ಕುಳಗೇರಿ ಕ್ರಾಸ್: ಇಲ್ಲಿಯ ಎಂಎಲ್‌ಬಿಸಿ ಆವರಣದಲ್ಲಿರುವ ಹೋಬಳಿ ಮಟ್ಟದ ನಾಡ ಕಚೇರಿ ಕಟ್ಟಡ ಶಿಥಿಲಾವಸ್ಥೆ ತಲುಪಿದ್ದು, ಸಿಬ್ಬಂದಿ ಜೀವ ಭಯದಲ್ಲೇ ಕಾಲ ದೂಡುತ್ತಿದ್ದಾರೆ. ಜಾಗ ಇದ್ದರೂ ಸ್ವಂತ ಕಟ್ಟಡ ಹೊಂದಿರದ ಕಂದಾಯ ಇಲಾಖೆಗೆ ಹಿಡಿಶಾಪ ಹಾಕುವಂತಾಗಿದೆ. ನೀರಾವರಿ ನಿಗಮದವರ ವಸತಿ ಗೃಹದಲ್ಲಿ ಕಾರ್ಯ ನಿರ್ವಹಿಸುತ್ತಿರುವ ನಾಡಕಚೇರಿ ಕಟ್ಟಡದ ಮೇಲ್ಛಾವಣಿಯ ಸಿಮೆಂಟ್ ಪ್ಲಾಸ್ಟರ್ ಉದುರಿ ಬೀಳುತ್ತಿದ್ದು, ಬರೀ ಕಬ್ಬಿಣದ ಸರಳಿಗಳು ಮಾತ್ರ ಕಾಣುತ್ತಿವೆ.
ಕಿಟಕಿ-ಗಾಜುಗಳು ಒಡೆದು ಹೋಗಿದ್ದರಿಂದ ಮಳೆಗಾಲದಲ್ಲಿ ಮಳೆ ನೀರು ನೇರವಾಗಿ ಕಟ್ಟಡದೊಳಗೆ ಬರುತ್ತದೆ. ಕಟ್ಟಡದಲ್ಲಿ ಸುರಕ್ಷಿತ ಸ್ಥಳ ಇಲ್ಲದ ಕಾರಣ ಅರ್ಜಿ ಫಾರ್ಮ್ಗಳು ಮಳೆ ನೀರಿನಲ್ಲಿ ನೆನೆಯುತ್ತಿವೆ. ಇದರಿಂದ ಕಾಗದ ಪತ್ರಗಳನ್ನು ನೀರಿನಿಂದ ಸುರಕ್ಷಿತವಾಗಿ ಇಡುವುದೇ
ಹರಸಾಹಸವಾಗುತ್ತದೆ. ಅದಲ್ಲದೇ ಬಾಗಿಲುಹಾಗೂ ಕದಗಳು ನೀರಿನಲ್ಲಿ ನೆನೆದು ಹಾಳಾಗಿ ಹೋಗಿವೆ.ಗಣಕ ಯಂತ್ರದ ಮೇಲೆ ನಿತ್ಯವೂ ಸಿಮೆಂಟ್ ಪದರು ಉದುರಿ ಬೀಳುತ್ತಿದೆ. ಈ ನಾಡ ಕಚೇರಿಗೆ ಹೊಲದ ಪಹಣಿ ಪತ್ರ ಸೇರಿದಂತೆ ಆಧಾರ್ ಕಾರ್ಡ್ ಪಡೆಯಲು ನೂರಾರು ಜನರು ಬರುತ್ತಿದ್ದು,
ಅವರಿಗೂ ಸಹ ನಿಲ್ಲಲು ನೆರಳಿಲ್ಲದಂತಾಗಿದೆ. ಶಿಥಿಲಗೊಂಡ ಕಟ್ಟಡ ಮುಂದೆ ಕಂಬ ನೆಟ್ಟು ಹತ್ತು ಜನ ನಿಲ್ಲಲೂ ಆಗದಂತಹ ನಾಲ್ಕು ತಗಡು ಹಾಕಲಾಗಿದೆ. ಅದು ಸಹ ಇಂದೋ ನಾಳೆಯೋ ಮೈಮೇಲೆ ಬೀಳುವಂತಿದೆ. ಹೀಗಾಗಿ ಜನರು ಬಿಸಿಲಿನ ತಾಪ ತಾಳಲಾರದೆ ಜನ ಬೇಸತ್ತು ಹೋಗಿದ್ದಾರೆ.
-ಮಹಾಂತಯ್ಯ ಹಿರೇಮಠ