ಸುಬ್ರಹ್ಮಣ್ಯ : ಕುಕ್ಕೆ ಸುಬ್ರಹ್ಮಣ್ಯ ದೇಗುಲದ ನೂತನ ಬ್ರಹ್ಮರಥ ನಿರ್ಮಾಣಕ್ಕಾಗಿ ಸುಬ್ರಹ್ಮಣ್ಯ ದೇಗುಲದ ವತಿಯಿಂದ ಬಳಸಲಾಗುವ ಹಲಸಿನ ಮರಕ್ಕೆ ಮುಹೂರ್ತಕ್ಕೆ ಶನಿವಾರ ನಡೆಯಿತು.
ದೇಗುಲ ಸಮೀಪದ ಜಾಗದಲ್ಲಿರುವ ಹಲಸಿನ ಮರವನ್ನು ಬ್ರಹ್ಮರಥಕ್ಕೆ ಬಳಸುತ್ತಿದ್ದು, ಶನಿವಾರ ಮರಕ್ಕೆ ಪೂಜೆ ಸಲ್ಲಿಸಲಾಯಿತು. ದೇಗುಲದ ಅರ್ಚಕ ಮಧುಸೂದನ ಕಲ್ಲೂರಾಯ ಅವರು ದೇವತಾ ಪ್ರಾರ್ಥನೆ ಮಾಡಿ ಮರಕ್ಕೆ ಪೂಜೆ ನಡೆಸುವ ಮೂಲಕ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು. ರಥ ನಿರ್ಮಾಣದ ಪಾಲುದಾರ ಅಜಿತ್ ರೈ, ಮುತ್ತಪ್ಪ ರೈ ಅವರ ಸಹೋದರ ಕರುಣಾಕರ ರೈ, ರಥ ನಿರ್ಮಾಣದ ಶಿಲ್ಪಿಗಳು ಹಾಗೂ ದೇಗುಲದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರವೀಂದ್ರ ಎಚ್.ಎಂ. ಹಾಗೂ ವ್ಯವಸ್ಥಾಪನ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಚಂಪಾಷಷ್ಠಿ ವೇಳೆಗೆ ಶ್ರದ್ಧಾ ಭಕ್ತಿಯಿಂದ ಎಳೆಯಲಾಗುವ ಬ್ರಹ್ಮರಥ ಶಿಥಿಲಾವಸ್ಥೆಗೆ ತಲುಪಿತ್ತು. ಈ ಹಿನ್ನಲೆಯಲ್ಲಿ ಬ್ರಹ್ಮರಥಕ್ಕೆ ಸಂಬಂದಿಸಿ ದೇಗುಲದಲ್ಲಿ ಪ್ರಶ್ನೆಚಿಂತನೆ ಇರಿಸಲಾಗಿತ್ತು. ಈ ವೇಳೆ ಈಗಿನ ಬ್ರಹ್ಮರಥ ಶಿಥಿಲಾವಸ್ಥೆಗೆ ತಲುಪಿರುವುದರಿಂದ ನೂತನ ಬ್ರಹ್ಮರಥ ಹೊಂದುವ ಕುರಿತು ಪ್ರಶ್ನೆಯಲ್ಲಿ ಕಂಡು ಬಂದಿತ್ತು. ಬಳಿಕ ನೂತನ ರಥ ನಿರ್ಮಾಣಕ್ಕೆ ಆಡಳಿತ ಮಂಡಳಿ ನಿರ್ಧರಿಸಿತ್ತು. ನೂತನ ಬ್ರಹ್ಮರಥವನ್ನು 2.0 ಕೋಟಿ ರೂ ವೆಚ್ಚದಲ್ಲಿ ದಾನ ರೂಪದಲ್ಲಿ ಬಿಡದಿ ರಿಯಾಲಿಟಿ ವೆಂಚರ್ ಫೋರ್ ಗ್ರೂಪ್ ಸಂಸ್ಥೆಯ ಪಾಲುದಾರರಾದ ಉದ್ಯಮಿ ಮುತ್ತಪ್ಪ ರೈ ಹಾಗೂ ಅಜಿತ್ ರೈ ನಿರ್ಮಿಸಿಕೊಡುತ್ತಿದ್ದಾರೆ. ಬ್ರಹ್ಮರಥ ನಿರ್ಮಾಣಕ್ಕೆ ಅವರಿಗೆ ಕುಕ್ಕೆ ದೇಗುಲದ ಆಡಳಿತ ಮಂಡಳಿ ವತಿಯಿಂದ ಮಾ. 15ರಂದು ವೀಳ್ಯ ನೀಡಲಾಗಿತ್ತು.
ಏಕ ವ್ಯಕ್ತಿಯಿಂದ ರಥ ನಿರ್ಮಾಣಕ್ಕೆ ಕೆಲವರಿಂದ ವಿರೋಧಗಳು ಬಂದಿದ್ದವು. ದೇಗುಲದ ಆದಾಯ ಮತ್ತು ಭಕ್ತರ ದೇಣಿಗೆಯಿಂದ ರಥ ನಿರ್ಮಿಸಬೇಕೆಂಬ ಅಭಿಪ್ರಾಯಗಳಿದ್ದವು. ರಥ ನಿರ್ಮಿಸುವ ವೇಳೆ ಕ್ಷೇತ್ರದ ಮರ ಬಳಸಬೇಕೆಂಬ ಹಿನ್ನೆಲೆಯಲ್ಲಿ ಇಲ್ಲಿಂದ ಮರ ಒದಗಿಸಲಾಗುತ್ತಿದೆ ಎಂದು ತಿಳಿದು ಬಂದಿದೆ. ಕುಂದಾಪುರ ತಾಲೂಕಿನ ಕೋಟೇಶ್ವರದ ರಾಷ್ಟ್ರ ಪ್ರಶಸ್ತಿ ವಿಜೇತ ಲಕ್ಷ್ಮೀನಾರಾಯಣ ಆಚಾರ್ಯ ಅವರು ಬ್ರಹ್ಮರಥ ನಿರ್ಮಾಣದ ಶಿಲ್ಪಿಗಳಾಗಿದ್ದಾರೆ. ಈಗಿನ ಬ್ರಹ್ಮರಥ 400 ವರ್ಷಗಳ ಹಿಂದಿನದ್ದೆಂದು ಹೇಳಲಾಗುತ್ತಿದೆ.