ಬೆಂಗಳೂರು: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ದೇವರ ಮೂಲ ವಿಗ್ರಹ, ಉತ್ಸವ ಮೂರ್ತಿ, ಜಾತ್ರೆ,ದೇವಳದ ಮುಂಭಾಗದ ಗೋಪುರ, ದೇವಳದ ಮಾಹಿತಿಗಳು ಹಾಗೂ ಸೇವಾ ವಿವರಗಳನ್ನು ಖಾಸಗಿ ವೆಬ್‌ಸೈಟ್‌ನಲ್ಲಿ ಅಕ್ರಮವಾಗಿ ಪ್ರಕಟಿಸಿ ವಂಚಿಸಲಾಗಿದೆ ಎಂದು ಆರೋಪಿಸಿ ದೇವಸ್ಥಾನದ ಆಡಳಿತ ಮಂಡಳಿ ನೀಡಿದ್ದ ದೂರಿಗೆ ಸಂಬಂಧಿಸಿದಂತೆ ಶ್ರೀ ಸಂಪುಟ ನರಸಿಂಹ ಸ್ವಾಮಿ ಶ್ರೀಸುಬ್ರಹ್ಮಣ್ಯ ಮಠ ಹಾಗೂ ಸಂಪುಟ ಟ್ರಸ್ಟ್‌ನ ಮುಖ್ಯಸ್ಥರು ಮತ್ತು ಪದಾಧಿಕಾರಿಗಳಿಗೆ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರಾಗಿದೆ.
ಟ್ರಸ್ಟ್‌ನ ಮುಖ್ಯಸ್ಥರು ಹಾಗೂ ಪದಾಧಿಕಾರಿಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸಿಸಿಎಚ್ -53 ನ್ಯಾಯಾಧೀಶೆ ಶೋಭಾ ಅವರು ಅರ್ಜಿದಾರರಿಗೆ 15 ದಿನಗಳ ಷರತ್ತು ಬದ್ಧ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಶನಿವಾರ ಆದೇಶಿಸಿದರು. ಟ್ರಸ್ಟ್‌ನ ಕೇಂದ್ರ ಕಚೇರಿ ಬೆಂಗಳೂರಿನಲ್ಲಿರುವ ಹಿನ್ನೆಲೆಯಲ್ಲಿ ನಗರದ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿದಾರರ ಪರ ವಕೀಲ ಅರುಣ್ ಶ್ಯಾಮ್ ವಾದ ಮಂಡಿಸಿದರು.
ಅರ್ಜಿದಾರರು 50 ಸಾವಿರ ರೂ.ಮೊತ್ತದ ವೈಯಕ್ತಿಕ ಬಾಂಡ್, ಒಬ್ಬ ವ್ಯಕ್ತಿಯ ಶ್ಯೂರಿಟಿ ಹಾಜರುಪಡಿಸಬೇಕು. ಜಾಮೀನು ಅವಧಿಯಲ್ಲಿ ತನಿಖಾಧಿಕಾರಿಗಳು ವಿಚಾರಣೆಗೆ ಕರೆದರೆ ಅರ್ಜಿದಾರರು ಹಾಜರಾಗಬೇಕು. ತನಿಖೆಗೆ ಅಡ್ಡಿಪಡಿಸಬಾರದು. ದೂರುದಾ ರರಿಗೆ ಹೆದರಿಸಬಾರದು. ತನಿಖಾಧಿಕಾರಿಗಳಿಗೆ ಸಹಕರಿಸಬೇಕು.
ಅರ್ಜಿದಾರರು ತಮ್ಮ ವಾಸಸ್ಥಳದ ವಿಳಾಸ ದಾಖಲೆ ಸಲ್ಲಿಸಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ. ರಾಜ್ಯ ಮುಜರಾಯಿ ಇಲಾಖೆಗೊಳಪಡುವ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ದೇವರ ಮೂಲ ವಿಗ್ರಹ, ಉತ್ಸವ ಮೂರ್ತಿ, ಜಾತ್ರೆ, ದೇವಳದ ಮುಂಭಾಗದ ಗೋಪುರ, ದೇವಳದ ಮಾಹಿತಿಗಳು ಹಾಗೂ ಸೇವಾ ವಿವರಗಳನ್ನು ಖಾಸಗಿ ವೆಬ್‌ಸೈಟ್‌ನಲ್ಲಿ ಅಕ್ರಮವಾಗಿ ಪ್ರಕಟಿಸಿ ಕುಕ್ಕೆ ಸುಬ್ರಹ್ಮಣ್ಯ ದೇವರ ಹೆಸರಲ್ಲಿ ಭಕ್ತಾದಿಗಳಿಗೆ ಮೋಸ ಮಾಡಲಾಗಿದೆ. ಈ ಮೂಲಕ ದೇವಸ್ಥಾನಕ್ಕೆ ಬರುವ ಆದಾಯವನ್ನು ತಡೆಯಲಾಗಿದೆ ಎಂದು ಆರೋಪಿಸಿ ದೇವಸ್ಥಾನದ ಆಡಳಿತ ಮಂಡಳಿ ದೂರು ಸಲ್ಲಿಸಿತ್ತು.
ಈ ದೂರನ್ನು ಆಧರಿಸಿ 2018ರ ನ.17ರಂದು ಎಫ್ಐಆರ್ ದಾಖಲಿಸಿ ಕೊಂಡಿದ್ದ ಸುಬ್ರಹ್ಮಣ್ಯ ಠಾಣೆ ಪೊಲೀಸರು, ಅದನ್ನು ಸುಳ್ಯ ಜೆಎಂಎಫ್ಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಈ ಮಧ್ಯೆ, ನಿರೀಕ್ಷಣಾ ಜಾಮೀನು ಕೋರಿ ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿ ಆಲಿಸಿದ ನ್ಯಾಯಾಧೀಶರು ಅರ್ಜಿದಾರರಿಗೆ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದಾರೆ.