ಬೆಂಗಳೂರು : ಹಿಂದಿ ಹೇರಿಕೆ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ಮಾಜಿ ಸಿಎಂ ಹಾಗೂ ಜೆಡಿಎಸ್ ನಾಯಕ ಹೆಚ್.ಡಿ. ಕುಮಾರ ಸ್ವಾಮಿ ಹರಿಹಾಯ್ದಿದ್ದಾರೆ.
ಇಂದು (ಸೆ.13) ಸಂಜೆ ಸರಣಿ ಟ್ವೀಟ್ ಗಳ ಮೂಲಕ ಹಿಂದಿ ಹೇರಿಕೆ ವಿರುದ್ಧ ಆಕ್ರೋಶ ಹೊರಹಾಕಿರುವ ಹೆಚ್.ಡಿ.ಕೆ , ಭಾರತ ಒಕ್ಕೂಟ ರಾಷ್ಟ್ರ. ಬಹುಸಂಸ್ಕೃತಿ, ಬಹುಭಾಷೆ, ಬಹುಜನರ ಆಗರ. ಅನೇಕ ಭಾಷೆಗಳ ತೊಟ್ಟಿಲು. ಆದರೆ ಒಂದೇ ಭಾಷೆಯನ್ನು ವೈಭವೀಕರಿಸುವ, ಹೇರುವ ಹುಂಬ ಪ್ರಯತ್ನವೇಕೆ ? ಎಂದು ಪ್ರಶ್ನಿಸಿದ್ದಾರೆ.
ಹಿಂದಿ ಹೇರಿಕೆಯನ್ನು ಕನ್ನಡಿಗರು ಒಪ್ಪುವುದಿಲ್ಲ. ಹಿಂದಿ ದಿವಸ ಆಚರಣೆಯನ್ನೂ ಸಹಿಸುವುದಿಲ್ಲ. ಒಕ್ಕೂಟದ ಎಲ್ಲಾ ಭಾಷೆಗಳಂತೆ ಹಿಂದಿಯೂ ಒಂದು ಭಾಷೆಯಷ್ಟೇ. ಕೇಂದ್ರ ಸರಕಾರ ಹಿಂದಿಗೆ ʼಇಂದ್ರ ವೈಭೋಗʼ ನೀಡಿ ಅನ್ಯ ಭಾಷೆಗಳನ್ನು ಬೀದಿಪಾಲು ಮಾಡುವುದನ್ನು ಸಹಿಸಲಾಗದು ಎಂದು ಗುಡುಗಿದ್ದಾರೆ.
ಹಿಂದಿ ಹೇರುವವರಿಗೆ ತಿಳಿದಿರಲಿ. ನಮ್ಮ ಕನ್ನಡ ಅಭಿಜಾತ ಭಾಷೆ. ನಮ್ಮ ಕನ್ನಡ ಸಾವಿರಾರು ವರ್ಷಗಳ ಘನ ಚರಿತ್ರೆಯುಳ್ಳ ಭಾಷೆ. ನಮ್ಮ ಕನ್ನಡ 6.4 ಕೋಟಿ ಜನರ ಹೃದಯಮಿಡಿತ. ನಮ್ಮ ಪಾಲಿನ ಮಾತೃ ಸ್ವರೂಪಿಣಿ ಎಂದಿದ್ದಾರೆ.
ನಮ್ಮ ನೆಲದಲ್ಲಿ ನಮ್ಮ ಕನ್ನಡ ಭಾಷೆಯೇ ಮೊದಲು. ಹಿಂದಿ ದಿವಸ ಆಚರಣೆ ಅಸಮರ್ಪಕ ಮತ್ತು ಅನಗತ್ಯ. ಹಿಂದಿ ಹೇರಿಕೆಯಿಂದ ಬಹುಭಾಷೆಯ ಭಾರತದ ನೆಮ್ಮದಿ ಕದಡುವುದು ಬೇಡ ಎಂದು ಎಚ್ಚರಿಕೆ ನೀಡಿದ್ದಾರೆ.