Advertisement

‘ಕುಳ್ಳನ ಹೆಂಡತಿ’ಪ್ರೇಮ ಪುರಾಣ!; ರಿಲೀಸ್ ಗೆ ರೆಡಿಯಾದ ಹೊಸಬರ ಚಿತ್ರ

03:05 PM Sep 27, 2022 | Team Udayavani |

ಕನ್ನಡ ಚಿತ್ರರಂಗದಲ್ಲಿ ಈಗ ವಿಭಿನ್ನ ಶೈಲಿಯ ಸಿನಿಮಾಗಳು ಬರುತ್ತಿವೆ. ಅದರಲ್ಲೂ ಚಿತ್ರರಂಗಕ್ಕೆ ಬೇರೆ ಬೇರೆ ಕ್ಷೇತ್ರಗಳಿಂದ ಬರುವವರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಸಿನಿಮಾ ಕಂಟೆಂಟ್‌ಗಳಲ್ಲೂ ವಿಭಿನ್ನತೆ ಸಿಗುತ್ತಿದೆ. ಸದ್ಯ ಆ ತರಹದ ಒಂದು ವಿಭಿನ್ನ ಸಿನಿಮಾವಾಗಿ ಚಿತ್ರರಂಗದ ಗಮನ ಸೆಳೆಯುತ್ತಿದೆ. ಅದು “ಕುಳ್ಳನ ಹೆಂಡತಿ’. ಹೆಸರು ಕೇಳಿದಾಗ ಇದೊಂದು ಔಟ್‌ ಅಂಡ್‌ ಔಟ್‌ ಕಾಮಿಡಿ ಸಿನಿಮಾ ಎಂಬ ಭಾವನೆ ಬರುತ್ತದೆ. ಆದರೆ, ಈ ಸಿನಿಮಾ ಕಾಮಿಡಿಗಿಂತ ಎಮೋಶ ನಲ್‌ ಆಗಿ ಪ್ರೇಕ್ಷಕರಿಗೆ ಹೆಚ್ಚು ಕನೆಕ್ಟ್ ಆಗಲಿದೆ.

Advertisement

ವಿಶಾಖ್‌ ಎಸ್‌.ಎಸ್‌ ಈ ಚಿತ್ರದ ನಿರ್ದೇಶಕರು. ಇವರಿಗಿದು ಚೊಚ್ಚಲ ಸಿನಿಮಾ. ಕನ್ನಡ ಚಿತ್ರರಂಗಕ್ಕೆ ಈಗ ಬೇರೆ ಬೇರೆ ರಾಜ್ಯ, ಬೇರೆ ಕ್ಷೇತ್ರಗಳಿಂದ ಬರುತ್ತಿದ್ದಾರೆ. ಅದೇ ರೀತಿ ವಿಶಾಖ್‌ ಕೂಡಾ ಐಟಿ ಕ್ಷೇತ್ರದಿಂದ ಬಂದವರು. ಮೂಲತಃ ಕೇರಳದವರಾದ ವಿಶಾಖ್‌ಗೆ ಸಿನಿಮಾ ಮೇಲೆ ಕ್ರೇಜ್‌. ಅದೇ ಕಾರಣದಿಂದ ನಾಲ್ಕು ವರ್ಷಗಳ ಹಿಂದೆ ಕೆಲಸ ಬಿಟ್ಟು, ನೇರವಾಗಿ ಚಿತ್ರರಂಗಕ್ಕೆ ಧುಮುಕಿ ಬಿಟ್ಟಿದ್ದಾರೆ. ಮನಸ್ಸಿದ್ದರೆ ಮಾರ್ಗ ಎಂಬಂತೆ ವಿಶಾಖ್‌ ಈಗ ಸಿನಿಮಾ ಮಾಡಿ ಮುಗಿಸಿದ್ದಾರೆ. ವಿಶಾಖ್‌ಗೆ ಇದು ಚೊಚ್ಚಲ ಸಿನಿಮಾ. ಯಾವುದೇ ನಿರ್ದೇಶಕರ ಜೊತೆ ಅವರು ಸಹಾಯಕರಾಗಿಯೂ ಕೆಲಸ ಮಾಡಿಲ್ಲ. ಯು ಟ್ಯೂಬ್‌ನಲ್ಲಿ ನೋಡಿಕೊಂಡು ಸಿನಿಮಾ ಶಿಕ್ಷಣ ಪಡೆದಿದ್ದಾರೆ. ಇವರ ಕನಸಿಗೆ ಸ್ಟಾರ್‌ ವೆಂಚರ್ ಕೈ ಜೋಡಿಸಿ ನಿರ್ಮಾಣ ಮಾಡಿದೆ.

ಚಿತ್ರದಲ್ಲಿ ಅಶ್ರಿತ್‌ ವಿಶ್ವನಾಥ್‌ ಹಾಗೂ ರಾಸಿಕಾ ಬೀರೇಂದ್ರ ನಾಯಕ-ನಾಯಕಿಯಾಗಿ ನಟಿಸಿದ್ದಾರೆ. ಮೊದಲೇ ಹೇಳಿದಂತೆ ಚಿತ್ರರಂಗಕ್ಕೆ ಹೊಸದಾಗಿ ಬರುವ ಯುವ ಪ್ರತಿಭೆಗಳು ವಿಭಿನ್ನವಾಗಿ ಯೋಚಿಸುತ್ತಾರೆ. ಈ ಸಾಲಿಗೆ ವಿಶಾಖ್‌ ಕೂಡಾ ಸೇರುತ್ತಾರೆ. ನಿರ್ದೇಶಕ ವಿಶಾಖ್‌ “ಕುಳ್ಳನ ಹೆಂಡತಿ’ ಚಿತ್ರದಲ್ಲಿ ಒಂದು ಹೊಸ ಬಗೆಯ ಪ್ರೇಮಕಥೆಯನ್ನು ಹೇಳಹೊರಟಿದ್ದಾರೆ.

ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ವಿಶಾಖ್‌, “ಇದು 26 ಹುಡುಗ ಹಾಗೂ 32ರ ಹುಡುಗಿ ನಡುವಿನ ಲವ್‌ಸ್ಟೋರಿ. ಇದೇ ಸಿನಿಮಾದ ಹೈಲೈಟ್‌. ನಾಯಕಿ ಇಲ್ಲಿ ನರ್ಸ್‌ ಆಗಿರುತ್ತಾಳೆ. ನನ್ನ ನಿಜ ಜೀವನದ ಒಂದಷ್ಟು ಅಂಶಗಳನ್ನು ಸೇರಿಸಿ ಈ ಕಥೆ ಮಾಡಿದ್ದೇನೆ. ಇದೊಂದು ಸಿಂಪಲ್‌ ರಿಯಲಿಸ್ಟಿಕ್‌ ಲವ್‌ ಸ್ಟೋರಿ. ನಮ್ಮ ಸಮಾಜದಲ್ಲಿ ನಡೆಯುವ ನೈಜ ಅಂಶಗಳನ್ನಿಟ್ಟುಕೊಂಡು ಈ ಕಥೆ ಮಾಡಿದ್ದೇನೆ. ಮೇಲ್ನೋಟಕ್ಕೆ ಇದು ಕಾಮಿಡಿ ಸಿನಿಮಾ ತರಹ ಅನಿಸುತ್ತದೆ. ಆದರೆ, ಟೈಟಲ್‌ ಕಾಮಿಡಿಯಾಗಿದ್ದರೂ ಚಿತ್ರದಲ್ಲಿ ಗಂಭೀರವಾದ ವಿಷಯಗಳಿವೆ. ಇದೊಂದು ಎಮೋಶನಲ್‌ ಜರ್ನಿ ಎನ್ನಬಹುದು’ ಎಂದು ಚಿತ್ರದ ಬಗ್ಗೆ ಹೇಳುತ್ತಾರೆ ವಿಶಾಖ್‌.

“ಕುಳ್ಳನ ಹೆಂಡತಿ’ ಸಿನಿಮಾ ಮುಖ್ಯವಾಗಿ ಎರಡು ಕಾಲಘಟ್ಟದಲ್ಲಿ ನಡೆಯುವ ಕಥೆ. ಅದೇ ಕಾರಣದಿಂದ ಇಲ್ಲಿ ಎರಡು ಜೋಡಿ ಕಾಣಿಸಿಕೊಂಡಿದೆ. 1980 ಹಾಗೂ 2019ರವರೆಗೆ ಕಥೆ ನಡೆಯುತ್ತದೆ. ಹಾಗಾಗಿ, ರೆಟ್ರೋ ವರ್ಸಸ್‌ ಮೆಟ್ರೋ ಎನ್ನಬಹುದು. ಇನ್ನು ಈ ಸಿನಿಮಾದಲ್ಲಿ ಕೊರೊನಾ ಕೂಡಾ ಒಂದು ಪ್ರಮುಖ ಪಾತ್ರ ವಹಿಸುತ್ತದೆ. ಚಿತ್ರದಲ್ಲಿ ನಾಯಕಿ ನರ್ಸ್‌ ಆಗಿರುವುದರಿಂದ ಕೊರೊನಾ ಕೂಡಾ ಈ ಸಿನಿಮಾದಲ್ಲಿ ಒಂದು ಪ್ರಮುಖ ಪಾತ್ರ ಎನ್ನಬಹುದು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next