Advertisement

ಕುಕ್ಕೆಯಲ್ಲಿ ವಸತಿ ಸಮಸ್ಯೆ? ಬೀದಿಯಲ್ಲೇ ಮಲಗಿದ ಭಕ್ತರು –ವಿಡಿಯೋ ವೈರಲ್‌

01:47 AM May 04, 2022 | Team Udayavani |

ಸುಬ್ರಹ್ಮಣ್ಯ: ರಾಜ್ಯದ ಪ್ರಸಿದ್ಧ ಯಾತ್ರಾ ಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲಿ ರಜಾ ದಿನವಾದ ಸೋಮವಾರ ರಾತ್ರಿ ಭಕ್ತರು ರಸ್ತೆಯಲ್ಲೇ ಮಲಗಿದ್ದರು ಎಂಬ ವೀಡಿಯೋ, ಫೋಟೋ ವೈರಲ್‌ ಆಗಿದ್ದು ಕ್ಷೇತ್ರದಲ್ಲಿ ವಸತಿ ಸಮಸ್ಯೆ ಕಾಡುತ್ತಿದೆಯೇ ಎಂಬ ಚರ್ಚೆ ವ್ಯಾಪಕವಾಗಿ ಕೇಳಿಬಂದಿದೆ.

Advertisement

ಪ್ರಸ್ತುತ ಶಾಲಾ-ಕಾಲೇಜುಗಳಿಗೆ ರಜಾ ದಿನವಾಗಿದ್ದು, ಜತೆಗೆ ಸರಣಿ ಸರಕಾರಿ ರಜೆ ಇದ್ದ ಹಿನ್ನೆಲೆಯಲ್ಲಿ ಕ್ಷೇತ್ರಕ್ಕೆ ಹೆಚ್ಚಿನ ಭಕ್ತರು ಆಗಮಿಸಿದ್ದರು. ಇದೇ ಕಾರಣದಿಂದ ಕ್ಷೇತ್ರದ ವಸತಿ ಕೊರತೆ ಎದುರಾಗಿ ಭಕ್ತರು ರಸ್ತೆಯಲ್ಲಿ ಮಲಗಿದ್ದಾರೆ ಎಂಬ ಮಾತು ಕೇಳಿ ಬಂದಿದೆ. ಜತೆಗೆ ಭಕ್ತರು ರಸ್ತೆಯಲ್ಲಿ ಮಲಗಿರುವ ಫೋಟೋ, ವೀಡಿಯೋ ವೈರಲ್‌ ಆಗಿದೆ.

ಕೊರೊನಾ ಬರುವುದಕ್ಕೆ ಮುಂಚೆ ವಿಶೇಷ ದಿನಗಳಲ್ಲಿ ಕ್ಷೇತ್ರದಲ್ಲಿ ವಸತಿ ಸಮಸ್ಯೆ ಎದುರಾಗುತ್ತಿತ್ತು. ಆದರೆ ಆ ಬಳಿಕ ವಸತಿ ಸಮಸ್ಯೆ ಅಷ್ಟಾಗಿ ಕಂಡುಬಂದಿಲ್ಲ. ಇತ್ತೀಚೆಗೆ ಮತ್ತೆ ವಸತಿ ಸಮಸ್ಯೆ ಎದುರಾಗಿದೆ ಎನ್ನಲಾಗಿದೆ. ಈ ಮೊದಲು ಭಕ್ತರು ರಸ್ತೆ, ಸಭಾಂಗಣದಲ್ಲಿ ಮಲಗಿದ್ದ ದೃಶ್ಯವೂ ವೈರಲ್‌ ಆಗಿತ್ತು. ವಸತಿ ಕೊಠಡಿ ಲಭ್ಯವಾಗದ ಭಕ್ತರಿಗೆ ಮಲಗಲು ದೇವಳದ ವತಿಯಿಂದ ಬದಲಿ ವ್ಯವಸ್ಥೆ ಮಾಡಲಾಗಿದ್ದರೂ ಮಾಹಿತಿ ಕೊರತೆಯಿಂದ ಭಕ್ತರು ರಸ್ತೆಯಲ್ಲಿ ಮಲಗುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

ದೇವಸ್ಥಾನದ ಹೇಳಿಕೆ
ಕುಕ್ಕೆಯ ರಥ ಬೀದಿಯಲ್ಲಿ ಭಕ್ತರು ಮಲಗಿರುವ ವಿಚಾರ ತಿಳಿಯುತ್ತಿದ್ದಂತೆ ದೇವಸ್ಥಾನದ ವತಿಯಿಂದ ಸೃಷ್ಟೀಕರಣ ನೀಡಲಾಗಿದೆ. ದೇವಸ್ಥಾನಕ್ಕೆ ಬರುವ ಭಕ್ತರಿಗೆ ದೇವಾಲಯದ ವತಿಯಿಂದ ವಸತಿಗೃಹಗಳಲ್ಲಿ ಕೊಠಡಿ ನೀಡಲಾಗುತ್ತಿದೆ. ಕೊಠಡಿಗಳು ಭರ್ತಿಯಾದ ಅನಂತರದ ಸಂದರ್ಭಗಳಲ್ಲಿ ಆದಿಸುಬ್ರಹ್ಮಣ್ಯ ದೇವಾಲಯದ ಬಳಿ ಇರುವ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಮತ್ತು ಷಣ್ಮುಖ ಪ್ರಸಾದ ಭೋಜನ ಶಾಲೆಯ ಮೇಲ್ಮಹಡಿಯಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಆದರೂ ತಡರಾತ್ರಿ ಬರುವ ಕೆಲವು ಭಕ್ತರು ರಥಬೀದಿಯಲ್ಲಿ ತಂಗಿರುವುದು ಕಂಡುಬರುತ್ತದೆ. ನಿರಂತರ ರಜೆಯಿಂದ ಹೆಚ್ಚಿನ ಭಕ್ತರು ಆಗಮಿಸಿರುತ್ತಾರೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next