Advertisement

ಕುಕ್ಕೆ: ಮತ್ತೆ ಮಠ –ದೇವಸ್ಥಾನ ವಿವಾದ

03:53 AM Feb 15, 2019 | |

ಸುಬ್ರಹ್ಮಣ್ಯ: ಕರ್ನಾಟಕ ಸರಕಾರ, ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಇಲಾಖೆಗೆ ಒಳಪಟ್ಟ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನವನ್ನು ಸುಬ್ರಹ್ಮಣ್ಯ ಸಂಪುಟ ಶ್ರೀ ನರಸಿಂಹ ಸ್ವಾಮಿ ಮಠಕ್ಕೆ ಹಸ್ತಾಂತರಿಸುವಂತೆ ಮಠದ ಪರ ಹೈಕೋರ್ಟ್‌ ವಕೀಲ ಉದಯ ಪ್ರಕಾಶ್‌ ಮೂಲ್ಯ ಅವರು ಸರಕಾರ ಹಾಗೂ ಧಾರ್ಮಿಕ ದತ್ತಿ ಇಲಾಖೆಗೆ ನೋಟಿಸ್‌ ನೀಡಿದ್ದಾರೆ.

Advertisement

ಮಠದ ಪರ ವಕೀಲರು ಫೆ. 11ರಂದು ನೋಟಿಸ್‌ ಜಾರಿ ಮಾಡಿದ್ದಾರೆ. ತನ್ನ ಕಕ್ಷಿದಾರರಾದ ಶ್ರೀ ಸಂಪುಟ ನರಸಿಂಹ ಮಠ ಮತ್ತು ಸುಬ್ರಹ್ಮಣ್ಯ ದೇವಸ್ಥಾನದ ನಡುವೆ ತಕರಾರು ಇದೆ. ದೇವಸ್ಥಾನದ ಟ್ರಸ್ಟಿಗಳು ದೇವಸ್ಥಾನದ ಅಡಳಿತವನ್ನು ಪ್ರತಿನಿಧಿಸುತ್ತಿದ್ದರು. 1886ರಲ್ಲಿ ಮಠದ ಕಡೆಯಿಂದ ನ್ಯಾಯಾಲಯದಲ್ಲಿ ಶೂಟ್‌ ಫೈಲ್‌ ಮಾಡಿದ್ದೆವು. ಆಗ ಮೊಕ್ತೇಸರರಾದ ಟ್ರಸ್ಟಿ ಮತ್ತು ದೇವಸ್ಥಾನ ಮಠದ ಆಡಳಿತದಲ್ಲಿತ್ತು. ಆ ಹಕ್ಕಿನ ಪ್ರಕಾರ ವಂಶಪಾರಂಪರ್ಯವಾಗಿ ಎಲ್ಲ ಹಕ್ಕುಗಳು ನಮಗೆ ಸೇರಿದ್ದಾಗಿವೆ. ಇದರ ಹಕ್ಕಿನ ಪ್ರಕಾರ ತಕ್ಷಿ ನೀಡುವ ಅಧಿಕಾರವನ್ನು ಸರಕಾರ ಮಠಕ್ಕೆ ನೀಡಿತ್ತು. ಹಿಂದಿನ ಎಲ್ಲ ಯತಿಗಳ ಅವಧಿಯಲ್ಲಿ ದೇವಸ್ಥಾನದ ಎಲ್ಲ ಧಾರ್ಮಿಕ ಆಡಳಿತಾತ್ಮಕ ವಿಚಾರಗಳಲ್ಲಿ ಸಂಪೂರ್ಣ ಅಧಿಕಾರವನ್ನು ಮಠ ಹೊಂದಿತ್ತು.

ಅನಂತರದಲ್ಲಿ ಸರಕಾರದ ಕೆಲವು ಕಾನೂನುಗಳು ಜಾರಿಗೊಂಡಾಗ ಅದರ ಅಡಿಯಲ್ಲಿ ಮಾರ್ಪಾಡುಗಳು ಬಂದ ಕಾರಣ ಮತ್ತು ದೇವಸ್ಥಾನದ ಆಡಳಿತಕ್ಕೆ ಸಂಬಂಧಿಸಿ ಕೆಲವು ಸುಳ್ಳು ಮಾಹಿತಿಗಳನ್ನು ನ್ಯಾಯಾಲಯಕ್ಕೆ ದೇವಸ್ಥಾನದ ಕಡೆಯಿಂದ ಸಲ್ಲಿಸಿದ ಕಾರಣ ದೇವಸ್ಥಾನದ ಹಿಡಿತ ಕೈ ತಪ್ಪಿತ್ತು. ದೇವಸ್ಥಾನಕ್ಕೂ ಮಠಕ್ಕೂ ಸಂಬಂಧವಿರುವ ಕುರಿತು ತಾಳೆಗರಿ, ತಾಮ್ರದ ಶಾಸನಗಳಿಂದ ತಿಳಿದು ಬರುತ್ತಿದ್ದು, ಎಲ್ಲ ದಾಖಲೆಗಳ ಆಧಾರದಲ್ಲಿ ದೇವಸ್ಥಾನದ ದೇವರ ಮೂರ್ತಿ, ಪಲ್ಲಕ್ಕಿ, ಗರುಡಕಂಬ, ಪೂಜಾವಿಧಿ ವಿಧಾನಗಳು ಮತ್ತು ದೇವಸ್ಥಾನದ ಹಣ ಆಭರಣ, ಆಸ್ತಿಪಾಸ್ತಿ ಎಲ್ಲದರ ಹಕ್ಕುಗಳು ಮಠಕ್ಕೆ ಸೇರಿದ್ದಾಗಿವೆ. ಹೀಗಾಗಿ ಈ ಒಂದು ತಿಂಗಳ ಒಳಗೆ ಮಠದ ಆಡಳಿತಕ್ಕೆ ಇವೆಲ್ಲವನ್ನು ಒಪ್ಪಿಸಬೇಕು. ಇಲ್ಲವಾದಲ್ಲಿ ಹಿಂದೂ ಧಾರ್ಮಿಕ ದತ್ತಿ ನಿಯಮಾವಳಿಯ ಪ್ರಕಾರ ಕಾನೂನಿನಂತೆ ಮುಂದಿನ ಕಾನೂನು ಕ್ರಮಗಳನ್ನು ಜರಗಿಸಲು ನ್ಯಾಯಾಲಯದ ಮೆಟ್ಟಿಲೇರಲಾಗುವುದು ಎಂದು ನೋಟಿಸಿನಲ್ಲಿ ತಿಳಿಸಿದೆ. 

ನೋಟಿಸಿಗೆ ಸಂಬಂಧಿಸಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಬಳಿ ವಿಚಾರಿಸಿದಾಗ ನೋಟಿಸ್‌ ಸರಕಾರಕ್ಕೆ ಹಾಗೂ ಆಯುಕ್ತರಿಗೆ ಸಲ್ಲಿಕೆಯಾಗಿದೆ. ಇದರ ಪ್ರತಿ ದೇವಸ್ಥಾನಕ್ಕೂ ಬಂದಿದೆ. ಈ ಕುರಿತು ಮುಂದಿನ ಎರಡು ದಿನಗಳಲ್ಲಿ ಪ್ರತಿಕ್ರಿಯಿಸುವುದಾಗಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next