Advertisement

ಕುಕ್ಕೆ: ಹಣ, ನೀರು ಎರಡೂ ಇಲ್ಲಿ ಮಣ್ಣು ಪಾಲು!

01:12 PM Apr 15, 2018 | |

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಗ್ರಾಮಕ್ಕೆ ದಿನದ 24 ಗಂಟೆ ಕುಡಿಯುವ ನೀರು ಪೂರೈಕೆ ಮಾಡುವಷ್ಟು ಸಾಮರ್ಥ್ಯದ ಯೋಜನೆ ಕ್ಷೇತ್ರದಲ್ಲಿ ಜಾರಿಯಲ್ಲಿದೆ. ಹೀಗಿದ್ದರೂ ಸಮರ್ಪಕ ಅನುಷ್ಠಾನ ಕೊರತೆಯಿಂದ ಕೋಟಿ ಹಣ ಹಾಗೂ ನೀರು ಎರಡೂ ಇಲ್ಲಿ ಪೋಲಾಗುತ್ತಿದೆ.

Advertisement

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ನಗರದಲ್ಲಿ ಮಾಸ್ಟರ್‌ ಪ್ಲಾನ್‌ ಜಾರಿಯಲ್ಲಿದೆ. ಪ್ರಥಮ ಹಂತದ ಯೋಜನೆಯಲ್ಲಿ ಅಂದಾಜು 26 ಕೋಟಿ ರೂ. ವೆಚ್ಚದ ಸಮಗ್ರ ಒಳಚರಂಡಿ ಹಾಗೂ ಕುಡಿಯುವ ನೀರಿನ ಯೋಜನೆ ಸೇರಿದೆ. ಈ ಪೈಕಿ 12 ಕೋಟಿ ರೂ. ವೆಚ್ಚದ ಕುಡಿಯುವ ನೀರು ಯೋಜನೆ ಅನುಷ್ಠಾನಗೊಂಡು 5-6 ತಿಂಗಳಾಗಿವೆ. ಅದಿನ್ನೂ ಸಾರ್ವಜನಿಕ ಉಪಯೋಗಕ್ಕೆ ದೊರೆತಿಲ್ಲ.

ಹೀಗಿದೆ ಯೋಜನೆ
ನೀರು ಸರಬರಾಜು ಯೋಜನೆಗೆ ಸಂಬಂಧಿಸಿ ಸ್ಥಳೀಯ ದೇಗುಲದ ಜತೆ ಇಲ್ಲಿನ ಗ್ರಾ.ಪಂ. ಕೈಜೋಡಿಸಿದೆ. ಪಂಚಾಯಜ್‌ ರಾಜ್‌ ಹಾಗೂ ಗ್ರಾಮಾಭಿವೃದ್ಧಿ ಇಲಾಖೆಯಿಂದ ಬಿಡುಗಡೆಗೊಂಡ 1.5 ಕೋಟಿ ರೂ. ಅನುದಾನ ಸೇರಿ 12 ಕೋಟಿ ರೂ. ವೆಚ್ಚದ ಯೋಜನೆ ಇದರಲ್ಲಿ ಒಳಗೊಂಡಿದೆ. ಈ ಯೋಜನೆಯಲ್ಲಿ ಕುಮಾರಧಾರಾ ನದಿಯಲ್ಲಿ ಜಾಕ್‌ವೆಲ್‌ ನಿರ್ಮಿಸಿ ಅಲ್ಲಿಂದ ನೀರನ್ನು ಕುಮಾರಧಾರಾ ಮೈದಾನದ ಪಕ್ಕದಲ್ಲಿ ನಿರ್ಮಿಸಲಾದ ಶುದ್ಧೀಕರಣ ಘಟಕ್ಕಕೆ ಪಂಪಿಂಗ್‌ ಮಾಡಿ, ಕಲ್ಲಪಣೆ ಎರಡನೇ ಹಂತದ ಶುದ್ಧೀಕರಣ ಘಟಕಕ್ಕೆ ಹರಿಸಲಾಗುತ್ತದೆ. ಅಲ್ಲಿಂದ ಪಕ್ಕದಲ್ಲಿರುವ 5 ಲಕ್ಷ ಲೀ. ಸಾಮರ್ಥ್ಯದ ಟ್ಯಾಂಕ್‌ಗೆ ಪಂಪಿಂಗ್‌ ಮಾಡಿ ಅಲ್ಲಿಂದ ಪೈಪ್‌ಲೈನ್‌ ಮೂಲಕ ಅಂಗಡಿಗುಡ್ಡೆಯಲ್ಲಿ ಇರುವ 15 ಲಕ್ಷ ಲೀ. ಸಾಮರ್ಥ್ಯದ ಟ್ಯಾಂಕಿನಲ್ಲಿ ಶೇಖರಿಸಿಡುವ ಕಾರ್ಯ ಯಶಸ್ವಿಯಾಗಿ ನಡೆದಿದೆ.

ಇಷ್ಟಿದ್ದರೂ ಸುಬ್ರಹ್ಮಣ್ಯ ಗ್ರಾಮಕ್ಕೆ ಗೃಹ ಹಾಗೂ ವಾಣಿಜ್ಯ ಬಳಕೆಗೆ ಸಮರ್ಪಕವಾಗಿ ನೀರು ಪೂರೈಕೆ ಆಗುತ್ತಿಲ್ಲ. ನೀರು ಸರಬರಾಜು ಮತ್ತು ಅದರ ನಿರ್ವಹಣೆಯ ಜವಾಬ್ದಾರಿಗಳ ಕುರಿತು ಈ ಹಿಂದೆ ದೇಗುಲ ಮತ್ತು ಪಂಚಾಯತ್‌ ಹಾಗೂ ನೀರು ಸರಬರಾಜು ಮಂಡಳಿ ಜಂಟಿ ಸಂಭೆ ನಡೆಸಿತ್ತು. ಸಭೆಯಲ್ಲಿ ನೀರಿನ ಶುದ್ಧೀಕರಣ ಘಟಕ ಹಾಗೂ ನೀರಿನ ಟ್ಯಾಂಕ್‌ಗಳನ್ನು ದೇವಸ್ಥಾನದ ವತಿಯಿಂದ ನಿರ್ವಹಿಸಲು ನಿರ್ಧರಿಸಲಾಗಿತ್ತು. ಸಾರ್ವಜನಿಕರಿಗೆ ನೀರು ಸರಬರಾಜು ಮಾಡುವ ಜವಾಬ್ದಾರಿಯನ್ನು ಪಂಚಾಯತ್‌ಗೆ ವಹಿಸಿಕೊಂಡಿತ್ತು.

ಪೈಪ್‌ ಶಿಥಿಲ, ನೀರು ಸೋರಿಕೆ
ಪ್ರಸ್ತುತ ಚಾಲ್ತಿಯಲ್ಲಿರುವ ಪಂಚಾಯತ್‌ ಪೈಪ್‌ಲೈನ್‌ಗಳಿಗೆ ಹೊಸದಾಗಿ ನಿರ್ಮಾಣಗೊಂಡ ಟ್ಯಾಂಕಿನಿಂದ ಲಿಂಕ್‌ ಮಾಡಿ ನೀರಿನ ಹರಿವಿನ ಗುಣಮಟ್ಟವನ್ನು ಮೇಲ್ದರ್ಜೆಗೇರಿಸುವ ಪ್ರಯತ್ನ ನಡೆಸುವ ವೇಳೆ ದೋಷಗಳು ಕಾಣಿಸಿಕೊಂಡಿವೆ. ಪ್ರಾಯೋಗಿಕವಾಗಿ ನೀರು ಸರಬರಾಜು ಚಾಲನೆ ನೀಡಿದಾಗ ಹಲವಾರು ನ್ಯೂನತೆಗಳು ಕಂಡು ಬಂದಿವೆ. ಪ್ರಮುಖ ಪೈಪ್‌ಲೈನ್‌ ಹಾಗೂ ನೀರಿನ ಚೇಂಬರ್‌ ಗಳಲ್ಲಿ ನೀರು ಹೊರ ಹರಿಯುತ್ತಿದೆ. ಪೈಪ್‌ ಅಳವಡಿಕೆ ವೇಳೆ ಗುಣಮಟ್ಟ ಕಾಯ್ದುಕೊಳ್ಳದ ಕಾರಣ ಹಲವೆಡೆ ನೀರು ಸೋರಿಕೆಯಾಗುತ್ತಿದೆ. ಕಾರ್ಯಾರಂಭದ ಮುಂಚಿತವೇ ಪೈಪ್‌ಗ್ಳು ಶಿಥಿಲಗೊಂಡಿವೆ. ಸೋರಿಕೆಯಿಂದಾಗಿ ನೀರು ಪೂರೈಕೆ ಸಾಧ್ಯವಾಗುತ್ತಿಲ್ಲ. ಜೀವಜಲ ಹಾಗೂ ಹಣ – ಎರಡೂ ವ್ಯರ್ಥವಾಗಿವೆ.

Advertisement

ಗುತ್ತಿಗೆದಾರರು ಕೆಲಸ ಪೂರ್ಣಗೊಳಿಸಿ ಕ್ಷೇತ್ರದಿಂದ ಜಾಗ ಖಾಲಿ ಮಾಡಿದ್ದಾರೆ. ಕಾರ್ಮಿಕರು ಹಾಗೂ ಸಲಕರಣೆಗಳನ್ನೂ ಸ್ಥಳಾಂತರಿಸಿದ್ದಾರೆ. ನೀರು ಸರಬರಾಜು ಮಂಡಳಿಯವರ ಆದೇಶದಂತೆ ಶುದ್ಧೀಕರಣ ಘಟಕದ ಹಾಗೂ ಟ್ಯಾಂಕ್‌ ನಿರ್ವಹಣೆಗೆ ಡಿಪ್ಲೊಮಾ ಆರ್ಹತೆ ಹೊಂದಿರುವ ಸಿಬಂದಿಯನ್ನು ನೇಮಿಸಿದ್ದರೂ ಸೌಲಭ್ಯ ಕೊರತೆ ಇದೆ. ಹೀಗಾಗಿ ನಿರ್ವಹಣೆಯೂ ಜಟಿಲವಾಗಿದೆ.

ನೀರು ಸರಬರಾಜು ಬಗ್ಗೆ ಗ್ರಾ.ಪಂ. ಮತ್ತು ದೇವಸ್ಥಾನದ ಆಡಳಿತ ಮಂಡಳಿ ವಿಧಿಸಬೇಕಾದ ನಿಯಮಗಳು, ಷರತ್ತುಗಳ ಬಗ್ಗೆ ಸರಿಯಾದ ನಿರ್ಧಾರ ಕೈಗೊಳ್ಳುವಲ್ಲಿ ವಿಫಲವಾಗಿವೆ. ಬೇಸಗೆ ಆರಂಭದ ಈ ದಿನಗಳಲ್ಲಿ ಕುಡಿಯುವ ನೀರು ಸಮರ್ಪಕವಾಗಿ ಪೂರೈಕೆ ಆಗುವತ್ತ ಗಮನಹರಿಸಬೇಕಿದೆ.

ಲೋಪವಾಗಿಲ್ಲ
ಕಾಮಗಾರಿ ಪೂರ್ತಿಗೊಂಡಿದ್ದು, ದೇಗುಲಕ್ಕೆ ಹಸ್ತಾಂತರ ಪತ್ರ ನೀಡಿದ್ದೇವೆ. ಅದಕ್ಕೆ ಇನ್ನು ಒಪ್ಪಿಗೆ ಸಿಕ್ಕಿಲ್ಲ. ದೇಗುಲದವರು ಕೆಲ ನೆಪವೊಡ್ಡಿ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ. ಕಾಮಗಾರಿಯಲ್ಲಿ ಲೋàಪವಾಗಿಲ್ಲ. ಪ್ರಾಯೋಗಿಕ ನೀರು ಹರಿಸಿದಾಗ ಪೈಪ್‌ಗ್ಳಲ್ಲಿ ನೀರು ಸೋರಿಕೆ ಆಗುವುದು ಸಹಜ. ಒಂದು ಕಡೆಯಷ್ಟೆ ನೀರು ಸೋರಿಕೆ ಆಗಿದೆ. ದುರಸ್ತಿಗೆ ಸೂಚನೆ ನೀಡಲಾಗಿದೆ.
– ಗಣೇಶ್‌,
ಸಹಾಯಕ ಅಭಿಯಂತರ, ನೀರು ಸರಬರಾಜು ಮಂಡಳಿ

ಹಣ ಪೋಲು ಸಂಭವ 
ಒಳಚರಂಡಿ ಮತ್ತು ಜಲಮಂಡಳಿ ವತಿಯಿಂದ ಕುಕ್ಕೆಯಲ್ಲಿ ಒಟ್ಟು 26 ಕೋಟಿ ರೂ. ವೆಚ್ಚದ ಒಳಚರಂಡಿ ಮತ್ತು ಕುಡಿಯುವ ನೀರು ಸರಬರಾಜು ಯೋಜನೆ ಜಾರಿಯಲ್ಲಿದೆ. 180 ಕೋಟಿ ರೂ. ವೆಚ್ಚದ ಮಾಸ್ಟರ್‌ ಪ್ಲಾನ್‌ನಲ್ಲಿ ಇದು ಒಳಗೊಂಡಿದೆ. ಎಸ್ಟಿಮೇಟ್‌ ಪ್ರಕಾರ ಕೆಲಸ ಆದ ಕುರಿತು ಖಾತ್ರಿ ಇಲ್ಲ. ಕಾಮಗಾರಿ ವೇಳೆ ಪ್ರತಿ ಹಂತದಲ್ಲಿ ಕ್ವಾಲಿಟಿ, ಕ್ವಾಂಟಿಟಿ, ಲೆವೆಲಿಂಗ್‌ ಚೆಕ್‌ ಮಾಡಿಲ್ಲ, ಥರ್ಡ್‌ ಪಾರ್ಟಿ ಪರೀಕ್ಷೆಗೆ ಒಳಪಡಿಸಿಲ್ಲ ಎಂಬುದು ಕಂಡುಬಂದಿದೆ. ಮೇಲುಸ್ತುವಾರಿ ಸಮಿತಿ ಇದ್ದರೂ ಪರಿಣಾಮಕಾರಿ ನಿರ್ವಹಣೆ ಮಾಡಿಲ್ಲ. ಕಾಮಗಾರಿಯಲ್ಲಿ ಲೋಪ ನಡೆದಿರುವ ಶಂಕೆ ಸಾರ್ವಜನಿಕರಲ್ಲಿದ್ದು, ಉನ್ನತ ಮಟ್ಟದ ತನಿಖೆಗೆ ಒತ್ತಾಯ ವ್ಯಕ್ತವಾಗಿದೆ.

ನಿಯಮ ರೂಪಿಸಿಲ್ಲ
ಹದಿನೈದು ದಿನಗಳಿಂದ ಪಂಚಾಯತ್‌ ನೀರು ಸರಬರಾಜು ಪೈಪ್‌ಲೈನ್‌ ಗಳಿಗೆ ಹೊಸ ಟ್ಯಾಂಕಿನಿಂದ ಲಿಂಕ್‌ ಮಾಡಿ ನೀರು ಸರಬರಾಜು ಮಾಡಿ ಗುಣಮಟ್ಟವನ್ನು ಮೇಲ್ದರ್ಜೆಗೇರಿಸುವ ಪ್ರಯತ್ನ ಮಾಡುತ್ತಿದ್ದೇವೆ. ಈ ಸಂದರ್ಭ ಹಲವಾರು ತಾಂತ್ರಿಕ ದೋಷಗಳು ಕಾಣಿಸಿಕೊಂಡಿವೆ. ಇದನ್ನು ಸರಿಪಡಿಸುವಂತೆ ಇಲಾಖೆ ಗಮನಕ್ಕೆ ತಂದರೂ ಸ್ಪಂದಿಸಿಲ್ಲ. ನೀರು ಸರಬರಾಜು ನೀತಿ ನಿಯಮ ರೂಪಿಸುವ ಆವಶ್ಯಕತೆ ಇದೆ. 
– ಹರೀಶ್‌ ಇಂಜಾಡಿ,
ನಾಗರಿಕ, ಸುಬ್ರಹ್ಮಣ್ಯ

ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next