗಿಸದೆ ರಾಜ್ಯ ಸರಕಾರದ ಖಾಲಿ ಖಜಾನೆಗೆ ಮರಳಿಸಿದೆ.

ಕೇರಳದ ಒಟ್ಟು 941 ಪಂಚಾಯತ್‌ನ ಪೈಕಿ ನಿಧಿ ಕನಿಷ್ಠ ವಿನಿಯೋಗದಲ್ಲಿ 941ನೇ ಸ್ಥಾನ ಗಳಿಸಿದ ಕುಂಬಳೆ ಗ್ರಾ. ಪಂ.ನ ಪ್ರಸ್ತುತ ಆಡಳಿತ ಸಮಿತಿಯ ಕಾಲಾವಧಿ ಮುಗಿಯಲು ಇನ್ನು ಬಾಕಿ ಉಳಿದಿರುವುದು ಕೇವಲ 10 ತಿಂಗಳು ಮಾತ್ರ. 1963ರಿಂದ ನಿರಂತರ 51 ವರ್ಷಗಳ ಕಾಲ ಆಡಳಿತದ ಚುಕ್ಕಾಣಿ ಹಿಡಿದಿರುವ ಐಕ್ಯರಂಗ ಪಕ್ಷದಿಂದ ಹೆಚ್ಚಿನ ಅಭಿವೃದ್ಧಿಯಾಗಿಲ್ಲವೆಂಬ ಆರೋಪ ಸಾರ್ವಜನಿಕರದು.

ನಿಯಮಗಳಿಗೆ ಹುಲ್ಲುಕಡ್ಡಿಯ ಬೆಲೆ ಇಲ್ಲ
ಅಗಲಕಿರಿದಾದ ಕುಂಬಳೆಯ ಬಸ್‌ ನಿಲ್ದಾ ಣದ ಒಳಗೆ ಬಸ್‌ಗಳಿಗೆ ಮಾತ್ರ ಪ್ರವೇಶ ವಿರುವ ರಸ್ತೆಯಲ್ಲಿ ಇತರ ವಾಹನಗಳು ಸಂಚರಿಸುತ್ತಿದ್ದು, ತಾತ್ಕಾಲಿಕ ಬಸ್‌ ತಂಗುದಾಣದ ಪಕ್ಕದಲ್ಲಿ ಟ್ರಾಫಿಕ್‌ ನಿಯಮಗಳಿಗೆ ಹುಲ್ಲುಕಡ್ಡಿಯ ಬೆಲೆ ಇಲ್ಲದೆ ವಾಹನ ನಿಲುಗಡೆ ನಿತ್ಯಕಾಣಬಹುದು.

ಕೇವಲ ಭರವಸೆ
ಕುಂಬಳೆ ತಂಗುದಾಣ ಸಮಸ್ಯೆ,ಅನಧಿಕೃತ ಪಾರ್ಕಿಂಗ್‌, ಪೇಟೆಯ ಅವ್ಯಸ್ಥೆಯ ಕುರಿತು ಪತ್ರಿಕೆಯಲ್ಲಿ ಹಲವಾರು ಬಾರಿ ಪ್ರಕಟವಾದರೂ ಸ್ಥಳೀಯಾಡಳಿತ ಇದಕ್ಕೆ ಸೂಕ್ತ ಸ್ಪಂದಿಸಿಲ್ಲ. ಆಡಳಿತ ಮತ್ತು ವಿಪಕ್ಷ ಚುನಾಯಿತರು ಕೇವಲ ಭರವಸೆ ಮಾತ್ರ ನೀಡಿ ಬಳಿಕ ಸುಮ್ಮಾನಾಗುತ್ತಾರೆ.ಸಮಸ್ಯೆ ಸಮಸ್ಯೆಯಾಗಿಯೇ ಉಳಿದಿದೆ.
– ಶರತ್‌ ಕುಮಾರ್‌, ಸ್ಥಳೀಯ

ವಿಪಕ್ಷ ತೆಪ್ಪಗಿದೆ
ಕುಂಬಳೆ ಬಸ್‌ ನಿಲ್ದಾಣದ ಸುತ್ತ ಮುತ್ತ ನಿತ್ಯ ಸಾಕಷ್ಟು ವಾಹನಗಳ ಪಾರ್ಕಿಂಗ್‌ನಿಂದಲಾಗಿ ಬಸ್‌ ನಿಲ್ದಾಣದೊಳಗೆ ಪ್ರವೇಶಿಸಲು ಮತ್ತು ನಿಲ್ದಾಣದಿಂದ ಪೇಟೆಗೆ ತೆರಳಲು ಹರಸಾಹಸ ಪಡಬೇಕಾಗಿದೆ. ಇಂತಹ ಗಂಭೀರ ಸಮಸ್ಯೆಯತ್ತ ಆಡಳಿತ ಮತ್ತು ವಿಪಕ್ಷ ತೆಪ್ಪಗಿದೆ.
– ವಿನೋದ್‌ ಕುಂಬಳೆ, ಪ್ರಯಾಣಿಕ

Advertisement

Udayavani is now on Telegram. Click here to join our channel and stay updated with the latest news.

Next