Advertisement

ಜಾತಿ ವ್ಯವಸ್ಥೆಗೆ ಸವಾಲೊಡ್ಡಿದ “ಕುಲಂ’ 

06:00 AM Aug 17, 2018 | |

ಕೌರವರು -ಪಾಂಡವರ ನಡುವೆ ನಡೆಯುವ ಮಹಾಭಾರತ ಯುದ್ಧಕ್ಕಾಗಿ ಜಾತಿ ಸಮಸ್ಯೆಯನ್ನೇ ಚರ್ಚೆಗೆ ಒಳಪಡಿಸುವುದು ಈ ನಾಟಕದ ವಿಶೇಷ. ಜಾತಿ ವ್ಯವಸ್ಥೆಯನ್ನು ಪೋಷಿಸುವ ಹುನ್ನಾರಗಳ ಹಿಂದೆ ಅಧಿಕಾರ ಎನ್ನುವ ದುರಾಸೆಯಿರುತ್ತದೆ.ಸಂಪತ್ತಿನ ಹಪಾಹಪಿಯಿರುತ್ತದೆ ಎನ್ನುವುದನ್ನು ಕುಲಂ ನಾಟಕ ತಿಳಿಸಿಕೊಡುತ್ತದೆ.

Advertisement

ಉನ್ನತ ಕುಲದಲ್ಲಿ ಜನಿಸಿದರೂ, ತನ್ನದಲ್ಲದ ತಪ್ಪಿಗಾಗಿ, ಕುಲದ ಕಾರಣದಿಂದ ಅವಮಾನಕ್ಕೊಳಗಾಗುವ, ವಾಸ್ತವದಲ್ಲಿ ಯಾರದೋ ಅಧಿಕಾರದ ಲಾಭಕ್ಕಾಗಿ ಬಲಿಯಾಗುವ ಮಹಾಭಾರತದ ದುರಂತ ನಾಯಕ ಕರ್ಣ. ಬಯಕೆಯನ್ನು ಬಸಿರು ಮಾಡಿಕೊಂಡು, ಜಗಕ್ಕೆ ಅಂಜಿ ಆ ಬಸಿರನ್ನು ಗಂಗೆಯಲ್ಲಿ ತೇಲಿ ಬಿಟ್ಟ ಕುಂತಿಯಿಂದ ಆರಂಭವಾಗಿ ಕುಲವನ್ನು ನೋಡದೇ ತನ್ನ ರಾಜ್ಯದ ಅಂಗಾಧಿಪತಿಯನ್ನಾಗಿಸಿದ ದುರ್ಯೋಧನನವರೆಗೆ ಎಲ್ಲರೂ ಕರ್ಣನ ಹೀನ ಕುಲದ ಲಾಭ ಪಡೆದವರೇ.


ಇದೇ ಕರ್ಣನ ಕುರಿತಾಗಿ ಪಂಪ ಭಾರತದಲ್ಲಿ ಜಾತಿಯನ್ನು ಉಲ್ಲಂಘಿಸುವ, ಜಾತಿಯನ್ನು ಪ್ರಶ್ನಿಸುವ ಕತೆಯೊಂದನ್ನು “ಕುಲಂ’ ಎನ್ನುವ ನಾಟಕದ ಮೂಲಕ ಪ್ರಸ್ತುತ ಪಡಿಸಿದ್ದಾರೆ ನೀರಿನಲ್ಲಿ ತೇಲಿಬಂದ ಕರ್ಣನಿಗೆ ಬದುಕು ಕಲ್ಪಿಸಿಕೊಟ್ಟ ಬೆಸ್ತ ಸಮಾಜದ ಮೊಗವೀರರು. ವಾಸುದೇವ ಗಂಗೇರ ನಿರ್ದೇಶನ ಹಾಗೂ ವಿನ್ಯಾಸದಲ್ಲಿ “ಕುಲಂ’ ನಾಟಕವು ಮೊಗವೀರ ಯುವ ಸಂಘಟನೆಯ ಕೋಟೇಶ್ವರ ಘಟಕ ಹಾಗೂ ಮಹಿಳಾ ಸಂಘಟನೆಯ ಆಶ್ರಯದಲ್ಲಿ ಆ. 5 ರಂದು ಇಲ್ಲಿನ ಸರಸ್ವತಿ ಕಲ್ಯಾಣ ಮಂಟಪದಲ್ಲಿ ಪ್ರದರ್ಶನಗೊಂಡಿತು. 

ರಾಜಪ್ಪ ದಳವಾಯಿ ಅವರು ರಚಿಸಿದ ಈ ನಾಟಕದಲ್ಲಿ ವೃತ್ತಿಪರ ಕಲಾವಿದರಲ್ಲದಿದ್ದರೂ, ರಂಗಭೂಮಿಯ ಕಲಾವಿದರಿಗೇನೂ ಕಡಿಮೆಯಿಲ್ಲದ್ದಂತೆ ನಟಿಸುವ ಮೂಲಕ ಸೈ ಎನಿಸಿಕೊಂಡ ಕೋಟೇಶ್ವರ ಮೊಗವೀರ ಸಂಘಟನೆಯ ಸದಸ್ಯರು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. 
ಆಧುನಿಕ ಕಾಲದಲ್ಲಿಯೂ ಪ್ರಸ್ತುತವಾಗಿರುವ ಜಾತಿ ಪದ್ಧತಿ, ಕುಲದ ಪ್ರಶ್ನೆ ಪ್ರಾರಂಭವಾಗಿರುವುದು ಮಹಾಭಾರತ ಕಾಲದಲ್ಲಿ. ಕೌರವರು ಮತ್ತು ಪಾಂಡವರ ನಡುವೆ ನಡೆಯುವ ಮಹಾಭಾರತ ಯುದ್ಧಕ್ಕಾಗಿ ಜಾತಿ ಸಮಸ್ಯೆಯನ್ನೇ ಚರ್ಚೆಗೆ ಒಳಪಡಿಸುವುದು ಈ ನಾಟಕದ ವಿಶೇಷ. ಜಾತಿ ವ್ಯವಸ್ಥೆಯನ್ನು ಪೋಷಿಸುವ ಹುನ್ನಾರಗಳ ಹಿಂದೆ ಅಧಿಕಾರ ಎನ್ನುವ ದುರಾಸೆಯಿರುತ್ತದೆ. ಸಂಪತ್ತಿನ ಹಪಾಹಪಿಯಿರುತ್ತದೆ ಎನ್ನುವುದನ್ನು ಕುಲಂ ನಾಟಕ ತಿಳಿಸಿಕೊಡುತ್ತದೆ. ಮನುಷ್ಯರನ್ನು ಜಾತಿ- ಜಾತಿಗಳಲ್ಲಿ ಬಂಧಿಸಿ, ಮಾನವತೆಯ ವಿಶಾಲ ಜಗತ್ತಿನಿಂದ ಪ್ರತ್ಯೇಕಿಸುವ ಸ್ವಾರ್ಥ ಇಲ್ಲಿ ಅಭಿವ್ಯಕ್ತಗೊಂಡಿದೆ. 

ಪಂಪನು ಕರ್ಣನ ಮೂಲಕ ಪ್ರಶ್ನಿಸುವ ಕುಲ ಕುಲ ಅಂತೀರಲ್ಲ… ಯಾವುದಯ್ನಾ ಕುಲ ? ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಆದರೆ ಅವನ ಜಾತಿ ಯಾವುದು ಎನ್ನುವ ಪ್ರಶ್ನೆ ಮಾತ್ರ ಇಂದಿಗೂ ಜೀವಂತವಾಗಿರುವುದು ಮಾತ್ರ ದುರಂತ. ಸಹ ನಿರ್ದೇಶಕರಾಗಿ ವಿಕ್ರಮ್‌, ವಿಶೇಷ ಬೆಳಕಿನ ವ್ಯವಸ್ಥೆಯಲ್ಲಿ ಸದಾನಂದ ಬೈಂದೂರು, ವಸ್ತ್ರ ವಿನ್ಯಾಸ ಚಿನ್ನ ಗಂಗೇರ, ಸಂಗೀತದಲ್ಲಿ ಭರತ್‌ ಚಂದನ್‌, ರಾಜು ಬೀಜಾಡಿ, ನವೀನ, ಸಂದೇಶ ವಡೇರಹೋಬಳಿ, ಬಾಲಕೃಷ್ಣ ಕೆ.ಎಂ. ಸಹಕರಿಸುವ ಮೂಲಕ ನಾಟಕಕ್ಕೆ ಮತಷ್ಟು ಮೆರುಗು ತಂದಿತ್ತರು. 

ಮೊಗವೀರ ಯುವ ಸಂಘಟನೆಯ ಸತೀಶ್‌ ಎಂ. ನಾಯ್ಕ, ಸದಾನಂದ ಬಳ್ಕೂರು, ಸುಧಾಕರ ಕಾಂಚನ್‌, ಅಶೋಕ ತೆಕ್ಕಟ್ಟೆ, ಪಾಂಡುರಂಗ ಬೈಂದೂರು, ಹೇಮಾ ತೆಕ್ಕಟ್ಟೆ, ಐಶ್ವರ್ಯ ಪುತ್ರನ್‌, ಸಚಿನ್‌ ಹಳೆ ಅಳಿವೆ, ಶ್ರಾವ್ಯ ಪುತ್ರನ್‌, ರಾಜೀವ ಸೌರಭ, ಪ್ರಶಾಂತ ತೆಕ್ಕಟ್ಟೆ, ದಿವ್ಯಾಲಕ್ಷ್ಮೀ ಕೋಟೇಶ್ವರ, ಸಿಂಚನ, ಪ್ರಾರ್ಥನಾ, ಶ್ರೀಧರ ಬಿ.ಎನ್‌. ದಿಯಾ, ರಿಯಾ ಅವರ ನಟನೆಯು ಮನರಂಜಿಸಿತು. 

Advertisement

ಪ್ರಶಾಂತ್‌ ಪಾದೆ 

Advertisement

Udayavani is now on Telegram. Click here to join our channel and stay updated with the latest news.

Next