Advertisement

ಕುಮಾರಣ್ಣ ಕೊಟ್ಟಿದ್ದು ಬರೀ ಮಂಡಕ್ಕಿ!

05:47 AM Feb 09, 2019 | Team Udayavani |

ದಾವಣಗೆರೆ: ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಸರ್ಕಾರದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಶುಕ್ರವಾರ ಮಂಡಿಸಿದ ತಮ್ಮ ಈ ಅವಧಿಯ ಎರಡನೇ ಬಜೆಟ್‌ನಲ್ಲೂ ಮಧ್ಯ ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆ ಜಿಲ್ಲೆಗೆ ವಿಶೇಷ ಕೊಡುಗೆ ನೀಡಲು ಮನಸ್ಸು ಮಾಡಿದಂತಿಲ್ಲ.

Advertisement

ಸಮ್ಮಿಶ್ರ ಸರ್ಕಾರದ ಮೊದಲನೇ ಬಜೆಟ್ (2018) ಮಂಡಿಸಿದಾಗ ದಾವಣಗೆರೆ ಜಿಲ್ಲೆಗೆ ಏನೇನೂ ಯೋಜನೆ ಪ್ರಕಟಿಸದಿದ್ದ ಎಚ್.ಡಿ. ಕುಮಾರಸ್ವಾಮಿ, ಈ ಬಾರಿಯೂ ಅದೇ ಮನೋಧೋರಣೆ ಮುಂದುವರಿಸಿದಂತಿದೆ. ಒಂದೆರಡು ಚಿಕ್ಕ ಪುಟ್ಟ ಅನುದಾನ ಬಿಟ್ಟರೆ, ಯಾವುದೇ ಬೃಹತ್‌ ಯೋಜನೆ ಜಾರಿಗೊಳಿಸುವ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪಿಸಿಲ್ಲ.

ಮುಖ್ಯಮಂತ್ರಿ ಕುಮಾರಸ್ವಾಮಿ, ಎಲ್ಲಾ ವಲಯದಲ್ಲೂ ಸಾರ್ವತ್ರಿಕವಾಗಿ ಜಾರಿಗೆ ಪ್ರಕಟಿಸಿರುವ ಯೋಜನೆಗಳ ಹೊರತಾಗಿ ಜಿಲ್ಲೆಗೆ ದೊಡ್ಡ ಮೊತ್ತದ ಅನುದಾನ ನೀಡಲು ಮುಂದಾಗಿಲ್ಲ. ಎಲ್ಲಾ ಪಾಲಿಕೆಗಳಿಗೆ ನೀಡಲು ಉದ್ದೇಶಿಸಿರುವ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆ ಜಾರಿಗೆ ದಾವಣಗೆರೆ ಸಹ ಸೇರಿದೆ. ಹಾಗಾಗಿ ಪಾಲಿಕೆಗೆ 125 ಕೋಟಿ ರೂ. ನಿಗದಿಪಡಿಸಲಾಗಿದೆ. 10 ಜಿಲ್ಲೆಗಳಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಸ್ತನರೇಖನ ಸ್ಕಾ ್ಯನಿಂಗ್‌ ಸೆಂಟರ್‌ (ಸ್ತನ ಕ್ಯಾನ್ಸರ್‌ ಪತ್ತೆ) ವ್ಯವಸ್ಥೆ ದಾವಣಗೆರೆಯಲ್ಲೂ ಆರಂಭಿಸುವ ಬಗ್ಗೆ ಪ್ರಸ್ತಾಪಿಸಲಾಗಿದೆ.

ಐದು ಹೊಸ ಮೊರಾರ್ಜಿ ದೇಸಾಯಿ ಮುಸ್ಲಿಂ ಹೆಣ್ಣು ಮಕ್ಕಳ ವಸತಿ ಶಾಲೆ ತೆರೆಯುವ ಬಗ್ಗೆ ಸಿಎಂ ಪ್ರಕಟಿಸಿದ್ದು, ಅದರಲ್ಲಿ ಒಂದನ್ನು ದಾವಣಗೆರೆ ಜಿಲ್ಲೆ ಸಹ ಒಳಗೊಂಡಿದೆ. 5 ಶಾಲೆಗಳಿಗೆ ಒಟ್ಟು 20 ಕೋಟಿ ರೂ. ಅನುದಾನ ಮೀಸಲಿರಿಸಲಾಗಿದೆ. ಇನ್ನು ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿರುವ ಮಹರ್ಷಿ ಶ್ರೀ ವಾಲ್ಮೀಕಿ ಗುರುಪೀಠಕ್ಕೆ 2 ಕೋಟಿ ಹಾಗೂ ಮಲೇಬೆನ್ನೂರು ವೀರಭದ್ರೇಶ್ವರ ಚಾರಿಟಬಲ್‌ ಟ್ರಸ್ಟ್‌ಗೆ 1 ಕೋಟಿ ರೂ. ಅನುದಾನ ಘೋಷಿಸಲಾಗಿದೆ. ಅಲ್ಲದೆ ದಾವಣಗೆರೆಯನ್ನೂ ಡ್ರೋನ್‌ ಮೂಲಕ ಮರು ಸಮೀಕ್ಷೆ ಕಾರ್ಯ ಕೈಗೊಳ್ಳಲು ಪ್ರಸ್ತಾಪಿಸಲಾಗಿದೆ. ಖಾಸಗಿ ಸಹಯೋಗದಲ್ಲಿ ಮೂರು ನಗರಗಳಲ್ಲಿ ಸ್ವಯಚಾಲಿತ ವಾಹನ ತಪಾಸಣಾ ಮತ್ತು ಪ್ರಮಾಣೀಕರಣ ಕೇಂದ್ರ ಆರಂಭಿಸಲು ಉದ್ದೇಶಿಸಲಾಗಿದ್ದು, ಅದರಲ್ಲಿ ದಾವಣಗೆರೆ ಸಹ ಒಂದಾಗಿದೆ. ತಮ್ಮ ಎರಡನೇ ಬಜೆಟ್‌ನಲ್ಲೂ ಚಿಕ್ಕ ಪುಟ್ಟ ಅನುದಾನ ಬಿಟ್ಟರೆ ಜಿಲ್ಲೆಗೆ ವಿಶೇಷ ಆದ್ಯತೆ ನೀಡಲು ಸಿಎಂ ಆಸ್ಥೆ ವಹಿಸಿಲ್ಲ.

ಏತ ನೀರಾವರಿ, ಕೆರೆ ತುಂಬಿಸುವ ಯೋಜನೆ, ಕೆರೆಗಳ ಸಮಗ್ರ ಅಭಿವೃದ್ಧಿ ಕಾಮಗಾರಿ ಸೇರಿ ಈ ಬಜೆಟ್‌ನಲ್ಲಿ ಒಟ್ಟು 3,688 ಕೋಟಿ ನಿಗದಿಪಡಿಸಿದ್ದರೂ 2018ರ ಫೆಬ್ರವರಿಯಲ್ಲಿ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್‌ನಲ್ಲಿ ಜಗಳೂರು ತಾಲೂಕಿನ 46 ಕೆರೆ ತುಂಬಿಸುವ 250 ಕೋಟಿ ರೂ. ಯೋಜನೆ, ದಾವಣಗೆರೆ ತಾಲೂಕಿನ ಬೇತೂರು, ಮಾಗಾನಹಳ್ಳಿ, ರಾಂಪುರ, ಮೇಗಳಗೇರಿ, ಕಾಡಜ್ಜಿ ಕೆರೆಗಳನ್ನು ತುಂಗಭದ್ರಾ ನದಿ ನೀರು ಹರಿಸಿ, ಭರ್ತಿ ಮಾಡಲು 135 ಕೋಟಿ ರೂ. ಯೋಜನೆಗೆ ಈ ಸಾಲಿನ ಅನುದಾನ ಬಿಡುಗಡೆ ಆಗಲಿದೆಯೇ ಎಂಬುದು ಸ್ಪಷ್ಟವಾಗಿಲ್ಲ.

Advertisement

ದಾವಣಗೆರೆ ಹಾಲು ಒಕ್ಕೂಟ (ದಾಮುಲ್‌), ಪೊಲೀಸ್‌ ಪಬ್ಲಿಕ್‌ ಶಾಲೆ, ಸಾಫ್ಟ್‌ವೇರ್‌ ಪಾರ್ಕ್‌, ಹರಿಹರ ತಾಲೂಕಿನ ಭೆೈರನಪಾದ, ಹೊನ್ನಾಳಿ ತಾಲೂಕಿನ ಅರಕೆರೆ ಏತ ನೀರಾವರಿ ಯೋಜನೆ, ದಾವಣಗೆರೆ ತಾಲೂಕಿನ ಮಾಯಕೊಂಡಕ್ಕೆ ತಾಲೂಕು ಮಾನ್ಯತೆ, ಮೆಕ್ಕೆಜೋಳ ಕಣಜದ ಖ್ಯಾತಿಯ ದಾವಣಗೆರೆ ಜಿಲ್ಲೆಯಲ್ಲಿ ಮೆಕ್ಕೆಜೋಳ ಸಂಸ್ಕರಣಾ ಘಟಕ, ಎಜ್ಯುಕೇಷನ್‌ ಹಬ್‌ ಖ್ಯಾತಿಯ ದಾವಣಗೆರೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು, ಹರಿಹರದ ಬಳಿ ತುಂಗಭದ್ರಾ ನದಿ ಬ್ಯಾರೇಜ್‌ ನಿರ್ಮಾಣ ಹೀಗೆ ಹತ್ತು ಹಲವು ಜನರ ನಿರೀಕ್ಷೆ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಗಮನವನ್ನೇ ಕೊಟ್ಟಿಲ್ಲ. ಮೇಲಾಗಿ ದಾವಣಗೆರೆಯಲ್ಲಿ ನಡೆಸಲುದ್ದೇಶಿಸಿದ್ದ ವಿಶ್ವ ಕನ್ನಡ ಸಮ್ಮೇಳನದ ಬಗ್ಗೆಯೂ ಈ ಬಜೆಟ್‌ನಲ್ಲಿ ಪ್ರಸ್ತಾಪವಾಗಿಲ್ಲ.

ನಿಜ, ದಾವಣಗೆರೆ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಪೈಕಿ ಒಂದೂ ಕ್ಷೇತ್ರದಲ್ಲೂ ಜೆಡಿಎಸ್‌ ಶಾಸಕರಿಲ್ಲ. ಜಿಲ್ಲೆಯಲ್ಲಿ ಬಿಜೆಪಿ ಶಾಸಕರದ್ದೇ ಅಧಿಪತ್ಯ. ಎಂಟು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ನ ಇಬ್ಬರು (ದಾವಣಗೆರೆ, ಹರಿಹರ) ಶಾಸಕರನ್ನುಹೊರತುಪಡಿಸಿ ಬಾಕಿ ಆರೂ ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದಾರೆ. ಹಾಗಾಗಿಯೇ ಜಿಲ್ಲೆಯ ಬಗ್ಗೆ ಮುಖ್ಯಮಂತ್ರಿಯವರು ಒಲವು ತೋರದಿರಲು ಕಾರಣ ಇರಬಹುದು ಎಂದೇ ವಿಶ್ಲೇಷಿಸಲಾಗುತ್ತಿದೆ.

ಎನ್‌.ಆರ್‌. ನಟರಾಜ್‌

Advertisement

Udayavani is now on Telegram. Click here to join our channel and stay updated with the latest news.

Next