Advertisement

ಅಪಘಾತ ವಲಯವಾಗುತ್ತಿದೆ ಕೂಳೂರು ಜಂಕ್ಷನ್‌!

10:41 AM Nov 29, 2018 | Team Udayavani |

ಕೂಳೂರು: ಇಲ್ಲಿಯ ಜಂಕ್ಷನ್‌ ಹೆದ್ದಾರಿ ರಸ್ತೆ ಮಸಣಕ್ಕೆ ದಾರಿಯಂತಿದೆ. ವಾಹನ ಢಿಕ್ಕಿ ಹೊಡೆದು ಇತ್ತೀಚೆಗೆ ಸ್ಥಳೀಯ ವ್ಯಕ್ತಿಯೋರ್ವರು ಸಾವನ್ನಪ್ಪಿದ್ದು, ಹಲವಾರು ಮಂದಿ ತಮ್ಮ ಅಂಗಾಂಗಗಳನ್ನು ಕಳೆದುಕೊಂಡಿದ್ದಾರೆ.

Advertisement

ರಾಷ್ಟ್ರೀಯ ಹೆದ್ದಾರಿ ಕೂಳೂರು ಜಂಕ್ಷನ್‌ ಅಪಘಾತ ವಲಯವಾಗುತ್ತಿದ್ದು, ಸಾವುನೋವುಗಳ ಸಂಖ್ಯೆ ಹೆಚ್ಚುತ್ತಿದೆ. ಸರ್ವಿಸ್‌ ರಸ್ತೆಯಿಲ್ಲದೆ ವಾಹನಗಳ ಓಡಾಟ ಅಪಾಯಕಾರಿಯಾಗಿದ್ದು, ಹೆದ್ದಾರಿಯಲ್ಲಿಯೇ ತಿರುಗಿ ಬರುವ ಸನ್ನಿವೇಷ ಸೃಷ್ಟಿಯಾಗಿದೆ. ಹೆದ್ದಾರಿ ಪಕ್ಕದಲ್ಲೇ ವಾಹನ ನಿಲ್ಲಿಸುವುದರಿಂದ, ಗೂಡಂಗಡಿ, ವಾಹನದಲ್ಲಿ ಹಣ್ಣುಹಂಪಲು ಮಾರಾಟ ಮಾಡುವ ಮತ್ತಿತರರು ಹೆದ್ದಾರಿ ಬದಿಯನ್ನು ಅತಿ ಕ್ರಿಮಿಸಿರುವುದರಿಂದ ವಾಹನ ಓಡಾಟಕ್ಕೆ ಅಡೆತಡೆಯಾಗುತ್ತಿದೆ. ಇನ್ನು ಪಾದಚಾರಿಗಳಂತೂ ಸಂಚರಿಸಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಹೆದ್ದಾರಿ ಪಕ್ಕದಲ್ಲೇ ಮದ್ಯ ಮಾರಾಟ ಕೇಂದ್ರಗಳಿದ್ದು ಮದ್ಯಪಾನ ಮಾಡಿದ ವ್ಯಕ್ತಿಗಳು ಹೆದ್ದಾರಿಯಲ್ಲಿ ಬರುವ ವಾಹನ ಗಮನಿಸದೆ ನೇರವಾಗಿ ದಾಟುವುದರಿಂದ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತಿದೆ. ಹೆದ್ದಾರಿ ಪ್ರಾ ಧಿಕಾರಕ್ಕೆ ಕೂಳೂರು ರಸ್ತೆಯ ಅಪಾಯಕಾರಿ ಓಡಾಟದ ಅರಿವಿದ್ದರೂ ರಸ್ತೆ ವಿಸ್ತರಣೆಗೆ ಅನುದಾನವಿಲ್ಲ ಎಂಬ ನೆಪವೊಡ್ಡಿ ರಸ್ತೆ ಕಾಮಗಾರಿಯನ್ನು ಅರೆಬರೆ ಮಾಡಿ ಕೈತೊಳೆದುಕೊಂಡಿದೆ. ಆದರೆ ಅಪಘಾತವಾಗುತ್ತಲೇ ಇದ್ದು ಹಲವಾರು ಮಂದಿ ಅಂಗವಿಕಲರಾಗಿ ಅಮೂಲ್ಯ ಜೀವನ ಕಳೆದುಕೊಂಡು ಮಂಚ ಹಿಡಿಯುವಂತೆ ಆಗಿದೆ.

ಸರ್ವಿಸ್‌ ರಸ್ತೆ ಅಗತ್ಯ
ಮಂಗಳೂರಿನಿಂದ ಉಡುಪಿಗೆ ಹೋಗುವ ಹೆದ್ದಾರಿಯನ್ನು ಮತ್ತಷ್ಟು ವಿಸ್ತರಿಸಿ ಪಾದಚಾರಿಗಳ ಸಂಚಾರಕ್ಕೆ ಅನುವು ಮಾಡಿ ಕೊಡಬೇಕಿದೆ. ಈಗಿರುವ ಇಲ್ಲಿನ ಸರ್ವಿಸ್‌ ರಸ್ತೆಗಳು ಗ್ರಾಮೀಣ ಭಾಗದ ರಸ್ತೆಗಳಂತೆ ಅಗಲಕಿರಿದಾಗಿದ್ದು, ಎರಡು ವಾಹನಗಳು ಸರಿಯಾಗಿ ಓಡಾಟ ನಡೆಸುವುದೇ ಕಷ್ಟವಾಗಿದೆ. ಕಾವೂರಿನಿಂದ ಮಂಗಳೂರಿಗೆ ಹೋಗುವ ಸರ್ವಿಸ್‌ ರಸ್ತೆಯ ಮಧ್ಯ ಭಾಗದಲ್ಲೇ ವಿದ್ಯುತ್‌ ತಂತಿ ಕಂಬವೊಂದು ನೇತಾಡುತ್ತಿದೆ. ಹೆದ್ದಾರಿ ಉದ್ದಕ್ಕೂ ಬೀದಿ ದೀಪಗಳಿಲ್ಲ. ಹೀಗಾಗಿ ರಾತ್ರಿ ಸಮಯ ಪಾದಚಾರಿಗಳು ಓಡಾಟ ನಡೆಸುವುದೇ ದುಸ್ತರವಾಗಿದೆ. ಈ ಭಾಗದಲ್ಲಿ ಚರ್ಚ್‌, ಶಾಲೆಯಿದ್ದು ವಿದ್ಯಾರ್ಥಿಗಳು ಹೆದ್ದಾರಿ ದಾಟಲು ತ್ರಾಸ ಪಡುವಂತೆ ಆಗಿದೆ.

 ಸಂಚಾರ ವ್ಯವಸ್ಥೆಗಳ ಪರಿಶೀಲನೆ; ಮನವಿ
ಹೆದ್ದಾರಿಯಲ್ಲಿ ಮಂಗಳವಾರ ಓರ್ವ ವ್ಯಕ್ತಿ ಸಾವನ್ನಪ್ಪಿದ ಬೆನ್ನಿಗೇ ಮಂಗಳೂರು ಉತ್ತರ ಪ್ರಭಾರ ಸಿಐ ಅಮಾನುಲ್ಲಾ ಅವರು ಬುಧವಾರ ಆಗಮಿಸಿ ಸಂಚಾರ ವ್ಯವಸ್ಥೆಗಳ ಪರಿಶೀಲನೆ ನಡೆಸಿ ರಸ್ತೆ ಬದಿ ನಿಲ್ಲಿಸಲಾಗಿದ್ದ ವಾಹನ ತೆರವುಗೊಳಿಸಲು ಸೂಚಿಸಿದರು. ಕೂಳೂರು ನಾಗರಿಕ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಸಾರ್ವಜನಿಕರು ರಸ್ತೆ ವಿಸ್ತರಣೆಗೆ ಒತ್ತಾಯಿಸಿ ಹೆದ್ದಾರಿ ಪ್ರಾಧಿಕಾರದ ಕಚೇರಿಗೆ ತೆರಳಿ ಪ್ರಾಜೆಕ್ಟ್ ಡೈರೆಕ್ಟರ್‌ ವಾಸನ್‌ ಅವರಿಗೆ ಮನವಿ ಅರ್ಪಿಸಿದರು.

ಈ ಸಂದರ್ಭ ಅವರು ಕೂಳೂರು ಜಂಕ್ಷನ್‌ ರಸ್ತೆ ವಿಸ್ತರಣೆ ಮಾಡಲು ಅನುದಾನದ ಕೊರತೆಯಿದೆ. ಇದರ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಹೆದ್ದಾರಿಯಲ್ಲಿ ಹೈಮಾಸ್ಟ್‌ ದೀಪ ಅಳವಡಿಕೆ, ರಸ್ತೆ ವಿಸ್ತರಣೆ ಮತ್ತಿತರ ವ್ಯವಸ್ಥೆಗಳ ಕುರಿತು ಟ್ರಾಫಿಕ್‌ ಇಲಾಖೆ ವತಿಯಿಂದ ಮನವಿ ನೀಡಲು ಸೂಚಿಸಿದ್ದಲ್ಲದೆ ಬೇಡಿಕೆ ಈಡೇರಿಸುವ ಭರವಸೆ ನೀಡಿದರು. ಈ ಸಂದರ್ಭ ಗುರುಚಂದ್ರ ಹೆಗ್ಡೆ ಗಂಗಾರಿ, ಶಾನ್ವಾಝ್, ರಾಜೇಶ್‌, ಮೋನು, ಶ್ರೀನಿವಾಸ್‌, ಟೆಂಪೋ ಚಾಲಕ ಮಾಲಕರು ಉಪಸ್ಥಿತರಿದ್ದರು.

Advertisement

ಪಾರ್ಕಿಂಗ್‌ಗೆ ವ್ಯವಸ್ಥೆ ಅಗತ್ಯ
ಕೂಳೂರು ರಸ್ತೆ ಹೆದ್ದಾರಿ ಉದ್ದಕ್ಕೂ ಪಾರ್ಕಿಂಗ್‌ನಿಂದಾಗಿ ವಾಹನ ಓಡಾಟ ನಡೆಸುವುದು ಕಷ್ಟವಾಗಿದೆ. ಹೀಗಾಗಿ ಈಗಿರುವ ಹೆದ್ದಾರಿಯನ್ನು ವಿಸ್ತರಿಸಿ ಡಾಮರು ಹಾಕಬೇಕು. ಪಾದಚಾರಿಗಳ ಓಡಾಟಕ್ಕೆ ತಾತ್ಕಾಲಿಕ ಫ‌ುಟ್‌ಪಾತ್‌ ನಿರ್ಮಿಸಬೇಕು. ಮೇಲ್ಸೇತುವೆಯ ಎರಡು ಸ್ಪಾನ್‌ ಗಳನ್ನು ಕೆಳಭಾಗದಲ್ಲಿ ಸಮತಟ್ಟು ಗೊಳಿಸಿ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಿಕೊಡಬೇಕು. ಅತೀವೇಗ ನಿಯಂತ್ರಿಸಲು ಬ್ಯಾರಿಕೇಡ್‌ ಅಳವಡಿಕೆ ಮತ್ತಿತರ ಬೇಡಿಕೆ ಮಂಡಿಸಿದ್ದೇವೆ.
ಗುರುಚಂದ್ರ ಹೆಗ್ಡೆಗಂಗಾರಿ,
 ಕೂಳೂರು ನಾಗರಿಕ ಹಿತರಕ್ಷಣಾ ಸಮಿತಿ 

Advertisement

Udayavani is now on Telegram. Click here to join our channel and stay updated with the latest news.

Next