Advertisement

Subramanya:ಕುಕ್ಕೆ- ಬೆಳೆದಿವೆ ವಿವಿಧ ಗಿಡಗಳು- ನಗರ ಹಸುರೀಕರಣಕ್ಕೆ ಕಳೆದ ವರ್ಷ ಚಾಲನೆ

06:42 PM Aug 09, 2023 | Team Udayavani |

ಸುಬ್ರಹ್ಮಣ್ಯ: ಒಂದೊಮ್ಮೆ ಹಚ್ಚ ಹಸುರಿ ನಿಂದ ಕೂಡಿದ್ದ ಯಾತ್ರಾ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಕೆಲವು ವರ್ಷಗಳಿಂದ ಅಭಿವೃದ್ಧಿ ಕೆಲಸಗಳಿಂದ ಕಾಂಕ್ರಿಟೀಕರಣಗೊಂಡಿದೆ. ಕ್ಷೇತ್ರದಲ್ಲಿ ಮತ್ತೆ ಹಸುರೀಕರಣಕ್ಕೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ಯೋಜನೆ ರೂಪಿಸಿ ಕಳೆದ ವರ್ಷ ಚಾಲನೆ ನೀಡಲಾ ಗಿತ್ತು. ವರ್ಷಗಳ ಹಿಂದೆ ನಾಟಿ ಮಾಡಿದ ಗಿಡಗಳು ಬೆಳೆದು ನಿಂತಿದ್ದು, ಹಸುರೀಕರಣಕ್ಕೆ ಮುನ್ನುಡಿ ಇಟ್ಟಿವೆ.

Advertisement

ರಾಜ್ಯದ ನಂಬರ್‌ ವನ್‌ ಆದಾಯದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಧರ್ಮದಾಯಿದತ್ತಿ ಇಲಾಖೆಗೆ ಒಳಪಟ್ಟಿದೆ. ಅರಣ್ಯ ಪ್ರದೇಶ, ಹಚ್ಚ ಹಸುರಿನಿಂದ ಸಮೃದ್ಧಗೊಂಡಿದ್ದ ಭಕ್ತರ  ಭೇಟಿ ಹೆಚ್ಚಳವಾಗುತ್ತಿದ್ದಂತೆ ಅವರಿಗೆ ಮೂಲಸೌಕರ್ಯ ಹಾಗೂ ಕ್ಷೇತ್ರದ ಅಭಿವೃದ್ಧಿ ಕೆಲಸಗಳಿಂದ ಒಂದೊಂದೇ ಮರ, ಗಿಡಗಳು ಕಣ್ಮರೆಯಾಗಿವೆ.

ಹಸುರೀಕರಣಕ್ಕೆ ಯೋಜನೆ
ಕುಕ್ಕೆ ಕ್ಷೇತ್ರವನ್ನು ಈ ಹಿಂದಿನಂತೆ ಹಚ್ಚ ಹಸುರಿನಿಂದ ಸಮೃದ್ಧವಾಗಿ ಕಂಗೊಳಿಸುವಂತೆ ಮಾಡಲು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮಂಡಳಿ ಯೋಜನೆ ರೂಪಿಸಿತ್ತು. ಯೋಜನೆಯಂತೆ ಸೇವಾ ಭಾರತಿ ಸುಳ್ಯ, ಅರಣ್ಯ ಇಲಾಖೆ ಸಹಕಾರದಲ್ಲಿ ವನಸಂವರ್ಧನಾ ಕಾರ್ಯಕ್ರಮಕ್ಕೆ 2022ರ ಜು. 13ರಂದು ಚಾಲನೆ ನೀಡ ಲಾಗಿತ್ತು. ಅಂದು ಏಕಕಾಲದಲ್ಲಿ 14
ಕಡೆಗಳಲ್ಲಿ ಗಿಡ ನಾಟಿ ಮಾಡಲಾಗಿತ್ತು. ಗಣ್ಯರು ಭಾಗವಹಿಸಿದ್ದರು.

ಎರಡು ಸಾವಿರ ಗಿಡಗಳ ನಾಟಿಗೆ ಗುರಿ ಇರಿಸಲಾಗಿತ್ತು. ಅದರಂತೆ ಕ್ಷೇತ್ರದ ಪ್ರಮುಖ ರಸ್ತೆ ಬದಿಗಳಲ್ಲಿ, ಆಯಾ ಪ್ರದೇಶಗಳಲ್ಲಿ ಹೂ, ಹಣ್ಣು ಬಿಡುವಂತಹ ಹಾಗೂ ವಿವಿಧ ಜಾತಿಯ ಗಿಡಗಳನ್ನು ನಾಟಿ ಮಾಡಲಾಗಿದೆ. ಶಿಕ್ಷಣ ಸಂಸ್ಥೆ, ಸಂಘ ಸಂಸ್ಥೆಗಳು ಸಹಕಾರ ನೀಡಿದ್ದವು. ಈ ವರ್ಷವೂ ಗಿಡಗಳ ನಾಟಿ ಮಾಡಲಾಗುತ್ತಿದೆ. ರಸ್ತೆ ವಿಭಾಜಕದಲ್ಲಿ ಗಿಡ ನಾಟಿ, ಆದಿಶೇಷ ಸುತ್ತ 60-70 ಗಿಡಗಳ ನಾಟಿ, ಸೇರಿದಂತೆ ಗಿಡಗಳ ನಾಟಿ ಮಾಡಲಾಗುತ್ತಿದೆ.

ಯೋಜನೆಗೆ ಪೂರಕ ಎಂಬಂತೆ ಕ್ಷೇತ್ರಕ್ಕೆ ಗಣ್ಯರು ಭೇಟಿ ನೀಡಿದ ಸಂದರ್ಭದಲ್ಲಿ ಅವರಿಂದಲೂ ಕ್ಷೇತ್ರದ ಪರಿಸರದಲ್ಲಿ
ಗಿಡಗಳನ್ನು ನಾಟಿ ಮಾಡಿಸಲಾಗಿತ್ತು. ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಸೇರಿದಂತೆ ನೂರಾರು ಗಣ್ಯರು ಕ್ಷೇತ್ರಕ್ಕೆ ಭೇಟಿ ನೀಡಿ ಗಿಡ ನಾಟಿ ಮಾಡಿದ್ದಾರೆ. ಜತೆಗೆ ಕ್ಷೇತ್ರದ ಯೋಜನೆಯ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Advertisement

ಕಳೆದ ವರ್ಷದ ಜುಲೈನಲ್ಲಿ ಚಾಲನೆ ನೀಡಲಾಗಿದ್ದ ವನಸಂವರ್ಧನ ಕಾರ್ಯಕ್ರಮದಂತೆ ನಾಟಿ ಮಾಡಲಾದ ಗಿಡಗಳನ್ನು ದೇವಸ್ಥಾನ ಹಾಗೂ ಸಂಘ ಸಂಸ್ಥೆಗಳ ಸಹಕಾರದಲ್ಲಿ ಪೋಷಣೆ ಮಾಡಲಾಗಿತ್ತು. ಗಿಡಗಳ ರಕ್ಷಣೆಗೆ ತಡೆಬೇಲಿ ನಿರ್ಮಿಸಲಾಗಿತ್ತು. ಬೇಸಗೆಯಲ್ಲಿ ಟ್ಯಾಂಕರ್‌ ಮೂಲಕ ನೀರು ಹಾಕುವ ವ್ಯವಸ್ಥೆ, ಗೊಬ್ಬರ ಹಾಕಿ ಕಳೆ ಕೀಳುವ ಕೆಲಸವೂ ಮಾಡಲಾಗಿದೆ.

ವಿವಿಧ ಗಿಡಗಳು
ನೇರಳೆ, ಪನ್ನೇರಳೆ, ಕೆಂಡಸಂಪಿಗೆ, ರೆಂಜ, ರಂಬೋಟನ್‌, ಕೋಳಿಜುಟ್ಟು, ಬಟರ್‌ಫ್ರುಟ್‌, ಕಹಿಬೇವು, ಬಿಲ್ವಪತ್ರೆ, ಸೀತಾ ಅಶೋಕ, ಸ್ಟಾರ್‌ ಆ್ಯಪಲ್‌, ಪೇರಳೆ, ಕುಂಟನೇರಳೆ, ಪುನರ್‌ಪುಳಿ, ಅರ್ತಿ, ಗಂಧ, ಬಾದಾಮು, ನೆಲ್ಲಿ, ಸೊರಗೆ, ಕದಂಬ, ಕಕ್ಕೆ, ಜಮ್ಮುನೇರಳೆ, ಹುಣಸೆ, ಪಾಲಸ, ನಾಗಲಿಂಗ ಪುಷ್ಪ, ನಾಗಸಂಪಿಗೆ, ಮಾವು, ಪೇರಳೆ, ರಾಂಫ‌ಲ, ಹಲಸು, ಚಕೋತ, ಔಷಧೀಯ ಗಿಡಗಳಾದ ಕುಟಜ, ಸ್ತ್ರೀಕುಟಜ, ಮೈನೇರಳೆ, ಅಂಕೋಡಿ, ಭವ್ಯ, ಲಕ್ಷ್ಮಣ ಫ‌ಲ, ಪಾರೀಷ, ರೋಹಿತಕ್‌, ವಾತಪೋತ, ಅಗ್ನಿಮಂಥ, ಮುಟುಕುಂದ, ಏಕನಾಯಕ, ಪುತ್ರಂಜೀವ, ನಾಗಕೆಸರ, ಗುಳಿಮಾವು, ಶಿವನಿ, ಹಲಸು, ಪೇರಳೆ, ಚಿಕ್ಕು, ಮಾವು, ನೇರಳೆ, ಹತ್ತಿ ಹಾಗೂ ನಾಗನಿಗೆ ಸಂಬಂಧಿಸಿದಂತೆ ಪತ್ರಬಿಂಬ ಸಹಿತ ಮದ್ದಿನ ಗಿಡಗಳನ್ನು ನೆಡಲಾಗಿದೆ. ಕಳೆದ ವರ್ಷ 873 ಗಿಡಗಳನ್ನು ನಾಟಿ
ಮಾಡಲಾಗಿದೆ. ಈ ವರ್ಷ ಮತ್ತಷ್ಟು ಹೆಚ್ಚಿನ ಗಿಡಗಳ ನಾಟಿಗೆ ಗುರಿ ಇರಿಸಲಾಗಿದೆ.

ನೆಟ್ಟಿರುವ ಗಿಡಗಳು ಬೆಳೆದುನಿಂತಿರುವುದರಿಂದ ಮುಂದಿನ ದಿನಗಳಲ್ಲಿ ಕ್ಷೇತ್ರದಲ್ಲಿ ಭಕ್ತರು ಬೇಸಗೆಯಲ್ಲೂ ತಣ್ಣನೆಯ ನೆರಳಿಂದ
ನಡೆದಾಡಬಹುದಾಗಿದೆ.

ಇನಷ್ಟು ಗಿಡ ನಾಟಿ
ಕುಕ್ಕೆ ಕ್ಷೇತ್ರವನ್ನು ಹಚ್ಚಹಸುರಿನಿಂದ ಕಂಗೊಳಿಸುವಂತೆ ಮಾಡಲು ಗಿಡಗಳ ನಾಟಿ ಮಾಡಲಾಗುತ್ತಿದೆ. ಕಳೆದ ವರ್ಷ ನೆಟ್ಟ ಗಿಡಗಳು ಉತ್ತಮ ರೀತಿಯಲ್ಲಿ ಬೆಳೆದು ನಿಂತಿವೆ. ಈ ವರ್ಷವೂ ಇನ್ನಷ್ಟು ಗಿಡ ನೆಡಲು ಗುರಿ ಇರಿಸಲಾಗಿದೆ. ಸುಳ್ಯ ಹಾಗೂ ಕಡಬ ತಾಲೂಕಿನ ವಿವಿಧ ಶಾಲೆಗಳಿಗೆ ಗಿಡಗಳ ರಕ್ಷಣೆಗೆ 25ರಂತೆ ಟ್ರೀಗಾರ್ಡ್‌ ನೀಡಲು ನಿರ್ಧರಿಸಲಾಗಿದೆ.
ಮೋಹನ್‌ರಾಂ ಸುಳ್ಳಿ,
ಅಧ್ಯಕ್ಷರು ವ್ಯವಸ್ಥಾಪನ ಸಮಿತಿ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ

Advertisement

Udayavani is now on Telegram. Click here to join our channel and stay updated with the latest news.

Next