Advertisement

ಕೂಲಿಯವ ಮಾಲೀಕನಾದ! ಸಾಹೇಬರ ಶಹಭಾಷ್‌ ಕೃಷಿ

03:50 AM Feb 20, 2017 | Harsha Rao |

ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಹಾನಂಬಿಯ ಅರಳೀಕೊಪ್ಪದದಲ್ಲಿ ಹೊಸ ಮಾದರಿಯ ಅಡಿಕೆ ತೋಟ ನಿರ್ಮಿಸಿದ ಅಮಾನುಲ್ಲಾ ಸಾಹೇಬರು ಎಲ್ಲರ ಗಮನ ಸೆಳೆಯುತ್ತಿದ್ದಾರೆ.

Advertisement

 ಮೂಲತಃ ಚೆನ್ನಗಿರಿ ತಾಲೂಕಿನ ಸೂಳೆಕೆರೆ  ಕರೆಕಟ್ಟೆಯವರು. ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಹೇರೂರು- ಹೂಗೋಡಿನ ಹುತ್ತಿನಗದ್ದೆ ಗ್ರಾಮದ ಕಾಫಿ ತೋಟದಲ್ಲಿ 30 ವರ್ಷ ಕಾಲ ಕೂಲಿ ಕೆಲಸ ಮಾಡಿದ್ದರು. ಇದರಿಂದ  ಬಂದ ಕೂಲಿ  ಹಣ ಕೂಡಿಟ್ಟು ಸ್ವಂತ ಜಮೀನು ಖರೀದಿಸಿ, ತಮ್ಮ ಬದುಕಿನ ಕನಸು ನನಸಾಗಿಸಿಕೊಂಡರು. ಮೊದಲು ಶಿವಮೊಗ್ಗದ ಹೊಳೆ ಹೊನ್ನೂರಿನಲ್ಲಿ 3 ಎಕರೆ ಭತ್ತದ ಗದ್ದೆ ಖರೀದಿಸಿ ಅಡಿಕೆ ತೋಟವನ್ನು ಶುರು ಮಾಡಿದರು.  ಇದನ್ನು ಮಾರಾಟಮಡಿ ಲಕ್ಕವಳ್ಳಿ ಜಂಕ್ಷನ್‌ನಲ್ಲಿ ಜಮೀನು ಖರೀದಿಸಿ ನೀರಿನ ಕೊರತೆಯಾಗಿ, ಅದನ್ನು ಮಾರಿ ಬನವಾಸಿಯ ರೌಫ್ ಸಾಹೇಬರಲ್ಲಿ ಆಶ್ರಯ ಪಡೆದರು. ಅನಾನಸ್‌, ಶುಂಠಿ ಇತ್ಯಾದಿ ಕೃಷಿಯ ಬಗ್ಗೆ ಮಾರ್ಗದರ್ಶನ ನೀಡಿದ ರೌಫ್ ಸಾಹೇಬರು ಇವರಿಗೆ ಶಿರಾಳಕೊಪ್ಪದ ಬೆನ್ನೂರಿನ ಸಮೀಪ  8 ಎಕರೆ ಮತ್ತು ಆನವಟ್ಟಿ ಸಮೀಪ 20 ಎಕರೆ ಕೃ ಭೂಮಿಯನ್ನು ಲೀಸ್‌ಗೆ ಕೊಡಿಸಿದರು.ಆ ಹೊಲಗಳಲ್ಲಿ ಅನಾನಸ್‌, ಶುಂಠಿ,ಅರಿಶಿನ ಮುಂತಾದವುಗಳ ಯಶಸ್ವಿ ಕೃಷಿ ನಡೆಸಿ ಸಾಕಷ್ಟು ಲಾಭಗಳಿಸಿದರು. ಆಮೇಲೆ ಆನವಟ್ಟಿ ಬಳಿ 25 ಎಕರೆ ಮತ್ತು ಸಾಗರದ ಅರಳೀಕೊಪ್ಪದಲ್ಲಿ 23 ಎಕರೆ ಖರೀದಿಸಿದರು. ಹೀಗೆ ಶ್ರಧೆœ ಮತ್ತು ಛಲದಿಂದ ಪ್ರಾಮಾಣಿಕ ದುಡಿಮೆ ನಡೆಸಿದರ ಫ‌ಲ ಇಂದು ಮಾಲೀಕರಾಗಿದ್ದಾರೆ.

ಅಂತರ್‌ ಬೆಳೆ
ಇವರು ಸಾಗರದ ಹಾನಂಬಿಯ ಅರಳೀಕೊಪ್ಪದಲ್ಲಿ 23 ಎಕರೆ ವಿಸ್ತೀರ್ಣದ ಜಮೀನಿನಲ್ಲಿ ಅಡಿಕೆ ತೋಟ ನಿರ್ಮಿಸಿದ್ದಾರೆ.  ಇವರು ಅಡಿಕೆ ತೋಟದಲ್ಲಿ ಕಾಫಿ, ಕಾಳುಮೆಣಸು, ಸಿಲ್ವರ್‌ ಹೀಗೆ ಬಗೆ ಬಗೆಯ ಫ‌ಸಲಿನ ಸಸಿಗಳ ಅಂತರ್‌ ಬೆಳೆ ಬೆಳೆದು ಮಾದರಿ ತೋಟ ನಿರ್ಮಿಸಿದ್ದಾರೆ. ಭವಿಷ್ಯದ ದಿನದಲ್ಲಿ ಒಂದು ಬೆಳೆಯ ದರ ಕುಸಿತವಾದರೂ ತಾವು ಸೋಲಬಾರದು ಎಂಬುದು ಇವರ ತತ್ವ. 

ಮಲೆನಾಡನಲ್ಲಿ ಪಾರಂಪರಿಕ ಕೃಷಿ ನಡೆಸುವವರು ಅಡಿಕೆ ಸಸಿಗಳ ನಡುವೆ ಸಾಮಾನ್ಯವಾಗಿ 9 ಅಡಿ ಅಥವಾ 10 ಅಡಿ ಅಂತರ ಇರುವಂತೆ ಸಸಿ ನೆಡುತ್ತಾರೆ. ಆದರೆ ಇವರು ಸಾಲಿನಿಂದ ಸಾಲಿಗೆ 20 ಅಡಿ ಅಂತರ ಮತ್ತು ಗಿಡದಿಂದ ಗಿಡಕ್ಕೆ 6 ಅಡಿ ಅಂತರದಲ್ಲಿ ಅಡಿಕೆ ಮರ ಬೆಳೆಸಿದ್ದಾರೆ.ಒಂದು ಎಕರೆ ವಿಸ್ತೀರ್ಣದಲ್ಲಿ 360 ಅಡಿಕೆ ಗಿಡ ನೆಟ್ಟಿದ್ದಾರೆ.  ಸಾಲಿನ 20 ಅಡಿ ಅಂತರದ ಕಾಲಿ ಸ್ಥಳದಲ್ಲಿ 3  ಸಾಲು ಕಾಫಿ ಗಿಡಗಳನ್ನು ಮತ್ತು ಒಂದು ಸಾಲು ಸಿಲ್ವರ್‌ ಮರಗಳನ್ನು ಬೆಳೆಸಿದ್ದಾರೆ. ಈ ಸಿಲ್ವರ್‌  ಮರಗಳಿಗೆ ಕಾಳು ಮೆಣಸಿನ ಬಳ್ಳಿ ಹಬ್ಬಿಸಿದ್ದಾರೆ.

ಅಡಿಕೆ ಸಸಿಯ ಬುಡದಿಂದ 2.5 ಅಡಿ ಬಿಟ್ಟು ಒಂದು ಸಾಲು ಕಾಫಿ ಗಿಡ, ನಂತರ 6 ಅಡಿ ಬಿಟ್ಟು ಇನ್ನೊಂದು ಕಾಫಿ ಗಿಡ, ಅದರಿಂದ 6 ಅಡಿ ಬಿಟ್ಟು ಮತ್ತೂಂದು ಕಾಫಿ ಗಿಡ ಹಾಕಿದ್ದಾರೆ. ಹೀಗೆ ಹೊಸ ವಿನ್ಯಾಸದಲ್ಲಿ ಅಡಿಕೆ ಸಸಿ ನೆಟ್ಟು ಅವುಗಳ ನಡುವಿನಲ್ಲಿ ಅಂತರ್‌ ಬೆಳೆಯ ಕೃಷಿ ತೋಟ ನಿರ್ಮಿಸಿದ್ದಾರೆ.

Advertisement

ಒಂದು ಎಕರೆ ಸ್ತೀರ್ಣದಲ್ಲಿ 360ಅಡಕೆ ಸಸಿ, 220 ಸಿಲ್ವರ್‌ ಓಕ್‌ ಸಸಿ ಮತ್ತು 1200 ಕಾಫಿ ಗಿಡ ಬೆಳೆಸಿದ್ದಾರೆ.  ಅಡಿಕೆ ಗಿಡಗಳು 6 ವರ್ಷ ಪ್ರಾಯದ್ದಾಗಿದ್ದು ಉತ್ತಮ ಫ‌ಸಲು ನೀಡುತ್ತಿವೆ.ಇವರ ಹೊಲದಲ್ಲಿರುವ ಕಾಫಿ ಗಿಡಗಳು ಅರೇಬಿಕಾ ತಳಿಯದಾಗಿದ್ದು 3 ವರ್ಷದ ಪ್ರಾಯದ ಗಿಡಗಳು ಗಿಡ ತುಂಬಾ ಫ‌ಸಲು ಬರುತಿವೆ. ಸಿಲ್ವರ್‌ ಮರಗಳಿಗೆ ಹಬ್ಬಿಸಿದ ಕಾಳು ಮೆಣಸಿನ ಬಳ್ಳಿಗಳು ಫ‌ಣಿಯೂರು ತಳಿಯಾಗಿದ್ದು 3 ವರ್ಷ ಪ್ರಾಯ ತುಂಬಿದ್ದು ಈ ವರ್ಷ ಫ‌ಸಲು ಬಿಟ್ಟಿದೆ.  ಇವರು 2 ವರ್ಷಕ್ಕೊಮ್ಮೆ 75 ರಿಂದ 80 ಲೋಡ್‌ ಗೊಬ್ಬರ ಖರೀದಿಸಿ ಗಿಡಗಳಿಗೆ ನೀಡುತ್ತಾರೆ.

ಕಡಿಮೆ ನೀರು ಹೆಚ್ಚು ಬಳಕೆ 
ಇವರು ತಮ್ಮ ಹೊಲದಲ್ಲಿ ನೀರಾವರಿಗಾಗಿ ಒಟ್ಟು 3 ಕೊಳವೆ ಬಾವಿ ತೆಗೆಸಿದ್ದಾರೆ. ಸರಾಸರಿ 2 ರಿಂದ 2.5 ಇಂಚು ನೀರು ದೊರೆತಿದೆ. ನೀರಿನ ಲಭ್ಯತೆ ಕಡಿಮೆ ಇರುವ ಕಾರಣ ಹೊಲದ ಕಾಲಿ ಸ್ಥಳದಲ್ಲಿ 35 ಅಡಿ ಅಗಲ 70 ಅಡಿ ಉದ್ದ ಹಾಗೂ 8 ಅಡಿ ಆಳದ ದೊಡ್ಡ ತೆರೆದ ಕೊಳ ನಿರ್ಮಿಸಿ, ಅದಕ್ಕೆ ಟಾರ್ಪಲ್‌ ಹಾಸಿ ಎಲ್ಲ ಕೊಳವೆ ಬಾವಿಗಳ ನೀರನ್ನು ಡಂಪ್‌ ಮಾಡುತ್ತಾರೆ. ಆ ನೀರನ್ನು 10 ಹೆಚ್‌.ಪಿ.ಪಂಪ್‌ ಮೂಲಕ ಲಿಫ್ಟ್ ಮಾಡಿ ಡ್ರಿಪ್‌ ಇರಿಗೇಶನ್‌ ಮೂಲಕ ಎಲ್ಲ ಸಸಿಗಳಿಗೆ ನೀರನ್ನು ಹಾಯಿಸುತ್ತಾರೆ.

ಮಾತಿಗಾಗಿ –9448977097

– ಎನ್‌.ಡಿ.ಹೆಗಡೆ ಆನಂದಪುರಂ

Advertisement

Udayavani is now on Telegram. Click here to join our channel and stay updated with the latest news.

Next