ಸಾಗರ: ಸೊರಬ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ತಾಲೂಕಿನ ತಾಳಗುಪ್ಪ ಹೋಬಳಿಯ ಬಗರ್‌ಹುಕುಂ ಅರ್ಜಿಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸುವಂತೆ ಅಲ್ಲಿನ ಶಾಸಕ ಕುಮಾರ್ ಬಂಗಾರಪ್ಪ ತಹಶೀಲ್ದಾರ್ ಮಲ್ಲೇಶ್ ಪೂಜಾರ್ ಅವರಿಗೆ ಸೂಚಿಸಿದ್ದಾರೆ.
ನಗರದ ತಾಲೂಕು ಕಚೇರಿಯಲ್ಲಿ ಶನಿವಾರ ನಡೆದ ಬಗರ್‌ಹುಕುಂ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗ್ರಾಮಠಾಣಾ ವ್ಯಾಪ್ತಿಗೆ ಬರುವ ಬಗರ್‌ಹುಕುಂ ಮನೆಗಳಿಗೆ ಹಕ್ಕುಪತ್ರ ನೀಡಲು ಇರುವ ತೊಡಕುಗಳನ್ನು ನಿವಾರಿಸುವ ಸಂಬಂಧ ಸರ್ಕಾರ ನೂತನ ಆದೇಶವನ್ನು ಹೊರಡಿಸಿದೆ. ಈ ಆದೇಶದ ಪ್ರತಿ ಶೀಘ್ರದಲ್ಲೇ ದೊರಕಲಿದ್ದು ಆಯಾ ಪಂಚಾಯ್ತಿ ವ್ಯಾಪ್ತಿಯ ಅಧಿಕಾರಿಗಳು ಹಕ್ಕುಪತ್ರ ನೀಡಲು ತುರ್ತು ಕ್ರಮ ಕೈಗೊಳ್ಳಬೇಕು ಎಂದರು.
ತಾಳಗುಪ್ಪ ಹೋಬಳಿಯ ಬೆಳ್ಳೆಣ್ಣೆ ಗ್ರಾಮದ ಸ.ನಂ. ೪೫ರ ಗೋಮಾಳ ಪ್ರದೇಶದಲ್ಲಿ ನಾಗಮ್ಮ ಎಂಬುವವರ ಮನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಧ್ವಂಸಗೊಳಿಸಿದ್ದಾರೆ ಎಂಬ ದೂರಿನ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸಿ. ಈ ಹಿಂದೆ ಹಿರೇನೆಲ್ಲೂರು ಪಂಚಾಯ್ತಿ ವ್ಯಾಪ್ತಿಯಲ್ಲಿ ಮಂಜೂರಾತಿ ಇಲ್ಲದೇ ಇದ್ದರೂ ೨೦ಕ್ಕೂ ಹೆಚ್ಚು ನಕಲಿ ಹಕ್ಕುಪತ್ರಗಳನ್ನು ಮುದ್ರಿಸಿ ರೈತರನ್ನು ವಂಚಿಸಲಾಗಿದೆ. ಖಾತೆ ಮಾಡಿಸಲು ಬಂದಾಗ ವಂಚನೆಯ ವಿಷಯ ಬೆಳಕಿಗೆ ಬಂದಿದೆ. ಕೆಲವು ನಕಲಿ ಪತ್ರದ ಆಧಾರದ ಮೇಲೆ ಖಾತೆ ಮಾಡಿಸಿಕೊಂಡು ಬ್ಯಾಂಕ್‌ನಿಂದ ಸಾಲ ಕೂಡ ಪಡೆಯಲಾಗಿದೆ. ಈ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಲು ಈಗಾಗಲೆ ತೀರ್ಮಾನಿಸಲಾಗಿದ್ದು ನೂತನವಾಗಿ ಆಗಮಿಸಿರುವ ತಹಶೀಲ್ದಾರರು ಈ ಬಗ್ಗೆ ಗಮನ ಹರಿಸಬೇಕು ಎಂದು ಅವರು ಹೇಳಿದರು.
ಇದನ್ನೂ ಓದಿ : ಸಹಸ್ರ ಕೋಟಿ ವ್ಯಯಿಸುತ್ತಿದ್ದರೂ ರಸ್ತೆ ಸರಿಯಲ್ಲ ಎಂದರೆ ಏನರ್ಥ? BBMPಗೆ ಹೈಕೋರ್ಟ್ ಛಿಮಾರಿ
ಬಗರ್‌ಹುಕುಂ ಸಮಿತಿ ಸದಸ್ಯರಾದ ಲಲಿತಾ ನಾರಾಯಣ್, ದೇವೇಂದ್ರಪ್ಪ ಚೆನ್ನಾಪುರ, ಕೃಷ್ಣಮೂರ್ತಿ, ಪ್ರಮುಖರಾದ ಟಿ.ಜಿ.ಸೋಮಶೇಖರ್ ಇದ್ದರು. ಇದೇ ಸಂದರ್ಭದಲ್ಲಿ ತಾಳಗುಪ್ಪದಲ್ಲಿ ಕೋವಿಡ್‌ನಿಂದ ಮೃತಪಟ್ಟ ಫಯಾಜ್‌ಖಾನ್ ಅವರ ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ ೧ ಲಕ್ಷ ರೂ. ಮೊತ್ತದ ಪರಿಹಾರ ಧನದ ಚೆಕ್‌ನ್ನು ವಿತರಿಸಲಾಯಿತು.