Advertisement

ಕುಮಾರ ಪಡ್ರೆಯವರಿಗೆ ವಿಶ್ವನಾಥ ಸ್ಮತಿ ಪ್ರಶಸ್ತಿ 

08:15 AM Mar 02, 2018 | Team Udayavani |

ಕಲಾಪೋಷಕ ಮತ್ತು ಕಲಾರಾಧಕರಾಗಿದ್ದ ದಿ| ಬಿ.ಕೆ. ವಿಶ್ವನಾಥ ಕೂಳೂರು ಹಲವಾರು ವರ್ಷಗಳಿಂದ ಕಟೀಲು ಮೇಳದವರ ಯಕ್ಷಗಾನ ಬಯಲಾಟವನ್ನು ನಡೆಸಿಕೊಂಡು ಬರುವ ಮೂಲಕ ಪರಿಸರದ ಜನರಿಗೆ ಯಕ್ಷಗಾನದ ರಸದೌತಣ ಉಣಿಸುವ ಕೆಲಸ ಮಾಡುತ್ತಿದ್ದರು. ಅವರ ಕಾಲಾನಂತರ ಪತ್ನಿ  ಮತ್ತು ಮಕ್ಕಳು ಈ ಪರಂಪರೆಯನ್ನು  ಮುಂದುವರಿಸಿರುವುದಲ್ಲದೆ ಬಿ. ಕೆ. ವಿಶ್ವನಾಥ ಸ್ಮರಣಾರ್ಥವಾಗಿ ಅಶಕ್ತ ಕಲಾವಿದರನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿದ್ದಾರೆ. ಈ ಸಲದ ಪ್ರಶಸ್ತಿಗೆ ತೆಂಕುತಿಟ್ಟಿನ ಮಹಾನ್‌ ಕಲಾವಿದ ಕೀರ್ತಿಶೇಷ ಪಡ್ರೆ ಚಂದು -ಭಾಗೀರತಿ ದಂಪತಿಯ ಪುತ್ರರಾಗಿರುವ ಕುಮಾರ ಪಡ್ರೆಯವರನ್ನು  ಆಯ್ಕೆ ಮಾಡಲಾಗಿದೆ. ಮಾ. 3ರಂದು ಬಂಗ್ರಕೂಳೂರಿನಲ್ಲಿ ನಡೆಯುವ ಯಕ್ಷಗಾನ ಪ್ರದರ್ಶನ ಸಂದರ್ಭದಲ್ಲಿ ಅವರಿಗೆ  ಬಿ. ಕೆ. ವಿಶ್ವನಾಥ್‌ ಸ್ಮತಿ ಪ್ರಶಸ್ತಿಯಿತ್ತು ಗೌರವಿಸಲಾಗುವುದು. 

Advertisement

ಕಟೀಲು ಮೇಳದಲ್ಲಿ ಸರಿಸುಮಾರು 50 ವರ್ಷಗಳಿಂದ ವೇಷ ಮಾಡುತ್ತಿರುವ ಕುಮಾರ ಪಡ್ರೆಯವರಿಗೆ ಕಲೆ ತಂದೆಯಿಂದ ಬಳುವಳಿಯಾಗಿ ಬಂದ ಆಸ್ತಿ. ರಾಜವೇಷ, ಪುಂಡುವೇಷ, ಸ್ತ್ರೀವೇಷ , ಹಾಸ್ಯ ಸೇರಿ ಯಕ್ಷಗಾನದ ಬಹುತೇಕ ಎಲ್ಲ ರೀತಿಯ ವೇಷವನ್ನು ಮಾಡಿರುವ ಕುಮಾರ ಪಡ್ರೆಗೆ ಮೊದಲ ಗುರುವೂ ತಂದೆಯೇ. ತಂದೆಯ ಕುಣಿತವನ್ನು ನೋಡಿಕೊಂಡು ಯಕ್ಷಗಾನ ಕಲಿತ ಕುಮಾರ ಪ್ರಾಥಮಿಕ ವಿದ್ಯಾಭ್ಯಾಸವನ್ನಷ್ಟೇ ಪಡೆದು ಅನಂತರ ಹತ್ತನೇ ವರ್ಷದಲ್ಲೇ ಬಣ್ಣ ಹಚ್ಚಲು ತೊಡಗಿದರು. ಕುಂಡಾವು ಮೇಳದಲ್ಲಿ ಎರಡು ವರ್ಷ ತಿರುಗಾಟ ಮಾಡಿದ್ದು ಬಿಟ್ಟರೆ ಉಳಿದಂತೆ ಕಟೀಲು ಮೇಳದಲ್ಲಿ ಸ್ಥಿರವಾಗಿದ್ದಾರೆ. 53 ವರ್ಷಗಳ ಸಮೃದ್ಧ ಯಕ್ಷಗಾನದ ಪಯಣದಲ್ಲಿ ಅವರು ದೇವೇಂದ್ರ, ಅರ್ಜುನ, ಮಧು, ಕೈಟಭ, ವರಾಹ, ಚಂಡ, ಮುಂಡ, ವಿಷ್ಣು, ಕೃಷ್ಣ, ನಕ್ಷತ್ರಿಕ, ದಾರುಕ, ಲಕ್ಷ್ಮೀ, ಸೀತೆ ಮುಂತಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಮೇಳದ ಪ್ರಬಂಧಕರಾಗಿಯೂ ಕಾರ್ಯನಿರ್ವಹಿಸಿರುವ ಇವರು ಮಳೆಗಾಳದಲ್ಲಿ ಯಕ್ಷಗಾನದ ವೇಷಭೂಷಣಗಳನ್ನು ತಯಾರಿಯ ಕೆಲಸದಲ್ಲಿ ತೊಡಗುತ್ತಾರೆ. ಹೀಗೆ ತನ್ನ ಇಡೀ ಬದುಕನ್ನು ಯಕ್ಷಗಾನಕ್ಕಾಗಿ ಮೀಸಲಿಟ್ಟ ಅಪರೂಪದ ಕಲಾವಿದ ಕುಮಾರ ಪಡ್ರೆ. ಪತ್ನಿ, ಮೂವರು ಮಕ್ಕಳ ಸಂತೃಪ್ತ ಕುಟುಂಬ ಅವರದ್ದು. 

ಯೋಗೀಶ್‌ ಕಾಂಚನ್‌ 

Advertisement

Udayavani is now on Telegram. Click here to join our channel and stay updated with the latest news.

Next