Advertisement

ವಿಧಾನಸಭೆ ಚುನಾವಣೆಯಲ್ಲಿ ನಿಖಿಲ್ ಸ್ಪರ್ಧೆಯ ಬಗ್ಗೆ ಸ್ಪಷ್ಟನೆ ನೀಡಿದ ಕುಮಾರಸ್ವಾಮಿ

12:41 PM Jul 30, 2022 | Team Udayavani |

ಬೀದರ್: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡುವುದಿಲ್ಲ, ಅವರನ್ನು ಪೂರ್ಣ ಪ್ರಮಾಣದಲ್ಲಿ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

Advertisement

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ನಡುವಳಿಕೆಗಳನ್ನು ಗಮನಿಸಿದರೆ ಡಿಸೆಂಬರ್ ವೇಳೆಗೆ ಸಾರ್ವತ್ರಿಕ ಚುನಾವಣೆ ನಡೆಯುವ ಸಾಧ್ಯತೆಗಳಿವೆ. ಚುನಾವಣಾ ಕಣಕ್ಕೆ ನಿಖಿಲ್ ಅವರನ್ನು ಇಳಿಸದೆ, 40 ಕ್ಷೇತ್ರಗಳಲ್ಲಿ ಪ್ರಚಾರದ ಜವಾಬ್ದಾರಿಯನ್ನು ಅವರಿಗೆ ವಹಿಸಲು ನಿರ್ಣಯಿಸಲಾಗಿದೆ ಎಂದು ಹೇಳಿದರು.

ಈ ಬಾರಿ ಸ್ವಂತ ಬಲದ ಮೇಲೆ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತಂದರೆ ರಾಜ್ಯದಲ್ಲಿನ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವ ವಿಶ್ವಾಸವನ್ನು ಜನರಲ್ಲಿ ಮೂಡಿಸಲಾಗುತ್ತಿದೆ. ನನ್ನ ಮಹತ್ವಕಾಂಕ್ಷಿ ಯೋಜನೆಗೆ ಮೂರ‍್ನಾಲ್ಕು ಲಕ್ಷ ಕೋಟಿ ರೂ. ಅನುದಾನದ ಅಗತ್ಯವಿದೆ. ಎರಡು ಸರ್ಕಾರಗಳು ಬಜೆಟ್‌ ನಲ್ಲಿ ಈಗ ನೀಡುತ್ತಿರುವ ಅನುದಾನದಲ್ಲಿ ನೂರು ವರ್ಷ ಕಳೆದರು ನೀರಾವರಿ ಯೋಜನೆಗಳು ಪೂರ್ಣಗೊಳಿಸಲು ಸಾಧ್ಯವಿಲ್ಲ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಈ ಸವಾಲನ್ನು ಗೆಲ್ಲುತ್ತೇನೆ ಎಂಬ ವಿಶ್ವಾಸ ಇದೆ ಎಂದರು.

ನಾಡಿನ ಸಂಪತ್ತು ಮತ್ತು ಖಜಾನೆ ಲೂಟಿಯಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಿದರೆ ಮತ್ತು ತೆರಿಗೆ ಸಂಗ್ರಹದಲ್ಲಿ ಆಗುತ್ತಿರುವ ಸೋರಿಕೆಯನ್ನು ತಡೆದರೆ ಕರ್ನಾಟಕದಲ್ಲಿ ನೀರಾವರಿ ಕಾರ್ಯಕ್ರಮಗಳಿಗೆ ಹಣದ ಕೊರತೆ ಆಗುವುದಿಲ್ಲ. ಕೇಂದ್ರ ಸರ್ಕಾರದ ಮುಂದೆ ಭಿಕ್ಷಾ ಪಾತ್ರೆಯೂ ಹಿಡಿಯುವುದು ಬೇಕಾಗಿಲ್ಲ ಎಂದು ಅಭಿಪ್ರಾಯಪಟ್ಟರು.

ರಾಜ್ಯಾದ್ಯಂತ ಜೆಡಿಎಸ್ ಹಮ್ಮಿಕೊಂಡಿರುವ ‘ಪಂಚರತ್ನ’ ರಥಯಾತ್ರೆಗೆ ಮುಂದಿನ ತಿಂಗಳು ಚಾಲನೆ ನೀಡಲಾಗುತ್ತಿದ್ದು, ಈಗಾಗಲೇ ರೂಪರೇಷ ಸಿದ್ಧಗೊಳಿಸಲಾಗಿದೆ. ಎರಡು ಹಂತಗಳ ಮೂಲಕ ಒಟ್ಟು 104 ಕ್ಷೇತ್ರಗಳಲ್ಲಿ ಈ ಯಾತ್ರೆ ಸಂಚರಿಸಲಿದ್ದು, ದಿನಕ್ಕೆ ಒಂದು ಕ್ಷೇತ್ರದಲ್ಲಿ 14-15 ಸಭೆಗಳನ್ನು ಆಯೋಜನೆ ಮತ್ತು ಒಂದು ರಾತ್ರಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

Advertisement

ಇದನ್ನೂ ಓದಿ:ಪ್ರವೀಣ ಹತ್ಯೆ: ಗೃಹ ಸಚಿವರ ನಿವಾಸಕ್ಕೆ ನುಗ್ಗಿ ದಾಂಧಲೆ ಮಾಡಿದ ಎಬಿವಿಪಿ‌ ಕಾರ್ಯಕರ್ತರು

ಕಲ್ಯಾಣ ಕರ್ನಾಟಕ ಭಾಗದಲ್ಲಿ ಪಕ್ಷದ ಸಂಘಟನೆ ಬಲಿಷ್ಠಗೊಳಿಸುವ ಉದ್ದೇಶದಿಂದ ಏಳು ಜಿಲ್ಲೆಗಳ ಜಿಲ್ಲಾಧ್ಯಕ್ಷರು ಮತ್ತು ಶಾಸಕರೊಂದಿಗೆ ಸಮಾಲೋಚನೆ ಸಭೆ ನಡೆಸಿದ್ದೇನೆ. ಕೆಲವು ಜಿಲ್ಲೆಗಳಲ್ಲಿ ಸಂಘಟನೆ ನಿರೀಕ್ಷಿತ ಮಟ್ಟದಲ್ಲಿ ಗಟ್ಟಿಯಾಗಿಲ್ಲ. ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಇನ್ನೂ ಅಗಬೇಕಿದೆ ಎಂದು ಹೇಳಿದ ಕುಮಾರಸ್ವಾಮಿ, ನಾವು ಎಲ್ಲಿ ಎಡವಿದ್ದೇವೆ ಎಂಬುದನ್ನು ತಜ್ಞರ ಬರವಣಿಗೆಗಳಿಂದ ಗ್ರಹಿಸಿಕೊಂಡಿದ್ದು, ಈ ದಿಸೆಯಲ್ಲಿ ಮುಂದಿನ ಹೆಜ್ಜೆಯನ್ನಿಡಲಾಗುವುದು ಎಂದು ತಿಳಿಸಿದರು.

ಮುಖ್ಯಮಂತ್ರಿಗಳಿದ್ದಾಗ ರೈತರ ಸಾಲ ಮನ್ನಾದಿಂದ ಆಗಿರುವ ಅನುಭವ ನನಗಿದೆ. ಸಾಲ ಮನ್ನಾ ತಾತ್ಕಾಲಿಕ ಅಷ್ಟೇ.  ಹಾಗಾಗಿ ಮತ್ತೆ ಅಧಿಕಾರಕ್ಕೆ ಬಂದರೇ ರೈತರು ಕೃಷಿ ಚಟುವಟಿಕೆಗಳಿಗಗಿ ಸಾಲ ಮಾಡಿಕೊಳ್ಳದಂತೆ ಯೋಜನೆಗಳನ್ನು ರೂಪಿಸಲು ಚಿಂತನೆ ಹೊಂದಿದ್ದೆನೆ ಎಂದು ಹೇಳಿದರು.

ರಾಜ್ಯದಲ್ಲಿ ಆಡಳಿತ ನಡೆಸುವಲ್ಲಿ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಒಂದೆಡೆ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದರೆ, ಮತ್ತೊಂದೆಡೆ ಬಡವರು, ಜನರ ಸಂಕಷ್ಟಗಳಿಗೆ ಸ್ಪಂದನೆ ಸಿಗುತ್ತಿಲ್ಲ. ಕೋವಿಡ್ ಪರಿಹಾರ ಕೇವಲ ಜಾಹೀರಾತಿಗೆ ಮಾತ್ರ ಸೀಮಿತವಾಗುತ್ತಿದ್ದು, ಈವರೆಗೆ ಹಣ ಬಿಡುಗಡೆ ಆಗುತ್ತಿಲ್ಲ. ಬೆಳೆ ಪರಿಹಾರ ವಿತರಣೆಯಲ್ಲಿ ಸರ್ಕಾರ ಪಕ್ಷ ತಾರತಮ್ಯ ಮಾಡುತ್ತಿದ್ದು, ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಹಣ ಲೂಟಿ ಮಾಡಲಾಗುತ್ತಿದೆ ಎಂದು ಕುಮಾರಸ್ವಾಮಿ ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next