Advertisement

ರಾಜಕೀಯ ದಂಗೆ! ಕಾವೇರುತ್ತಿರುವ ರಾಜ್ಯ ರಾಜಕೀಯ

06:00 AM Sep 21, 2018 | |

ದಿನದಿಂದ ದಿನಕ್ಕೆ ಆಕ್ರಮಣಕಾರಿಯಾಗುತ್ತಿರುವ ರಾಜ್ಯ ರಾಜಕಾರಣ ಗುರುವಾರ “ದಂಗೆ’ಗೂ ಸಾಕ್ಷಿಯಾಯಿತು. ಬಿಜೆಪಿ ವಿರುದ್ಧ ದಂಗೆ ಏಳಿ ಎಂದು ಸಿಎಂ ಕುಮಾರಸ್ವಾಮಿ ಸಿಡಿದೆದ್ದರೆ, ಸಿಎಂ ದಂಗೆಗೆ ಪ್ರಚೋದಿಸುತ್ತಿದ್ದಾರೆ ಎಂದು ರಾಜ್ಯಪಾಲರಿಗೆ ದೂರು ನೀಡಲು ಬಿಜೆಪಿ ಮುಂದಾಗಿದೆ.

Advertisement

ಬಿಜೆಪಿ ವಿರುದ್ಧ ರಾಜ್ಯದ ಜನರು ದಂಗೆ ಏಳಲಿ
ಹಾಸನ:”
ರಾಜ್ಯದ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ನಡೆಸಿ ರಾಜ್ಯದಲ್ಲಿ ಅಭಿವೃದ್ಧಿಗೆ ಅಡಚಣೆ ಮಾಡುತ್ತಿರುವ ಬಿಜೆಪಿ ನಾಯಕರ ವಿರುದ್ಧ ರಾಜ್ಯದ ಜನರು ದಂಗೆ ಏಳಬೇಕು”ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು,”ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಸರ್ಕಾರ ಇಂದು ಬೀಳುತ್ತೆ, ನಾಳೆ ಬೀಳುತ್ತೆ ಎಂದು ಸುದ್ದಿ ಹರಡುತ್ತಾ ನನ್ನನ್ನು ಅಧಿಕಾರದಿಂದ ಇಳಿಸಲು ಬಿಜೆಪಿ ನಾಯಕರು ಶತಪ್ರಯತ್ನ ನಡೆಸುತ್ತಿದ್ದಾರೆ. ರಾಜ್ಯದ ಅಭಿವೃದ್ಧಿ ಪೂರಕ ಚಟುವಟಿಕೆಗಳಿಗೆ ಅಡ್ಡಿ ಪಡಿಸುತ್ತಾ ವಿಕೃತ ಸಂತೋಷ ಅನುಭವಿಸುತ್ತಿರುವ ಬಿಜೆಪಿ ನಾಯಕರ ವಿರುದ್ಧ ರಾಜ್ಯದ ಜನರು ದಂಗೆ ಎದ್ದು ಬುದ್ದಿ ಕಲಿಸಬೇಕು. ಆಡಳಿತ ನಡೆಸುವಲ್ಲಿ ನನ್ನಿಂದ ತಪ್ಪಾದರೂ ನನ್ನ ವಿರುದ್ಧವೂ ಜನರು ದಂಗೆ ಏಳಲಿ. ನಾನು ಶಿರಸಾವಹಿಸಿ ಪಾಲಿಸುತ್ತೇನೆ” ಎಂದು ಹೇಳಿದರು.

ಈ ಪದ ಬಳಕೆಗೆ ಸಾಕಷ್ಟು ವಿರೋಧ ವ್ಯಕ್ತವಾದ ಬೆನ್ನಲ್ಲೇ ಸ್ಪಷ್ಟನೆ ನೀಡಿದ ಬೆನ್ನಲ್ಲೇ,”ಪ್ರತಿಭಟನೆ ಮಾಡಿ ಎಂಬರ್ಥದಲ್ಲಿ ದಂಗೆ ಪದ ಬಳಸಿ ದ್ದೇನೆ ಎಂದು ಹೇಳಿದರು.

ಇಷ್ಟೊತ್ತಿಗೆ ಢಮಾರ್‌ ಆಗಿರುತ್ತಿದ್ದೆ: ಸುದ್ದಿವಾಹಿನಿಗಳಲ್ಲಿ, ದಿನ ಪತ್ರಿಕೆಗಳಲ್ಲಿ ಸರ್ಕಾರ ಪತನ ಖಚಿತ, ನಾಳೆ, ನಾಡಿದ್ದರಲ್ಲೇ ಸರ್ಕಾರ ಪತನ ಎಂಬ ಸುದ್ದಿಯನ್ನು ನೋಡಿದರೆ ಜನರು ಏನು ತಿಳಿದುಕೊಳ್ಳಬೇಕು? ನನಗೆ ಎರಡು ಬಾರಿ ಹೃದಯದ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದೇದೆ. ನಾನು ವೀಕ್‌ ಮೈಂಡೆಡ್‌ ಆಗಿದ್ದರೆ ಇಂಥ ಸುದ್ದಿಗಳನ್ನು ನೋಡಿ ಮಲಗಿದ್ದಾಗಲೇ ಢಮಾರ್‌ ಆಗಬೇಕಾಗಿತ್ತು. ನಾನು ಗಟ್ಟಿ. ಹಾಗಾಗಿಯೇ ಜನರ ಆಶೀರ್ವಾದದಿಂದ ಉಳಿದಿದ್ದೇನೆ ಎಂದ ಆವರು, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಈ ರಾಜ್ಯದ ರೈತರನ್ನು ಉಳಿಸುವ ಕನಸು ಕಂಡಿದ್ದಾರೆ. ಆ ಕನಸನ್ನು ಸಂಪೂರ್ಣಗೊಳಿಸುವವರೆಗೂ ನಾನು ವಿರಮಿಸಲಾರೆ ಎಂದರು.

Advertisement

ಕುಮಾರಸ್ವಾಮಿ ಅವರೇ ನೀವೂ ಇತಿಮಿತಿಯಲ್ಲಿರಿ
ಬೆಂಗಳೂರು:
“ಕುಮಾರಸ್ವಾಮಿಯವರೇ ಅಧಿಕಾರ ಶಾಶ್ವತವಲ್ಲ.ನೀವು ಏನು ಮಾಡುತ್ತೀರೋ ಮಾಡಿಕೊಳ್ಳಿ. ಎದುರಿಸಲು ನಾನೂ ಸಿದ್ಧನಿದ್ದೇನೆ. ಮೊದಲು ನೀವು ನನ್ನ ವಿರುದ್ಧ ಆರೋಪ ಮಾಡುವುದು ಬಿಡಿ ನೀವೂ ನಿಮ್ಮ ಇತಿಮಿತಿಯಲ್ಲಿರಿ”ಎಂದು ಪ್ರತಿಪಕ್ಷ ನಾಯಕ ಬಿ.ಎಸ್‌.ಯಡಿಯೂರಪ್ಪ ಎದಿರೇಟು ನೀಡಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿದ ಅವರು,”ನಾನು ನನ್ನ ಇತಿಮಿತಿಯಲ್ಲೇ ಮಾತನಾಡುತ್ತಿದ್ದೇನೆ. ಕುಮಾರಸ್ವಾಮಿ ಬೆದರಿಕೆಗೆ ಹೆದರುವವನು ನಾನಲ್ಲ. ನಾನೂ ಸಾಕಷ್ಟು ನೋಡಿದ್ದೇನೆ. ರಾಜ್ಯ ಸರ್ಕಾರ ನಿಮ್ಮ ಕೈಲಿದ್ದರೆ, ಕೇಂದ್ರ ಸರ್ಕಾರ ನಮ್ಮ ಕೈಲಿದೆ ಎಂಬುದನ್ನು ಮರೆಯಬಾರದು ಎಂದಿದ್ದಾರೆ.

“ಶಿವರಾಮ ಕಾರಂತ ಬಡಾವಣೆ ಡಿನೋಟಿಫಿಕೇಷನ್‌ ಪ್ರಕರಣದಲ್ಲಿ ನಾನು ತಪ್ಪು ಮಾಡಿಲ್ಲ. ತಪ್ಪು ಮಾಡಿದ್ದರೆ ನಿಮ್ಮ ಕೈಯಲ್ಲೇ ತನಿಖಾ ಸಂಸ್ಥೆಗಳಿವೆಯಲ್ಲ, ತನಿಖೆ ನಡೆಸಿ” ಎಂದು ಸವಾಲು ಹಾಕಿದ ಬಿಎಸ್‌ವೈ, “”ಮೈಸೂರಿನಲ್ಲಿ ಅಪ್ಪ ಮಕ್ಕಳು ಸೈಟು ಮಾಡಿಕೊಂಡಿರುವ ವಿಚಾರ ಗೊತ್ತಿಲ್ಲದೇ ಇರುವುದೇನಲ್ಲ.ನಮ್ಮ ಬಳಿಯೂ ದಾಖಲೆಗಳಿದ್ದು, ಬಿಡುಗಡೆ ಮಾಡುತ್ತೇವೆ”ಎಂದು ಹೇಳಿದರು.

“ಡಿ.ಕೆ.ಶಿವಕುಮಾರ್‌ ವಿರುದ್ಧವೂ ಗುಡುಗಿದ ಅವರು, ಜೈಲಿಗೆ ಹೋಗಿ ಬಂದವರು ಎಂದು ನನ್ನ ವಿರುದ್ಧ ಮಾತನಾಡಲು ಅವರಿಗೆ ನೈತಿಕತೆ ಏನಿದೆ. ನಮ್ಮ ರಾಷ್ಟ್ರೀಯ ಅಧ್ಯಕ್ಷರ ಬಗ್ಗೆ ಮಾತನಾಡುವಾಗ ಎಚ್ಚರ ಇರಲಿ. ಬಾಯಿಗೆ ಬಂದಂತೆ ಮಾತನಾಡಬೇಡಿ”ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿಎಂ ವಿರುದ್ಧ ರಾಜ್ಯಪಾಲರಿಗೆ ಇಂದು ದೂರು
ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಉದಯಪುರದಲ್ಲಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರು ಬಿಜೆಪಿ ವಿರುದ್ಧ ದಂಗೆ ಏಳಿ ಎಂದು ಜನರಿಗೆ ಕರೆ ಕೊಟ್ಟಿರುವುದು ಸಂವಿಧಾನ ಬಾಹಿರ ಎಂದು ಬಿಜೆಪಿ ರಾಜ್ಯಪಾಲರಿಗೆ ದೂರು ನೀಡಲು ತೀರ್ಮಾನಿಸಿದೆ. ಈ ಬಗ್ಗೆ ಡಾಲರ್ ಕಾಲೋನಿ ನಿವಾಸದಲ್ಲಿ ಗುರುವಾರ ಸಂಜೆ ಶಾಸಕರ ಜತೆ ಚರ್ಚಿಸಿದ ಬಿ.ಎಸ್‌.ಯಡಿಯೂರಪ್ಪ, ಶುಕ್ರವಾರ ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ್ದಾರೆ ಎಂದು ಹೇಳಲಾಗಿದೆ. ನಿಯೋಗದಲ್ಲಿ ತೆರಳಿ ದೂರು ನೀಡಲಿದ್ದಾರೆ ಎಂದು ತಿಳಿದು ಬಂದಿದೆ.

ಬಿಎಸ್‌ವೈ ನಿವಾಸ ಮುಂದೆ ಚಕಮಕಿ
ಬೆಂಗಳೂರು:
ಆಪರೇಷನ್‌ ಕಮಲ ಕಾರ್ಯಾಚರಣೆ ವಿರೋಧಿಸಿ ಗುರುವಾರ ಯಡಿಯೂರಪ್ಪ ನಿವಾಸದ ಎದುರು ಕಾಂಗ್ರೆಸ್‌ ಹಮ್ಮಿಕೊಂಡಿದ್ದ ಪ್ರತಿಭಟನೆ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು.

ಯುವ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಬಿಎ ಸ್‌ವೈ ಮನೆಗೆ ನುಗ್ಗಲು ಯತ್ನಿಸಿದಾಗ ಅಲ್ಲಿದ್ದ ಬಿಜೆಪಿ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದರು. ಇದೇ ಸಮಯಕ್ಕೆ  ನಿವಾಸದ ಒಳಗಿದ್ದ ಶಾಸಕರಾದ ರೇಣುಕಾಚಾರ್ಯ ಹಾಗೂ ಎಸ್‌.ಆರ್‌.ವಿಶ್ವನಾಥ್‌ ಹೊರಗೆ ಬಂದು ಕಾಂಗ್ರೆಸ್‌ ಕಾರ್ಯಕರ್ತರ ವಿರುದ್ಧ ಹರಿಹಾಯ್ದರು.

ಆಗ ಪೊಲೀಸರು ಹಾಕಿದ್ದ ರಸ್ತೆ ವಿಭಜಕ ತಳ್ಳಿಕೊಂಡು ಕಾರ್ಯಕರ್ತರು ನುಗ್ಗಿದರು. ರೇಣುಕಾಚಾರ್ಯ ಅವರನ್ನು ಹಿಡಿದು ಎಳೆದಾಡಿದರು. ಈ ಸಂದರ್ಭದಲ್ಲಿ ಎರಡೂ ಪಕ್ಷಗಳ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ಗಮನಿಸಿದ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ಶಾಂತಗೊಳಿಸಿದರು. ಇಷ್ಟಾದರೂ ಕಾಂಗ್ರೆಸ್‌ ಕಾರ್ಯಕರ್ತರು ಆಲ್ಲಿಂದ ಕದಲದೇ ಕೆಲಹೊತ್ತು ಬಿಜೆಪಿ ಹಾಗೂ ಯಡಿಯೂರಪ್ಪ ವಿರುದ್ಧ ಘೋಷಣೆ ಕೂಗಿದರು. ಸರ್ಕಾರವನ್ನು ಅಸ್ಥಿರಗೊಳಿಸುವ ಉದ್ದೇಶದಿಂದ ಬಿಜೆಪಿ ಆಪರೇಷನ್‌ ಕಮಲ ನಡೆಸುತ್ತಿದೆ ಎಂದು ದೂರಿದರು.

ಕಾಂಗ್ರೆಸ್‌ ಕಾರ್ಯಕರ್ತರು ಯಡಿಯೂರಪ್ಪ ನಿವಾಸದ ಮುಂದೆ ಪ್ರತಿಭಟನೆ ನಡೆಸಲು ಸಿಎಂ ಕುಮಾರಸ್ವಾಮಿಯವರೇ ಕಾರಣ. ದಂಗೆ ಏಳಿ ಅಂದಾಕ್ಷಣ ಕಾಂಗ್ರೆಸ್‌ ಕಾರ್ಯಕರ್ತರು ಯಡಿಯೂರಪ್ಪ ಮನೆಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಪ್ರತಿಪಕ್ಷ ನಾಯಕರ ಮನೆಗೆ ಭದ್ರತೆ ಇಲ್ಲ ಎಂದರೆ ರಾಜ್ಯದ ಕಾನೂನು ಸುವ್ಯವಸ್ಥೆ ಗತಿ ಏನು?
– ಶೋಭಾ ಕರಂದ್ಲಾಜೆ,ಮಾಜಿ ಸಂಸದೆ

ಕಾಂಗ್ರೆಸ್‌, ಜೆಡಿಎಸ್‌ನ ಗೂಂಡಾಗಳು ದಾಂಧಲೆ ನಡೆಸಿ ಮನೆಗೆ ನುಗ್ಗಲು ಯತ್ನಿಸಿರುವುದು ಖಂಡನೀಯ. ನಮ್ಮ ಶಾಸಕರು, ಕಾರ್ಯಕರ್ತರು ಮನೆಯಲ್ಲಿರದಿದ್ದಿದ್ದರೆ ಯಡಿಯೂರಪ್ಪ ಅವರ ಪ್ರಾಣ ತೆಗೆಯಲು ಆ ಗೂಂಡಾಗಳು ಹಿಂಜರಿಯುತ್ತಿರಲಿಲ್ಲ. ಅಷ್ಟರ ಮಟ್ಟಿಗೆ ಪುಂಡಾಟಿಕೆ ತೋರಿದ್ದಾರೆ.
– ಗೋವಿಂದ ಕಾರಜೋಳ, ವಿಧಾನಸಭೆ ಪ್ರತಿಪಕ್ಷ ಉಪನಾಯಕ

ವಿಧಾನಸಭೆ ಪ್ರತಿಪಕ್ಷ ನಾಯಕರು ಹಾಗೂ ಅವರ ಮನೆಗೆ ರಕ್ಷಣೆ ನೀಡುವುದು ಆಡಳಿತ ಪಕ್ಷದ ಕರ್ತವ್ಯ. ವಿರೋಧಪಕ್ಷದವರ ಆರೋಪ ಸಹಜ. ಹಾಗೆಂದು ಬಾಯಿ ಮುಚ್ಚಿಸುವುದು, ಅವರು ಮನೆಯಿಂದ ಹೊರಗೆ ಹೋಗದಂತೆ ತಡೆಯುವುದು, ಹಲ್ಲೆ ನಡೆಯಬೇಕು ಎಂಬ ರೀತಿಯಲ್ಲಿ ಹೇಳಿಕೆ ನೀಡುತ್ತಿರುವುದು ಖಂಡನೀಯ.
– ಆರ್‌. ಅಶೋಕ್‌, ಮಾಜಿ ಉಪಮುಖ್ಯಮಂತ್ರಿ

ಡಿಕೆಶಿ ಭೇಟಿ ಮಾಡಿದ ಸಿಎಂ,ದೇವೇಗೌಡ
ಸಚಿವ ಡಿಕೆ ಶಿವಕುಮಾರ್‌ ಚಿಕಿತ್ಸೆಗೆ ದಾಖಲಾಗಿರುವ ಖಾಸಗಿ ಆಸ್ಪತ್ರೆ ಗುರುವಾರ ರಾಜಕೀಯ ಚರ್ಚೆಗೆ ಪಡಸಾಲೆಯಾಗಿತ್ತು. ಬೆಳಿಗ್ಗೆ ಮುಖ್ಯ ಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಆಸ್ಪತ್ರೆಗೆ ತೆರಳಿ ಆರೋಗ್ಯ ವಿಚಾರಿಸಿದರಲ್ಲದೆ, ರಾಜಕೀಯ ಬೆಳವಣಿಗೆ ಕುರಿತು ಚರ್ಚಿಸಿದರು. ಸಂಜೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಸಚಿವ ಡಿ.ಕೆ.ಶಿವಕುಮಾರ್‌ ಅವರ ಆರೋಗ್ಯ ವಿಚಾರಿಸಿದ್ದಾರೆ. ಶೀಘ್ರ ಗುಣಮುಖರಾಗಿ ಎಂದು ಹಾರೈಸಿದರು. ಗುರುವಾರ ರಾತ್ರಿ ವೇಳೆ ಡಿಕೆಶಿ ಅವರನ್ನು ಡಿಶ್ಚಾರ್ಜ್‌ ಮಾಡಲಾಗಿದೆ.

ರಾಜ್ಯ ಸರ್ಕಾರ ನಮ್ಮ ಕೈಯಲ್ಲಿದೆ ಎಂದು ಗೊತ್ತಿರಲಿ.ಒಂದು ದಿನದಲ್ಲಿ ಏನುಬೇಕಾದರೂ ಮಾಡಬಹುದು.
– ಎಚ್‌.ಡಿ.ಕುಮಾರಸ್ವಾಮಿ,ಮುಖ್ಯಮಂತ್ರಿ

ರಾಜ್ಯ ಸರ್ಕಾರ ನಿಮ್ಮ ಕೈಲಿದ್ದರೆ ಕೇಂದ್ರ ಸರ್ಕಾರ ನಮ್ಮ ಕೈಲಿದೆ ಎನ್ನುವುದನ್ನು ಮರೆಯಬೇಡಿ.
– ಬಿ.ಎಸ್‌. ಯಡಿಯೂರಪ್ಪ,ಮಾಜಿ ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next