“ಕುಲ್ಫಿ-2′ ಹೀಗೆ ತೆರೆಮೇಲೆ ಬಂದ ಕೂಡಲೇ ಪ್ರೇಕ್ಷಕ ಎದ್ದು ಬಿಡುತ್ತಾನೆ. ಸಿನಿಮಾದ ಕ್ಲೈಮ್ಯಾಕ್ಸ್ ಏನು, ನಾಯಕಿ ಏನಾದಳು ಎಂಬ ಪ್ರಶ್ನೆ ಪ್ರೇಕ್ಷಕನಲ್ಲಿರುವಾಗಲೇ ಚಿತ್ರದ ಮುಂದುವರಿದ ಭಾಗದಲ್ಲಿ ಹೇಳುವುದಾಗಿ ಚಿತ್ರತಂಡ ಹೇಳಿದೆ. ಎರಡನೇ ಭಾಗ ಬಂದರೆ ಅಲ್ಲಿ ನಿಮಗೆ ಉತ್ತರ ಸಿಗಬಹುದು. ಆದರೆ, ಅದಕ್ಕಿಂತ ಮುನ್ನ ಎರಡು ಗಂಟೆಗಳ ಕಾಲ ಚಿತ್ರದ ನಾಯಕಿಯ ಬಾಯಲ್ಲಿ ಬರುವ ಸಂಭಾಷಣೆಯಂತೆ “ಆಟ’, “ಡೊಂಬರಾಟ’ವನ್ನೆಲ್ಲಾ ಪ್ರೇಕ್ಷಕ ಕಣ್ತುಂಬಿಕೊಂಡಿರುತ್ತಾನೆ.
ಮೂವರು ಹುಡುಗರು ಹಾಗೂ ಹುಡುಗಿಯೊಬ್ಬಳ ನಡುವಿನ ಕಥೆ ಇದು. ಇವರ ಮಧ್ಯೆ ನಿರ್ದೇಶಕರು ಸಿಕ್ಕಾಪಟ್ಟೆ ದೃಶ್ಯಗಳನ್ನು ಹೆಣೆದಿದ್ದಾರೆ. ಚಿತ್ರದಲ್ಲೊಂದು ಕಥೆ ಇದೆ. ಆದರೆ, ಆ ಕಥೆಯನ್ನು “ಕುಲ್ಫಿ-2’ನಲ್ಲಿ ತೋರಿಸುವ ಯೋಚನೆ ನಿರ್ದೇಶಕರಿಗೆ ಇದ್ದಂತಿದೆ. ಅದೇ ಕಾರಣದಿಂದ ಇಲ್ಲಿ ಕಥೆಗಿಂತ ಸುಖಾಸುಮ್ಮನೆ ದೃಶ್ಯಗಳಲ್ಲೇ ಸಿನಿಮಾವನ್ನು ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ.
ಜೊತೆಗೆ ನಮ್ಮಲ್ಲೊಂದು ಕಥೆ ಇದೆ ಎಂಬುದನ್ನು ಸಾಬೀತುಪಡಿಸುವ ಸಲುವಾಗಿ ಸಿನಿಮಾ ಮುಗಿಯುವ ಕೆಲವು ನಿಮಿಷಗಳ ಮುನ್ನ ಒಂದಷ್ಟು “ಸ್ಯಾಂಪಲ್’ಗಳನ್ನು ಬಿಚ್ಚಿಟ್ಟಿದ್ದಾರೆ. ಎಲ್ಲಾ ಓಕೆ, ಆ “ಸ್ಯಾಂಪಲ್’ ಏನಂತೀರಾ, ಒಂದೇ ಪಬ್‌ನಲ್ಲಿ ಕೆಲಸ ಮಾಡುವ, ಒಂದೇ ಮನೆಯಲ್ಲಿ ವಾಸಿಸುವ ಮೂವರು ಹುಡುಗರಿಗೆ ಮೂರು ಕಾರಣ ಹೇಳಿ, ಅವರನ್ನು ಒಂದೇ ಕಾರಿನಲ್ಲಿ, ಒಂದೇ ಜಾಗಕ್ಕೆ ಕರೆದುಕೊಂಡು ಬರುವಲ್ಲಿ ಆಕೆ ಯಶಸ್ವಿಯಾಗುತ್ತಾಳೆ. ಸಖತ್ ಹಾಟ್ ಆಗಿರುವ ಹುಡುಗಿ ಬೇರೆ, ತಮ್ಮನ್ನು ಕರೆದಿದ್ದಾಳೆಂದರೆ ಮಸ್ತ್ ಮಜಾ ಮಾಡಬಹುದೆಂಬ ಲೆಕ್ಕಾಚಾರದೊಂದಿಗೆ ಮೂವರೂ ಕಾರು ಹತ್ತುತ್ತಾರೆ. ಅದಕ್ಕೆ ಸರಿಯಾಗಿ ಆ ಹುಡುಗಿ ಬೇರೆ “ಒಬ್ಬರು ಸುಸ್ತಾದರೆ, ಇನ್ನೊಬ್ಬರು. ಅದಕ್ಕೆ ಮೂವರನ್ನು ಕರೆದಿದ್ದೇನೆ’ ಎಂದು ಆಸೆ ತೋರಿಸುತ್ತಾಳೆ. ಹುಡುಗರು ಮೈ ಮರೆಯುತ್ತಾರೆ. ಆಕೆ ತನ್ನ ಸೇಡು ತೀರಿಸಿಕೊಳ್ಳಲು ಅಣಿಯಾಗಿಯೇ ಬಿಡುತ್ತಾಳೆ.
ಇಷ್ಟು ಹೇಳಿದ ಮೇಲೆ “ಕುಲ್ಫಿ’ ಒಂದು ಸೇಡಿನ ಎಂಬುದು ನಿಮಗೆ ಗೊತ್ತಾಗಿರುತ್ತದೆ. ಹುಡುಗಿಯೊಬ್ಬಳು ತನಗಾದ ಅನ್ಯಾಯಕ್ಕೆ ಸೇಡು ತೀರಿಸಿಕೊಳ್ಳಲು ಹೋಗುವುದೇ “ಕುಲ್ಫಿ’ಯ ಒನ್‌ಲೈನ್. ಸಿನಿಮಾ ಆರಂಭವಾಗಿ ಮುಗಿಯುವವರೆಗೆ ಹುಡುಗರ ಜೊತೆ ನಾಯಕಿ ಕಣ್ಣಾಮುಚ್ಚಾಲೆಯಾಡುವುದರಲ್ಲೇ ಬಹುತೇಕ ಸಿನಿಮಾ ಮುಗಿದು ಹೋಗುತ್ತದೆ. ಆರಂಭದಲ್ಲಿ ಆಕೆ ಆ ಮೂವರು ಹುಡುಗರನ್ನು ಯಾತಕ್ಕಾಗಿ ಕರೆದುಕೊಂಡು ಹೋಗುತ್ತಾಳೆ, ಆಕೆಯ ಒಗಟು ಮಾತಿನ ಅರ್ಥವೇನು ಎಂದು ತಲೆಕೆಡಿಸಿಕೊಳ್ಳುತ್ತಲೇ ಪ್ರೇಕ್ಷಕ ಸಿನಿಮಾ ನೋಡುತ್ತಾನೆ.
ಮೊದಲೇ ಹೇಳಿದಂತೆ ಸಿನಿಮಾ ಮುಗಿಯುವ ಕೆಲ ನಿಮಿಷಗಳ ಮುನ್ನ ಕಥೆ ತೆರೆದುಕೊಳ್ಳುತ್ತದೆ. ಕಥೆಯ ಒನ್‌ಲೈನ್ ಚೆನ್ನಾಗಿದೆ. ಯಾರಧ್ದೋ ಮೋಸಕ್ಕೆ ಅಮಾಯಕ ಯುವತಿಯರು ಹೇಗೆ ಬಲಿಯಾಗುತ್ತಾಳೆಂಬ ಅಂಶವನ್ನು ಇಲ್ಲಿ ಹೇಳಲಾಗಿದೆ. ಆದರೆ, ಇಡೀ ಸಿನಿಮಾವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಕಟ್ಟಿಕೊಡುವಲ್ಲಿ ನಿರ್ದೇಶಕರು ವಿಫಲರಾಗಿದ್ದಾರೆ. ಚಿತ್ರದಲ್ಲಿ ಸಾಕಷ್ಟು ಡಬಲ್ ಮೀನಿಂಗ್ ಸಂಭಾಷಣೆಗಳು ಕೂಡಾ ಇವೆ.
ಇದು ನಾಯಕಿ ಪ್ರಧಾನ ಚಿತ್ರ. ಸಿನೋಲ್ ಚಿತ್ರದ ನಾಯಕಿ. ಸಿನಿಮಾದುದ್ದಕ್ಕೂ ಗ್ಲಾಮರಸ್ ಆಗಿಯೇ ಕಾಣಿಸಿಕೊಂಡಿದ್ದಾರೆ. ಇಡೀ ಸಿನಿಮಾವನ್ನು ಅವರು ಆವರಿಸಿಕೊಂಡಿದ್ದಾರೆ ಕೂಡಾ. ಆದರೆ, ಸೇಡಿನ, ಸೆಂಟಿಮೆಂಟ್ ದೃಶ್ಯಗಳಲ್ಲಿ ಸಿನೋಲ್ ಮತ್ತಷ್ಟು ಪರಿಣಾಮಕಾರಿಯಾಗಿ ನಟಿಸುವ ಅವಕಾಶ ಅವರಿಗಿತ್ತು. ಉಳಿದಂತೆ ರಮೇಶ್ ಭಟ್, ಚಿತ್ಕಳಾ ಬಿರಾದಾರ್ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.
ಚಿತ್ರ: ಕುಲ್ಫಿ
ನಿರ್ಮಾಣ: ಮುನಿಸ್ವಾಮಿ ಹಾಗೂ ಚೌಡಪ್ಪ
ನಿರ್ದೇಶನ: ಮಂಜು ಹಾಸನ
ತಾರಾಗಣ: ಸಿನೋಲ್, ಗಿರೀಶ್ ಗೌಡ, ಲಾರೆನ್ಸ್, ದಿಲೀಪ್, ರಮೇಶ್ ಭಟ್ ಮತ್ತಿತರರು.
– ರವಿಪ್ರಕಾಶ್ ರೈ