Advertisement

ಕುಮಾರಸ್ವಾಮಿ ಜಾತ್ಯತೀತತೆಯ ವ್ಯಾಪ್ತಿಯ ಬಗ್ಗೆ ತಿಳಿದುಕೊಳ್ಳಬೇಕಾದ ಅಗತ್ಯವಿದೆ: ಮಹದೇವಪ್ಪ

02:17 PM Jun 12, 2022 | Team Udayavani |

ಮೈಸೂರು: ಈ ಹಿಂದೆ ಜಾತ್ಯತೀತತೆ ಎಂದರೆ ಏನು ಎಂದು ಪ್ರಶ್ನಿಸಿದ್ದ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರು ಜಾತ್ಯತೀತತೆಯ ಬ್ಯಾನರ್ ಹಾಗೂ ಇದರ ವ್ಯಾಪ್ತಿಯ ಬಗ್ಗೆ ತಿಳಿದುಕೊಳ್ಳಬೇಕಾದ ಅಗತ್ಯ ಸಾಕಷ್ಟಿದೆ ಎಂದು ಕಾಂಗ್ರೆಸ್ಸಿನ ಹಿರಿಯ ನಾಯಕ ಮಾಜಿ ಸಚಿವ ಡಾ. ಎಚ್. ಸಿ. ಮಹದೇವಪ್ಪ ಹೇಳಿದ್ದಾರೆ.

Advertisement

ಬಿಜೆಪಿಯನ್ನು ಸೋಲಿಸಲು, ತನಗಿಂತ ಹೆಚ್ಚು ಮತ ಹೊಂದಿರುವ ಜೆಡಿಎಸ್‌ ಅನ್ನು ಕಾಂಗ್ರೆಸ್‌ ಬೆಂಬಲಿಸಬೇಕು ಎಂಬ ತರ್ಕ ಬಳಸುವ ಕುಮಾರಸ್ವಾಮಿ ಅವರಿಗೆ 2018 ರ ಮೈತ್ರಿಯ ವೇಳೆ ಕಾಂಗ್ರೆಸ್ ಪಕ್ಷವು ಹೆಚ್ಚು ಮತ ಹೊಂದಿತ್ತು ಎಂಬ ಅಂಶವನ್ನು ಬದಿಗೆ ಸರಿಸಿ ತಾವೇ ಮುಖ್ಯಮಂತ್ರಿ ಆಗುತ್ತಾರೆ. ದಿನಕ್ಕೊಮ್ಮೆ ಗಂಟೆಗೊಮ್ಮೆ ಬದಲಾಗುವ ಇವರ ರೀತಿಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ಸ್ವತಃ ಜೆಡಿಎಸ್ ಪಕ್ಷದ ಕಾರ್ಯಕರ್ತರೇ ಸೋತಿದ್ದು ಇವರ ಮೇಲೆ ನಂಬಿಕೆ ಕಳೆದುಕೊಳ್ಳುವ ಸ್ಥಿತಿಗೆ ತಲುಪಿದ್ದಾರೆ ಎಂದು ಅವರು ಭಾನುವಾರ ಇಲ್ಲಿ ಪತ್ರಿಕಾ ಹೇಳಿಕೆ ನೀಡಿದ್ದಾರೆ.

ಮೈತ್ರಿ ಇಲ್ಲದಿದ್ದರೆ ರಾಜ್ಯಸಭೆಯಲ್ಲಿ ಸಂಖ್ಯೆಯ ಆಧಾರಿತವಾಗಿ ಬಿಜೆಪಿಯೇ ಗೆಲ್ಲುತ್ತಿತ್ತು ಎಂಬುದು ಎಲ್ಲರಿಗೂ ಗೊತ್ತಿದ್ದ ವಿಚಾರವಾಗಿತ್ತು. ಆದರೆ ಬಿಜೆಪಿ ಗೆಲ್ಲಲು ಕಾಂಗ್ರೆಸ್ ಪಕ್ಷವೇ ಕಾರಣ ಎಂದು ಹೇಳುತ್ತಿರುವ ಕುಮಾರಸ್ವಾಮಿ ಅವರು, ಕಾಂಗ್ರೆಸ್ ಪಕ್ಷದ ಬೆಂಬಲ ಸಿಗಲಿಲ್ಲ ಎಂದು ಅವರ ಮೇಲೆಯೇ ಗೂಬೆ ಕೂರಿಸಲು ಹೊರಟಿರುವುದು ಹಾಸ್ಯಾಸ್ಪದ ಸಂಗತಿಯಾಗಿದೆ ಎಂದಿದ್ದಾರೆ.

ರೈತ ವಿರೋಧಿಯಾಗಿದ್ದ ಭೂ ಸುಧಾರಣೆ ತಿದ್ದುಪಡಿ ಕಾಯ್ದೆಯ ವಿರುದ್ಧ ಸದನದ ಹೊರಗೆ ಪ್ರತಿಭಟಿಸಿ ಸದನದ ಒಳಗೆ ಬೆಂಬಲಿಸುವ ಮೂಲಕ ಮಹಾ ನಾಟಕ ಆಡಿದ್ದ ಜೆಡಿಎಸ್ ನವರು, ನಿರ್ದಿಷ್ಟ ಕೋಮಿನ ಜನರನ್ನು ಟಾರ್ಗೆಟ್ ಮಾಡಿಕೊಂಡು ಈಗಾಗಲೇ ಜಾರಿಯಲ್ಲಿದ್ದರೂ ಮತ್ತೊಮ್ಮೆ ಅದೇ ಕಾನೂನನ್ನು ರೂಪಿಸಲು ಹೊರಟಿದ್ದ ಮತಾಂತರ ನಿಷೇಧ ಕಾಯ್ದೆಯ ವಿರುದ್ಧ ದನಿ ಎತ್ತದೇ ಬೆಂಬಲಿಸಿದರು. ಜೊತೆಗೆ ಅತಿ ಹೆಚ್ಚಿನ ಗೋಮಾಂಸ ರಫ್ತು ಮಾಡುತ್ತಲೇ ಗೋಹತ್ಯೆ ನಿಷೇಧ ಎಂಬ ನಾಟಕವಾಡಿದ ಬಿಜೆಪಿಗರ ದ್ವಿಮುಖ ನೀತಿಯ ವಿರುದ್ದ ಮಾತನ್ನೇ ಆಡದ ಜೆಡಿಎಸ್ ನಲ್ಲಿ ಜಾತ್ಯ ತೀತತೆ ಮತ್ತು ಜನಪರ ನೀತಿ ಉಳಿದಿದೆ ಎಂದು ನಾವು ಭಾವಿಸುವುದಾದರೂ ಹೇಗೆ? ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ:ಪ್ರಿಯಾಂಕ್ ಖರ್ಗೆಗೆ ‘ಚಡ್ಡಿ’ ಬಗ್ಗೆ ಮಾತನಾಡುವ ನೈತಿಕತೆಯಿಲ್ಲ: ಚಲವಾದಿ ನಾರಾಯಣಸ್ವಾಮಿ

Advertisement

ಅಧಿಕಾರ ಪಡೆಯುವುದಕ್ಕೆ ಮಾತ್ರ ಜಾತ್ಯತೀತತೆ ಎಂಬ ಪದವನ್ನು ಬಳಸಿಕೊಳ್ಳುವ ಕುಮಾರಸ್ವಾಮಿ ಅವರಿಗೆ, ಜಾತ್ಯತೀತತೆ ಎಂಬುದು ಅಧಿಕಾರವನ್ನು ಬಿಟ್ಟು ಕೊಡಬೇಕಾದಾಗಲೂ ಕೂಡಾ ಸಮನಾಗಿರುತ್ತದೆ ಎಂಬ ಅಂಶವು ಅರ್ಥ ಅರ್ಥವಾಗಬೇಕಲ್ಲವೇ? ಲೋಕಸಭೆಯಲ್ಲಿ ಸೋತ ದೇವೇಗೌಡರನ್ನು ಕಾಂಗ್ರೆಸ್ ಪಕ್ಷ ಬೆಂಬಲಿಸಿ ರಾಜ್ಯಸಭೆಗೆ ಕಳಿಸಿದೆ. 37 ಸ್ಥಾನವಿದ್ದ ಜೆಡಿಎಸ್ ಗೆ ಮುಖ್ಯಮಂತ್ರಿ ಸ್ಥಾನವನ್ನೂ ನೀಡಿದೆ. ಈ ನಡೆಯನ್ನು ಜೆಡಿಎಸ್ ಗೌರವಿಸಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸದೇ ಇದ್ದ ಮೇಲೆ, ಅವರು ಯಾವ ಜಾತ್ಯತೀತತೆ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಅವರು ಕೇಳಿದ್ದಾರೆ.

ಜಾತ್ಯತೀತ ರಾಜಕಾರಣ ಎಂಬುದು ಗಂಟೆಗೊಂದು ಸಲ ಬದಲಿಸುವ ಇವರ ಅಧಿಕಾರ ಮೋಹಿ ಮನಸ್ಥಿತಿಗೆ ಬಲಿಯಾಗುತ್ತದೆಯಲ್ಲಾ ಎಂದು ನೆನೆದು ಬೇಸರವಾಗುತ್ತಿದೆ ಎಂದು ಡಾ. ಮಹದೇವಪ್ಪ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next