ಬೆಂಗಳೂರು: ಚನ್ನಪಟ್ಟಣ ತಾಲೂಕಿನಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಯಾವ ಶಿಷ್ಟಾಚಾರವೂ ಉಲ್ಲಂಘನೆಯಾಗಿಲ್ಲ ಎಂದು ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ ಎನ್ ಅಶ್ವತ್ಥನಾರಾಯಣ ಹೇಳಿದ್ದಾರೆ.
ಮಲ್ಲೇಶ್ವರದಲ್ಲಿ ಮರು ಅಭಿವೃದ್ಧಿಪಡಿಸಿರುವ ಚಂದ್ರಶೇಖರ ಆಜಾದ್ ಕ್ರೀಡಾಂಗಣ ಉದ್ಘಾಟಿಸಿದ ನಂತರ ಅವರು ಸುದ್ದಿಗಾರರ ಜತೆ ಮಾತನಾಡಿ, ”ಕುಮಾರಸ್ವಾಮಿಯವರಿಗೆ ಈ ಸಂಬಂಧ ಆಹ್ವಾನ ಕೊಡಲಾಗಿತ್ತು. ಸ್ವತಃ ಅವರೇ ತಾನು ನಿಗದಿತ ದಿವಸದಂದು ಬೇರೆ ಕೆಲಸ ಇರುವುದರಿಂದ ಕಾರ್ಯಕ್ರಮಕ್ಕೆ ಬರಲಾಗುವುದಿಲ್ಲ ಎಂದು ತಿಳಿಸಿದ್ದರು. ಅಲ್ಲದೆ ಈ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ತಿಳಿಸಿರುವುದಾಗಿಯೂ ಹೇಳಿದ್ದರು” ಎಂದರು.
ಇದನ್ನೂ ಓದಿ: ಕುಮಾರಸ್ವಾಮಿ -ಯೋಗೇಶ್ವರ್ ನಡುವೆ “ಟಾಕ್‌ವಾರ್’
”ಚನ್ನಪಟ್ಟಣದಲ್ಲಿ ಸಾಕಷ್ಟು ಕಾರ್ಯಕ್ರಮಗಳು ನಡೆಯುತ್ತವೆ. ಅವೆಲ್ಲವೂ ಹೆಚ್ಚಾಗಿ ಕುಮಾರಸ್ವಾಮಿ ಅವರ ಉಪಸ್ಥಿತಿಯಲ್ಲಿಯೇ ಆಗುತ್ತವೆ. ಇದಕ್ಕಿಂತ ಮುಖ್ಯವಾಗಿ ನಮಗೆ ಬೇಕಿರುವುದು ಜಿಲ್ಲೆಯ ಒಟ್ಟಾರೆ ಅಭಿವೃದ್ಧ. ನಾವೇ ಮಾಡಲಿ, ಅವರೇ ಮಾಡಲಿ, ದುಡ್ಡು ಸರ್ಕಾರದ್ದೇ ಆಗಿರುತ್ತದೆ. ಹಾಗಿರುವಾಗ ಮುಖ್ಯಮಂತ್ರಿ ಆಗಿದ್ದ ಕುಮಾರಸ್ವಾಮಿ ಅವರು ಈ ರೀತಿ ಗೊಂದಲ ಸೃಷ್ಟಿಸುವುದು ಸರಿಯಲ್ಲ” ಎಂದರು.
”ಸಿ ಪಿ ಯೋಗೇಶ್ವರ್ ಅವರು ನೇರವಾಗಿ ಮುಖ್ಯಮಂತ್ರಿಗಳ ಅನುದಾನದಿಂದ 50 ಕೋಟಿ ರೂಪಾಯಿಯನ್ನು ಅಭಿವೃದ್ಧಿಗಾಗಿ ತಂದಿದ್ದಾರೆ. ಕುಮಾರಸ್ವಾಮಿಯವರು ಇದರಲ್ಲಿ ಖುಷಿಯಿಂದ ಪಾಲ್ಗೊಳ್ಳಬೇಕಿತ್ತು ಅದನ್ನು ಬಿಟ್ಟು ವಿವಾದ ಉಂಟು ಮಾಡುವುದು ಸರಿಯಲ್ಲ” ಎಂದು ಅಭಿಪ್ರಾಯಪಟ್ಟರು.