Advertisement

ಸಿಎಂ ಜನತಾದರ್ಶನ: ಮನವಿಗಳ ಮಹಾಪೂರ

06:00 AM May 30, 2018 | Team Udayavani |

ಬೆಂಗಳೂರು: ಅಧಿಕಾರ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರಿಗೆ ಗೃಹ ಕಚೇರಿ ಕೃಷ್ಣಾದಲ್ಲಿ ಬುಧವಾರ “ಜನಸ್ಪಂದನ’ ಕಾರ್ಯಕ್ರಮ ನಡೆಸಿದ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ನೂರಾರು ಅಹವಾಲುಗಳು ಸಲ್ಲಿಕೆಯಾದವು. ಆ ಪೈಕಿ ಚಿಕಿತ್ಸಾ ವೆಚ್ಚ ಭರಿಸಿ, ಉದ್ಯೋಗ ಕೊಡಿಸಿ, ನಿವೇಶನ ಹಂಚಿಕೆ ಮಾಡಿ, ಮನೆ ನಿರ್ಮಿಸಿಕೊಳ್ಳಲು ಆರ್ಥಿಕ ನೆರವು ನೀಡಿ, ಉನ್ನತ ವ್ಯಾಸಂಗಕ್ಕೆ ನೆರವು ಕೊಡಿಸಿ ಎಂಬ ಮನವಿಗಳೇ ಹೆಚ್ಚಾಗಿದ್ದವು.

Advertisement

ದೂರದ ಬೀದರ್‌, ಕಲಬುರಗಿ, ಹಾವೇರಿ, ದಾವಣಗೆರೆ, ತುಮಕೂರು, ಹಾಸನ, ಮಂಡ್ಯ, ಮೈಸೂರು, ರಾಮನಗರ ಮತ್ತಿತರ  ಜಿಲ್ಲೆಗಳಿಂದ ಆಗಮಿಸಿದ್ದ ನೂರಾರು ಜನರು ಜನತಾ ದರ್ಶನದಲ್ಲಿ ಪಾಲ್ಗೊಂಡು ತಮ್ಮ ಸಮಸ್ಯೆ ಹೇಳಿಕೊಂಡರು.ಸ್ವೀಕರಿಸಿದ ಮನವಿಗಳ ಪೈಕಿ  ಚಿಕಿತ್ಸಾ ವೆಚ್ಚದ ಮನವಿಗಳ ಸಂಖ್ಯೆಯೇ ಹೆಚ್ಚು.

ಅರ್ಜಿ ಸಲ್ಲಿಸಲು ವಿಕಲಚೇತನ ರಿಗೆ ಮೊದಲು ಅವಕಾಶ ಮಾಡಿಕೊಡಲಾಗಿತ್ತು. ಅನಂತರ ಇತರ ಸಾರ್ವಜನಿಕ ರಿಗೆ ಅವಕಾಶ ಕಲ್ಪಿಸಲಾಗಿತ್ತು. ಹಿರಿಯ ನಾಗರಿಕರಿಗೆ ವಿಧಾನಸೌಧದ ಎಲ್ಲ ಪ್ರವೇಶ ದ್ವಾರಗಳಲ್ಲಿ ಮುಕ್ತ ಪ್ರವೇಶಕ್ಕೆ ಅವಕಾಶ ಕಲ್ಪಿಸಿಕೊಡಬೇಕು ಎಂಬ ಮನವಿಯೂ ಸಲ್ಲಿಕೆಯಾಯಿತು. 

ಅಹವಾಲು ಸ್ವೀಕರಿಸಿದ ಮುಖ್ಯ ಮಂತ್ರಿಯವರು ಕೆಲವು ಪ್ರಕರಣಗಳಲ್ಲಿ ಜಿಲ್ಲಾಧಿಕಾರಿಗಳು ಮತ್ತು ಸಂಬಂಧ ಪಟ್ಟ ಅಧಿಕಾರಿಗಳೊಂದಿಗೆ ಖುದ್ದು ದೂರವಾಣಿ ಮೂಲಕ ಮಾತನಾಡಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಉಳಿದಂತೆ ಕೆಲವು ಅರ್ಜಿಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ ಮುಂದಿನ ಕ್ರಮಗಳ ಬಗ್ಗೆ ಅಗತ್ಯ ಕ್ರಮಕೈಗೊಳ್ಳುವಂತೆ  ತಮ್ಮ ಆಪ್ತ ಸಿಬಂದಿಗೆ ಸೂಚನೆ ಕೊಟ್ಟರು.

ಮೂರು ಗಂಟೆ ವಿಳಂಬ
ಬೆಳಗ್ಗೆ 10 ಗಂಟೆಗೆ ಜನತಾದರ್ಶನ ನಿಗದಿಯಾಗಿತ್ತು. ಅದಕ್ಕಾಗಿ ಬೆಳಿಗ್ಗೆ 9 ಗಂಟೆಯಿಂದಲೇ ಸಾರ್ವಜನಿಕರು ಕಾದು ಕುಳಿತಿದ್ದರು. ಆದರೆ, ಜನತಾದರ್ಶನ ಮೂರು ಗಂಟೆ ವಿಳಂಬವಾಯಿತು. ಬೆಳಗ್ಗೆಯಿಂದ ಕಾದು ಬೇಸತ್ತಿದ ಸಾರ್ವಜನಿಕರಿಗೆ ಮುಖ್ಯಮಂತ್ರಿ ಕಚೇರಿಯಿಂದ ಟೀ, ಬಿಸ್ಕತ್‌ ಹಾಗೂ ಮಜ್ಜಿಗೆಯ ವ್ಯವಸ್ಥೆ ಮಾಡಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next