Advertisement

ಆರೇಳು ತಿಂಗಳಲ್ಲಿ ಕುಮಾರಸ್ವಾಮಿಯೇ ಮುಖ್ಯಮಂತ್ರಿ!

09:01 PM Aug 14, 2022 | Team Udayavani |

ಬೆಂಗಳೂರು: ಇನ್ನು 6-7 ತಿಂಗಳಲ್ಲಿ ನಿಮ್ಮ ಕುಮಾರಸ್ವಾಮಿ ಮುಖ್ಯಮಂತ್ರಿ ಆಗುವುದನ್ನು ಯಾರು ತಪ್ಪಿಸಲು ಸಾಧ್ಯವಿಲ್ಲ.  ಕಾಂಗ್ರೆಸ್ ಮತ್ತು ಬಿಜೆಪಿಗಿಂತ ಜೆಡಿಎಸ್ ಪಕ್ಷವು ಹೆಚ್ಚು ಕ್ಷೇತ್ರಗಳಲ್ಲಿ ಜಯಗಳಿಸಲಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ವಿಶ್ವಾಸ ವ್ಯಕ್ತಪಡಿಸಿದರು.

Advertisement

ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಇಂದು ಮತಗಟ್ಟೆ ಮಟ್ಟದ ಜೆಡಿಎಸ್ ಕಾರ್ಯಾಗಾರದಲ್ಲಿ ಸಮಾರೋಪ ಭಾಷಣ ಮಾಡಿದ ಅವರು, ರಾಷ್ಟ್ರೀಯ ಪಕ್ಷಗಳು ನಮ್ಮ ಪಕ್ಷವನ್ನು ಲಘುವಾಗಿ ಕಾಣುತ್ತಿವೆ. ನಮ್ಮ ಶಕ್ತಿ ಏನೆಂದು ವಿಧಾನಸಭೆ ಚುನಾವಣೆ ನಡೆದ ನಂತರ ಗೊತ್ತಾಗಲಿದೆ ಎಂದು ಮಾರ್ಮಿಕವಾಗಿ ನುಡಿದರು.

ಗುಪ್ತಗಾಮಿನಿಯಂತೆ ಪಕ್ಷದ ಪರವಾಗಿ ಜನರ ಒಲವು ವ್ಯಕ್ತವಾಗುತ್ತಿದೆ. ಎರಡೂ ರಾಷ್ಟ್ರೀಯ ಪಕ್ಷಗಳ ರಾಜಕೀಯ ಚೇಷ್ಟೆಗಳನ್ನು ನೋಡಿರುವ ಕನ್ನಡಿಗರು ರೋಸಿ ಹೋಗಿದ್ದಾರೆ ಎಂದು ಅವರು ಹೇಳಿದರು.

ನೀವು ನಿಮ್ಮ ಶಾಸಕರಿಗೆ ಬಲ ತುಂಬುವ ಕೆಲಸ ಆಗಬೇಕಿದೆ. ಬಿಬಿಎಂಪಿ ವಾರ್ಡ್ ಮೀಸಲಾತಿಯನ್ನು ಬಿಜೆಪಿ ಸರಕಾರ ತನಗೆ ಬೇಕಾದ ರೀತಿ ಮಾಡಿಕೊಂಡಿದೆ. ಅದೇನೇ ಆದರೂ ನಾವು ದಾಸರಹಳ್ಳಿ ಕ್ಷೇತ್ರದಲ್ಲಿ 10 ವಾರ್ಡ್ ಆದರೂ ಗೆಲ್ಲಲೇಬೇಕು ಎಂದು ಒತ್ತಿ ಹೇಳಿದರು.

ಬಿಜೆಪಿ ಸರಕಾರ ಎಲ್ಲ ಕ್ಷೇತ್ರಗಳಲ್ಲೂ ವಿಫಲವಾಗಿದೆ. ಕೋವಿಡ್ ನಿಂದ ಮೃತಪಟ್ಟವರಿಗೆ ಪರಿಹಾರ ಹಣ ಕೊಡುತ್ತೇವೆ ಎಂದು ಹೇಳಿ ಆಮೇಲೆ ಕೊಡಲಿಲ್ಲ. ಬೆಂಗಳೂರಿನಲ್ಲಿ ಯಾವುದೇ ಕೆಲಸ ಮಾಡದೇ ಹಣವನ್ನು ಲೂಟಿ ಮಾಡುತ್ತಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದರು.

Advertisement

ಇದನ್ನೂ ಓದಿ: ಸಿಎಂ ಇತಿಹಾಸದ ಸತ್ಯ ಎತ್ತಿ ಹಿಡಿಯಲಿ: ಡಿಕೆ ಶಿವಕುಮಾರ್‌

ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಆಡಳಿತ ನಡೆಸಿ ಹೇಗೆ ನಡೆದುಕೊಂಡಿವೆ ಎನ್ನುವುದನ್ನು ಜನ ನೋಡಿದ್ದಾರೆ. ನಮಗೂ ಒಂದು ಅವಕಾಶ ಕೊಡಿ. ದಾಸರಹಳ್ಳಿಯನ್ನು ಮಾದರಿ ವಿಧಾನಸಭಾ ಕ್ಷೇತ್ರವಾಗಿ ಮಾಡುತ್ತೇವೆ. ನಿಮ್ಮ ದುಡುಮೆಯ ಋಣದ ಭಾರವನ್ನು ಇಟ್ಟೀದ್ದೀರಾ. ಅದಕ್ಕೆ ಗೌರವ ಕೊಡುವ ಕೆಲಸ ಮಾಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು.

ಅನುದಾನ ತಾರತಮ್ಯ: ಶಾಸಕರ ಕಿಡಿ

ದಾಸರಹಳ್ಳಿ ಶಾಸಕ ಮಂಜುನಾಥ್ ಅವರು ಮಾತನಾಡಿ, ಕ್ಷೇತ್ರದ ಪ್ರಗತಿಗೆ ಹಗಲಿರುಳು ಕೆಲಸ ಮಾಡಿದ್ದೇನೆ. ಬಿಜೆಪಿ ಸರಕಾರ ಹೆಜ್ಜೆಹೆಜ್ಜೆಗೂ ಕಿರುಕುಳ ನೀಡಿದರೂ ಎದೆಗುಂದದೆ ಜನರ ಸೇವೆ ಮಾಡಿದ್ದೇನೆ ಎಂದರು.

ಅಂಗೈ ಹುಣ್ಣಿಗೆ ಕನ್ನಡಿ ಬೇಕಿಲ್ಲ ಎನ್ನುವಂತೆ ನಾನು ಮಾಡಿರುವ ಕೆಲಸಗಳು ಕಣ್ಮುಂದೆಯೇ ಕಾಣುತ್ತಿವೆ. ಸರಕಾರ ಅನುದಾನ ನೀಡಿಕೆಯಲ್ಲಿ ತಾರತಮ್ಯ ಎಸಗಿದರು ಕೂಡ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಸಹಕಾರದೊಂದಿಗೆ ಉತ್ತಮ ಕೆಲಸ ಮಾಡಿದ್ದೇನೆ ಎಂದು ಶಾಸಕರು ಹೇಳಿದರು.

ಇದೇ ವೇಳೆ ವಿಧಾನ ಪರಿಷತ್ ಸದಸ್ಯರಾದ ಕೆ.ಎನ್.ತಿಪ್ಪೇಸ್ವಾಮಿ ಅವರು ಬೂತ್ ಮಟ್ಟದಲ್ಲಿ ಹೇಗೆ ಕೆಲಸ ಮಾಡಬೇಕು ಎಂಬ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು.

ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಎಲ್ಲ ವಾರ್ಡುಗಳ ಬೂತ್ ಮಟ್ಟದ ಅಧ್ಯಕ್ಷರುಗಳು ಹಾಗೂ ಮುಖಂಡರು,  ಕಾರ್ಯಕರ್ತರು ಈ ಕಾರ್ಯಾಗಾರದಲ್ಲಿ ಭಾಗಿಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next