Advertisement

ಕುಲಾಲ ಅಭಿವೃದ್ಧಿ ನಿಗಮ: ರಾಜ್ಯ ಸರಕಾರಕ್ಕೆ ಆಗ್ರಹ

11:23 PM Nov 13, 2022 | Team Udayavani |

ಬೆಂಗಳೂರು: ಆರ್ಥಿಕ, ರಾಜಕೀಯ ಹಾಗೂ ಸಾಮಾಜಿಕವಾಗಿ ಹಿಂದುಳಿದ ಕುಲಾಲ ಸಮುದಾಯದ ಅಭಿವೃದ್ಧಿಗಾಗಿ ನಿಗಮ ಸ್ಥಾಪನೆ ಮಾಡಬೇಕು ಎಂದು ರಾಜ್ಯ ಸರಕಾರಕ್ಕೆ ಬೆಂಗಳೂರು ಕುಲಾಲ ಸಂಘ ಆಗ್ರಹಿಸಿದೆ.

Advertisement

ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ರವಿವಾರ ಹಮ್ಮಿಕೊಂಡಿದ್ದ ಬೆಂಗಳೂರು ಕುಲಾಲ ಸಂಘದ ಸುವರ್ಣ ಸಂಭ್ರಮ ಕಾರ್ಯಕ್ರಮದಲ್ಲಿ ಕುಲಾಲ ಸಮುದಾಯಕ್ಕೆ ನಿಗಮ ಸ್ಥಾಪನೆ ಮಾಡುವಂತೆ ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ಅವರಿಗೆ ಮನವಿ ಸಲ್ಲಿಸಲಾಯಿತು.

ಈ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು, ಮುಖ್ಯಮಂತ್ರಿಗಳ ಬಳಿ ಈ ಕುರಿತು ಚರ್ಚಿಸುವುದಾಗಿ ಭರವಸೆ ನೀಡಿದರು. ಕುಲಾಲ ಸಂಘಕ್ಕೆ ಬೆಂಗಳೂರಿನಲ್ಲಿ ಕಟ್ಟಡ ನಿರ್ಮಿಸಲು ಸ್ಥಳ ನೀಡುವುದಾಗಿ ಆಶ್ವಾಸನೆ ನೀಡಿದರು. ಸಮುದಾಯದ ಸರ್ವತೋಮುಖ ಅಭಿವೃದ್ಧಿಗಾಗಿ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಹೇಳಿದರು.

ಸಚಿವ ಎಸ್‌.ಟಿ.ಸೋಮಶೇಖರ್‌ ಮಾತನಾಡಿ, ಬಹಳಷ್ಟು ಸ್ವಾಮೀಜಿಗಳು ನಮ್ಮ ಮಠಕ್ಕೆ ಅನುದಾನ ಕೊಡಿಸಿ ಎಂದು ಹೇಳುವುದನ್ನು ಸಾಮಾನ್ಯವಾಗಿ ನೋಡಿದ್ದೇನೆ. ಆದರೆ ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಕುಲಾಲ ಸಂಘದ ಕಾರ್ಯಕರ್ತರಿಗೆ ಪ್ರೋತ್ಸಾಹ ನೀಡಿ, ರಾಜಕೀಯವಾಗಿ ಶಕ್ತಿ ಕೊಡುವ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ ಎಂದರು.

ಕುಲಾಲ ಸಂಘದ ಅಧ್ಯಕ್ಷ ಪುರುಷೋತ್ತಮ್‌ ಚೇಂಡ್ಲಾ ಮಾತನಾಡಿ, ಸಮುದಾಯವು ಶೋಷ ಣೆಗೆ ಒಳಗಾಗಿ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯವಾಗಿ ಅತಿ ಹಿಂದುಳಿದಿದೆ. ಹೀಗಾಗಿ ಸಮಾಜವನ್ನು ಮುಖ್ಯವಾಹಿನಿಗೆ ತರಲು ಸರಕಾರ ನಿಗಮ ಸ್ಥಾಪನೆ ಮಾಡಬೇಕು ಎಂದರು.

Advertisement

ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಸಂಘದ ಗೌರವಾಧ್ಯಕ್ಷ ಜಿ. ಈಶ್ವರ ಮೂಲ್ಯ, ಪ್ರಧಾನ ಕಾರ್ಯದರ್ಶಿ ಶಂಕರ ಕುಲಾಲ್‌ ಜನ್ನಾಡಿ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next