ಬೆಂಗಳೂರು: ಸಮ್ಮಿಶ್ರ ಸರ್ಕಾರದ ಕಾರ್ಯವೈಖರಿ ಬಗ್ಗೆ ಮತ್ತೆ ಅತೃಪ್ತಿ ಹೊರಹಾಕಿರುವ ಜೆಡಿಎಸ್‌ನ ಹಿರಿಯ ನಾಯಕ ಎಚ್.ವಿಶ್ವನಾಥ್, ‘ನನ್ನ ಅನುಭವವನ್ನು ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಸಿದ್ದರಾಮಯ್ಯ ಅವರಾಗಲಿ, ಇದೀಗ ಮುಖ್ಯಮಂತ್ರಿಯಾಗಿರುವಕುಮಾರಸ್ವಾಮಿಯಾಗಲಿ ಉಪಯೋಗಿಸಿಕೊಂಡಿಲ್ಲ’ ಎಂದು ಹೇಳಿದ್ದಾರೆ.
ಒಬ್ಬ ನಾಯಕನನ್ನು ರಾಜಕೀಯವಾಗಿ ಕೊಲ್ಲುವುದು ಒಳ್ಳೆಯದಲ್ಲ. ಮುಖ್ಯಮಂತ್ರಿಯವರ ಜತೆ ಕೆಲಸ ಮಾಡಬೇಕೆಂಬ ಆಸೆ ಇತ್ತು. ಆದರೆ ಸನ್ನಿವೇಶ ಅದಕ್ಕೆ ಆಸ್ಪದ ಕೊಟ್ಟಿಲ್ಲ ಎಂದು ಪರೋಕ್ಷವಾಗಿ ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿ ಕೆಲಸ ಮಾಡುವ ಬಯಕೆ ಹೊರ ಹಾಕಿದರು. ಜತೆಗೆ, ಮಂತ್ರಿಗಿರಿಗೆ ಯಾರ ಮನೆ ಬಾಗಿಲು ತಟ್ಟೋ ಜಾಯಮಾನ ನನ್ನದಲ್ಲ ಎಂದೂ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನೀಡಿರುವ ನನ್ನ ರಾಜೀನಾಮೆ ಅಂಗೀಕರಿಸಿ ಎಂದು ಮತ್ತೂಮ್ಮೆ ಮನವಿ ಮಾಡಿದರು. ನನ್ನ ರಾಜೀನಾಮೆ ಅಂಗೀಕಾರ ಮಾಡದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಚಿಂತನೆ ನಡೆಸಬೇಕಾಗುತ್ತದೆ ಎಂದೂ ಹೇಳಿದರು.
ಪಕ್ಷದ ಹಿತದೃಷ್ಟಿಯಿಂದ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ವಹಿಸುವುದು ಉತ್ತಮ ಎಂದು ಸಲಹೆ ನೀಡಿರುವ ಅವರು, ಈಗಿನ ಸ್ಥಿತಿಯಲ್ಲಿ ಪಕ್ಷ ಸಂಘಟಿಸಲು ಕುಮಾರಸ್ವಾಮಿಯವರೇ ಸೂಕ್ತ ವ್ಯಕ್ತಿ ಎಂದು ತಿಳಿಸಿದರು.
ನೂತನ ಸಚಿವರಿಗೆ ಖಾತೆ ನೀಡದಿರುವುದು ಹಾಗೂ ಶಿಕ್ಷಣ ಇಲಾಖೆ ಹೊಣೆಗಾರಿಕೆ ಬೇರೆಯವರಿಗೆ ವಹಿಸದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಶಿಕ್ಷಣ ಇಲಾಖೆ ನಿರ್ಲಕ್ಷ್ಯ ಮಾಡುವ ಸರ್ಕಾರವನ್ನು ಜನತೆ ಕ್ಷಮಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ನೂತನ ಸಚಿವರಿಗೆ ಬೇಗ ಖಾತೆ ಹಂಚಿಕೆ ಮಾಡಿ. ಅಲ್ಪಸಂಖ್ಯಾತರರಿಗೆ ಸಂಪುಟದಲ್ಲಿ ಸ್ಥಾನ ನೀಡದಿರುವ ಬಗ್ಗೆ ನನಗೆ ಬೇಸರವಿದೆ. ಆ ಬಗ್ಗೆ ಇನ್ನೂ ಕಾಲ ಮಿಂಚಿಲ್ಲ, ವರಿಷ್ಠರು ನಿರ್ಧಾರ ಮಾಡಲಿ ಎಂದು ಹೇಳಿದರು.
ನಾನು ಕಾಂಗ್ರೆಸ್‌ನಲ್ಲಿ ಇದ್ದಿದ್ದರೆ ರೋಷನ್‌ಬೇಗ್ ಸ್ಥಿತಿ ನನಗೂ ಬರುತ್ತಿತ್ತು. ಅಲ್ಪಸಂಖ್ಯಾತರ ಮುಖಂಡ ರೋಷನ್‌ಬೇಗ್ ಅವರನ್ನು ಅಮಾನತು ಮಾಡಿಸಿದ್ದಾರೆ. ಅಲ್ಲಿದ್ದಿದ್ದರೆ ನನ್ನ ಕಥೆಯೂ ಇದಕ್ಕಿಂತ ಹೊರತಾಗಿರಲಿಲ್ಲ. ಅಹಿಂದ ನಾಯಕ
ಎಂದು ಕರೆಸಿಕೊಳ್ಳುವ ಸಿದ್ದರಾಮಯ್ಯನವರೇ, ಸಮನ್ವಯದ ಅರ್ಥವೇ ಗೊತ್ತಿಲ್ಲದ ನೀವ್ಯಾವ ಸೀಮೆ ಅಧ್ಯಕ್ಷರ್ರೀ..?
– ಎಚ್.ವಿಶ್ವನಾಥ್, ಜೆಡಿಎಸ್ ಶಾಸಕ