ಸುಬ್ರಹ್ಮಣ್ಯ : ಶಾಲೆಗಳಿಗೆ ವಾರ್ಷಿಕ ರಜೆ ಸಹಿತ ಸರಣಿ ರಜೆ ಇದ್ದ ಹಿನ್ನೆಲೆಯಲ್ಲಿ ಭಕ್ತರು ಪುಣ್ಯ ಕ್ಷೇತ್ರ ಸಂದರ್ಶನದಲ್ಲಿ ತೊಡಗಿದ್ದು, ಕುಕ್ಕೆ ಸುಬ್ರಹ್ಮಣ್ಯ ನಗರದ ಕಡೆಗೂ ಭಕ್ತರು ಭೇಟಿ ನೀಡುತ್ತಿದ್ದು, ರವಿವಾರವೂ ಕ್ಷೇತ್ರದಲ್ಲಿ ಅಧಿಕ ಜನಸಂದಣಿ ಇತ್ತು.
ಚುನಾವಣೆ ರಜೆ, ಗುಡ್ ಫ್ರೈಡೇ ಮೊದಲಾದ ಸರಣಿ ರಜೆಗಳ ಹಿನ್ನೆಲೆಯಲ್ಲಿ ಭಕ್ತರು ಒಂದು ವಾರದಿಂದ ಕ್ಷೇತ್ರಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಭೇಟಿ ನೀಡುತ್ತಿದ್ದಾರೆ. ರವಿವಾರ ಬೆಳಗ್ಗೆಯಿಂದಲೇ ಅಧಿಕ ಮಂದಿ ಭಕ್ತರು ದೇವರ ದರ್ಶನ ಹಾಗೂ ಸೇವೆಗಳಲ್ಲಿ ತೊಡಗಿಸಿಕೊಂಡರು.
ಕ್ಷೇತ್ರ ದೇವತೆ ಕುಕ್ಕೆನಾಥನ ದರ್ಶನಕ್ಕಾಗಿ ಭಕ್ತ ಸಾಗರವೇ ಕ್ಷೇತ್ರದ ಕಡೆ ಹರಿದು ಬಂದಿತ್ತು. ಸಹಸ್ರ ಸಂಖ್ಯೆಯಲ್ಲಿ ಭಕ್ತರು ಶ್ರೀ ಕ್ಷೇತ್ರಕ್ಕೆ ಆಗಮಿಸಿ ದೇವರ ದರ್ಶನ ಪಡೆದರು. ಪ್ರಮುಖ ಸೇವಗಳಾದ ತುಲಾಭಾರ, ಆಶ್ಲೇಷಾ ಬಲಿ, ನಾಗಪ್ರತಿಷ್ಠೆ, ಶೇಷ ಸೇವೆ ಇತ್ಯಾದಿಗಳನ್ನು ಪೂರೈಸಿಕೊಂಡರು.
ಮಹಾಪೂಜೆ, ಕಾರ್ತಿಕ ಪೂಜೆ, ಮಹಾಭಿಷೇಕ ಸೇವೆಗಳನ್ನು ನರವೇರಿಸಿದರು. ಶ್ರೀ ದೇವರ ದರ್ಶನ ಪಡೆದು ಪ್ರಸಾದ ಭೋಜನ ಸ್ವೀಕರಿಸಿದರು. ದೇವಸ್ಥಾನದ ಒಳಾಂಗಣ, ಹೊರಾಂಗಣ, ರಥಬೀದಿ ಮೊದಲಾದ ಕಡೆಗಳಲ್ಲಿ ಭಕ್ತರು ಸರತಿ ಸಾಲಿನಲ್ಲಿ ನಿಂತು ಸೇವಾ ರಶೀದಿ ಇತ್ಯಾದಿಗಳನ್ನು ಪಡೆದು ಸೇವೆ ಮಾಡಿಸಿಕೊಂಡರು.
ವಾಹನಗಳೂ ಅಧಿಕ
ಭಕ್ತರ ವಾಹನಗಳ ಸಂಖ್ಯೆಯೂ ಅಪರಿಮಿತವಾಗಿತ್ತು. ಅಕ್ಷರಾ ವಸತಿಗೃಹದ ಹಿಂಭಾಗದಲ್ಲಿನ ಪಾರ್ಕಿಂಗ್ ಸ್ಥಳ ಮತ್ತು ಬಿಲದ್ವಾರದ ಬಳಿ, ಸವಾರಿ ಮಂಟಪದ ಬಳಿಯಲ್ಲಿ ಪಾರ್ಕಿಂಗ್ ಸ್ಥಳಗಳು ವಾಹನಗಳಿಂದ ತುಂಬಿ ಹೋಗಿದ್ದವು. ಟ್ರಾಫಿಕ್ ಸಮಸ್ಯೆಯೂ ಕಂಡುಬಂತು. ಸಂಜೆ ಬಳಿಕ ಭಕ್ತರ ಸಂಖ್ಯೆ ಇಳಿಮುಖಗೊಂಡಿದೆ.