Advertisement

ಕುಳಗೇರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡ ಶಿಥಿಲ

12:07 PM Jun 10, 2022 | Team Udayavani |

ಕುಳಗೇರಿ ಕ್ರಾಸ್‌: ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಗಳು ಶಿಥಿಲಗೊಂಡಿದ್ದು, ವಿದ್ಯಾರ್ಥಿಗಳು ಭಯದಲ್ಲೇ ಪಾಠ ಆಲಿಸುವಂತಾಗಿದೆ.

Advertisement

1966ರಲ್ಲಿ ಆರಂಭಗೊಂಡ ಈ ಶಾಲೆಯನ್ನು ಅಂದಿನ ಮೈಸೂರು ರಾಜ್ಯದ ಶಿಕ್ಷಣ ಸಚಿವರಾಗಿದ್ದ ಎಸ್‌. ಆರ್‌. ಕಂಠಿ ಶಂಕುಸ್ಥಾಪನೆ ಮಾಡಿದ್ದರು. ಈಗ ಶಾಲೆಯಲ್ಲಿ 1ರಿಂದ 7ನೇ ತರಗತಿಯವರೆಗೆ ಸುಮಾರು 175ಕ್ಕೂ ಅಧಿಕ ವಿದ್ಯಾಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

ಸುಮಾರು ಎಂಟು ಕೊಠಡಿಗಳ ಹೊಂದಿದ ಈ ಶಾಲೆಯಲ್ಲಿ ಒಂದೇ ಕೊಠಡಿ ಉತ್ತಮವಾಗಿದ್ದು, ಅದರಲ್ಲೇ ಆನ್‌ಲೈನ್‌ ಕ್ಲಾಸ್‌ ನಡೆಸುತ್ತಿದ್ದಾರೆ. ಉಳಿದ ಏಳು ಕಟ್ಟಡ ಸಂಪೂರ್ಣ ಶಿಥಿಲಗೊಂಡಿವೆ. ಕೊಠಡಿಗಳ ಕೊರತೆಯಿಂದ ವಿದ್ಯಾರ್ಥಿಗಳು ಪಾಠ ಕೇಳುವುದೆ ಕಷ್ಟವಾಗಿದೆ. ಶಾಲಾ ಆವರಣದಲ್ಲಿ ಸ್ವಲ್ಪ ಜಾಗವೂ ಇಲ್ಲ. ಆದರೆ, ಶಿಕ್ಷಕರು-ಮಕ್ಕಳು ಸೇರಿ ಶಾಲೆ ಆವರಣವನ್ನು ಹಸಿರಿನಿಂದ ಕಂಗೊಳಿಸುವಂತೆ ಮಾಡಿದ್ದಾರೆ.

ಸುಮಾರು ವರ್ಷಗಳ ಹಿಂದೆ ಕಲ್ಲು ಮಣ್ಣಿನಿಂದ ನಿರ್ಮಿಸಿದ ಕಟ್ಟಡಗಳು ಶಿಥಿಲಗೊಂಡಿವೆ. ಅದರಲ್ಲೇ ಶಿಕ್ಷಕರು ಮೇಲ್ಛಾವಣಿ ನೋಡುತ್ತ ಭಯದಲ್ಲೇ ಪಾಠ ಮಾಡಿದರೆ, ಇನ್ನು ವಿದ್ಯಾರ್ಥಿಗಳು ಬಿರುಕು ಬಿಟ್ಟ ಕಟ್ಟಡ ದಲ್ಲಿ ಹರಿದಾಡುವ ಹಾವು ಚೇಳುಗಳ ಭಯದಲ್ಲಿ ಅತ್ತ-ಇತ್ತ ಬಿರುಕು ಗೋಡೆಗಳನ್ನು ನೋಡುತ್ತ ಪಾಠ ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ.

ಸೋರುತಿದೆ ಶಾಲೆ: ಒಡೆದ ಹಂಚುಗಳ ಕಿಂಡಿಯಿಂದ ವಿದ್ಯಾರ್ಥಿಗಳ ಮೈಮೇಲೆ ಬೀಳುವ ಸೂರ್ಯನ ಕಿರಣಗಳು ಒಂದೆಡೆಯಾದರೆ ಮಳೆ ಬಂದರೆ ಶಿಕ್ಷಕರು ವಿದ್ಯಾರ್ಥಿಗಳಿಗೆ ಪಾಠ ಮಾಡುವಂತಿಲ್ಲ, ಮಳೆ ನೀರು ಶಾಲೆಯೊಳಗೆ ನುಗ್ಗಿ ಕೊಠಡಿಗಳು ಜಲಾವೃತಗೊಳ್ಳುತ್ತವೆ. ಬಾಗಿಲು-ಕಿಟಕಿ ಚೌಕಟ್ಟುಗಳು ಗೆದ್ದಿಲು ತಿಂದು ಹಾಳಾಗಿವೆ. ಸಿಮೆಂಟ್‌ ನಿಂದ ನಿರ್ಮಿಸಲಾದ ಕಾಂಕ್ರಿಟ್‌ ಕಂಬಗಳು (ಪಿಲ್ಲರ್‌) ಸಹ ಚರ್ಮ ಸುಲಿದ ದೇಹದಂತಾಗಿವೆ. ಬಿರುಕು ಬಿಟ್ಟು ಪ್ರತಿ ಕ್ಷಣ ಅಪಾಯದ ಸೂಚನೆ ಕೊಡುತ್ತಿವೆ.

Advertisement

ಶಿಥಿಲಗೊಂಡ ಶಾಲಾ ಕಟ್ಟಡ ಕುರಿತು ನನ್ನ ಗಮನಕ್ಕೆ ತಂದರೆ ನಾನು ಕ್ರಮ ಕೈಗೊಳ್ಳುತ್ತೇನೆ. ಸದ್ಯ ನಮ್ಮ ಇಲಾಖೆ ಜತೆ ಮಾತನಾಡಿ ಅಧು ಕಾರಿಗಳಿಗೆ ಪರಿಶೀಲಿಸುವುದಾಗಿ ತಿಳಿಸುತ್ತೇನೆ. ಸಂಬಂಧಿಸಿದ ಮುಖ್ಯ ಶಿಕ್ಷಕರು ಫೋಟೋ ಸಮೇತ ನಮ್ಮ ಕಚೇರಿಗೆ ಅರ್ಜಿ ಬರೆದು ಕಳುಹಿಸಿದರೆ ಕಟ್ಟಡ ಮಂಜೂ‌ುರು ಮಾಡುವ ಕೆಲಸ ಮಾಡುತ್ತೇನೆ.  –ಶ್ರೀಶೈಲ ಬಿರಾದಾರ, ಡಿಡಿಪಿಐ

ಬಾಗಲಕೋಟೆ ಸರಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಣ ದೊರೆಯುತ್ತಿದೆ. ಆದರೆ, ಮೂಲ ಸೌಲಭ್ಯಗಳೇ ಮರೀಚಿಕೆಯಾಗಿವೆ. ಕೇಳಿದ ತಕ್ಷಣ ಗುಡಿ-ಗುಂಡಾರಗಳಿಗೆ ಅನುದಾನ ನೀಡುವ ನಮ್ಮ ಜನಪ್ರತಿನಿಧಿಗಳು ಸಾಕಷ್ಟು ಅನುದಾನ ಕೊಟ್ಟು ದೇವಸ್ಥಾನಗಳನ್ನು ಅಭಿವೃದ್ದಿ ಮಾಡುತ್ತಾರೆ. ಆದರೆ, ಬಡ ಮಕ್ಕಳು ಕಲಿಯುವ ಕನ್ನಡ ಶಾಲೆಗಳಿಗೆ ಅನುದಾನಕ್ಕೆ ಹಿಂದೇಟು ಹಾಕುತ್ತಾರೆ. ಅನುದಾನ ತಂದು ಗುಡಿ-ಗುಂಡಾರ ಕಟ್ಟುವ ಬದಲು ಕನ್ನಡ ಶಾಲೆಗೆ ಅನುದಾನ ತಂದು ನಿಜವಾದ ದೇವಸ್ಥಾನ ಕಟ್ಟುವ ಕೆಲಸ ಮಾಡಬೇಕು. ಶಿಕ್ಷಕರ ಜತೆ ಪಾಲಕರು ಕೈ ಜೋಡಿಸಿ ಮಕ್ಕಳ ಭವಿಷ್ಯ ರೂಪಿಸಬೇಕಿದೆ. -ಹನಮಂತ ಅಪ್ಪನ್ನವರ, ಕುರುಬ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ

ಅಧಿಕಾರಿಗಳಿಗೆ ಎಚ್ಚರಿಕೆ:  ನಮ್ಮೂರಿನ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗಿದೆ. ಸದ್ಯ ಶಾಲೆಗೆ ಅಧಿಕಾರಿಗಳು ಭೇಟಿ ನೀಡಿ ಶಾಲೆಗೆ ಸೂಕ್ತ ಕಟ್ಟಡ ವ್ಯವಸ್ಥೆ ಮಾಡದಿದ್ದರೆ ಬೀಗ ಜಡಿದು ಹೋರಾಟ ಮಾಡುವುದಾಗಿ ಎಸ್‌ಡಿಎಂಸಿ ಹಾಗೂ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ. ಶಿಥಿಲಗೊಂಡ ಶಾಲೆಯ ಕಟ್ಟಡಗಳ ಕುರಿತು ಭಾವಚಿತ್ರ ಸಮೇತ ಸಾಕಷ್ಟು ಬಾರಿ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಅಧಿಕಾರಿಗಳು ಸಹ ಭೇಟಿ ನೀಡಿ ಪರಿಶೀಲನೆ ನಡೆಸಿದರೂ ಪ್ರಯೋಜನವಾಗಿಲ್ಲ . -ಮಹಾಂತಯ್ಯ ಹಿರೇಮಠ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next