Advertisement

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಭಕ್ತ ಸಾಗರ

05:43 PM Oct 09, 2022 | Team Udayavani |

ಸುಬ್ರಹ್ಮಣ್ಯ: ಮಹತೋಭಾದ ಕುಕ್ಕೆ ಸುಬ್ರಹ್ಮಣ್ಯಕ್ಷೇತ್ರಕ್ಕೆ ರವಿವಾರ ಶ್ರೀ ದೇವರ ದರ್ಶನ ಕ್ಕಾಗಿ ಭಕ್ತ ಸಾಗರವೇ ಹರಿದು ಬಂದಿತ್ತು. ದಸರಾ ರಜೆ ಹಿನ್ನೆಲೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಶ್ರೀ ಕ್ಷೇತ್ರಕ್ಕೆ ಆಗಮಿಸಿ ಶ್ರೀ ದೇವರ ದರ್ಶನ ಮಾಡಿದರು.

Advertisement

ಶುಕ್ರವಾರ ಹಾಗೂ ಶನಿವಾರ ಕೂಡ ಭಾರಿ ಜನಸಂಖ್ಯೆ ಕ್ಷೇತ್ರದಲ್ಲಿ ಕಂಡುಬಂದಿತ್ತು. ಈ ದಿನ ಶ್ರೀ ಕ್ಷೇತ್ರದಲ್ಲಿ 142 ತುಲಾಭಾರ ಸೇವೆ ನೆರವೇರಿದೆ. 142 ಮಂದಿ ತುಲಾಭಾರ ಸೇವೆ ನೆರವೇರಿಸುವುದರ ಮೂಲಕ ಶ್ರೀ ದೇವರಿಗೆ ತಾವು ತೂಗಿದ ದವಸ ಧಾನ್ಯಗಳನ್ನು ಅರ್ಪಿಸಿದರು.

ಇದರೊಂದಿಗೆ 1350 ಆಶ್ಲೇಷ ಬಲಿ, ನಾಗಪ್ರತಿಷ್ಠೆ-445, ಶೇಷ ಸೇವೆ-205, 300ಕ್ಕೂ ಅಧಿಕ ಕಾರ್ತಿಕ ಪೂಜೆ, ಉಳಿದಂತೆ ಮಹಾಪೂಜೆ, ಮಹಾಭಿಷೇಕ ಮತ್ತಿತರ ಸೇವೆಗಳು ಅಧಿಕವಾಗಿ ನೆರವೇರಿದೆ.

30ಸಾವಿರಕ್ಕೂ ಅತ್ಯಧಿಕ ಸಂಖ್ಯೆಯಲ್ಲಿ ಭಕ್ತರು ಶ್ರೀ ದೇವರ ದರ್ಶನ ಪಡೆದು ಪ್ರಸಾದ ಭೋಜನ ಸ್ವೀಕರಿಸಿದರು. ಜಾತ್ರೆಯನ್ನು ಹೊರತು ಪಡಿಸಿ ದಾಖಲೆಯ ಸಂಖ್ಯೆಯಲ್ಲಿ ಭಕ್ತರಾಗಮಿಸಿದ ದಿನವಾಗಿ ಕಂಡು ಬಂತು. ಅಲ್ಲದೆ ಕ್ಷೇತ್ರದಲ್ಲಿ ಜಾತ್ರೆಯ ವಾತಾವರಣವೇ ತುಂಬಿತು. ದಾಖಲೆ ಪ್ರಮಾಣದಲ್ಲಿ ಜನರು ನೆರೆದಿದ್ದರೂ ಶ್ರೀ ದೇವಳದ ವತಿಯಿಂದ ವ್ಯವಸ್ಥಿತವಾಗಿ ಪ್ರಸಾದವನ್ನು ಹಾಗೂ ಭೋಜನವನ್ನು ವಿತರಿಸಲಾಯಿತು.

ವಾರದಿಂದ ದಸರಾ ರಜೆಯಿದ್ದು, ಹಬ್ಬ ಮುಗಿದ ನಂತರ ಎರಡನೇ ಶನಿವಾರದ ರಜೆ ಸೇರಿದಂತೆ ನಿರಂತರ ರಜಾ ಸರಣಿ ಬಂದುದರಿಂದ ಕ್ಷೇತ್ರದತ್ತ ಭಕ್ತರ ಆಗಮನ ಅಧಿಕವಿತ್ತು. ರವಿವಾರ ಭಕ್ತರ ಆಗಮನ ಗಣನೀಯವಾಗಿ ಏರಿಕೆಯಾಗಿತ್ತು. ಇದರಿಂದಾಗಿ ಶ್ರೀ ದೇವಳದ ವಸತಿ ಗೃಹಗಳು ತುಂಬಿತ್ತು. ಇದರೊಂದಿಗೆ ಇಲ್ಲಿರುವ ಖಾಸಗಿ ವಸತಿ ಗೃಹಗಳು ಕೂಡಾ ಭರ್ತಿಯಾಗಿತ್ತು. ಅಧಿಕ ಸಂಖ್ಯೆಯಲ್ಲಿ ಕ್ಷೇತ್ರಕ್ಕೆ ಭಕ್ತರು ಶನಿವಾರ ಸಂಜೆ ವೇಳೆ ಆಗಮಿಸಿದ್ದರಿಂದ ವಸತಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next