ಮಂಗಳೂರು: ಕುಡುಪು ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ಸೇವೆಗೆ ಬಾಳೆಹಣ್ಣು ಪೂರೈಸುವ ಗುತ್ತಿಗೆಯನ್ನು ಹಿಂದೂಯೇತರರಿಗೆ ನೀಡಿರುವ ವಿಚಾರಕ್ಕೆ ಸಾಮಾಜಿಕ ಜಾಲತಾಣದಲ್ಲಿ ಪ್ರಬಲ ಪ್ರತಿರೋಧ ವ್ಯಕ್ತವಾಗತೊಡಗಿದೆ.
ಕದಳಿ ಬಾಳೆಹಣ್ಣನ್ನು 2021 ಜು.1ರಿಂದ 2022ರ ಜೂ. 30ರ ವರೆಗೆ ಸರಬರಾಜು ಮಾಡಲು ಅಧಿಕೃತ ಮಾರಾಟ ಗಾರ ರಿಂದ ದರಪಟ್ಟಿಯನ್ನು ಆಹ್ವಾನಿಸಿ ಕಳೆದ ವರ್ಷ ಕೊಟೇಶನ್ ಕರೆಯಲಾಗಿತ್ತು.
ಆ ಕೊಟೇಶನ್‌ನಲ್ಲಿ ಮೂವರು ಹಿಂದೂಯೇತರರ ಸಹಿತ ಓರ್ವ ಹಿಂದೂ ವ್ಯಾಪಾರಸ್ಥರು ದರಪಟ್ಟಿ ನಮೂದಿಸಿದ್ದರು. ಅದರಲ್ಲಿ ಮಂಗಳೂರು ಸೆಂಟ್ರಲ್ ಮಾರ್ಕೆಟ್‌ನ ಮುಸ್ಲಿಂ ವ್ಯಾಪಾರಸ್ಥರೊಬ್ಬರು ಪ್ರತಿ ಬಾಳೆಹಣ್ಣಿಗೆ 1.95 ರೂ. ದರ ನಮೂದಿಸಿದ್ದು ಇದು ಅತ್ಯಂತ ಕಡಿಮೆ ದರವಾದ್ದರಿಂದ ಇದನ್ನೇ ಅಂತಿಮಗೊಳಿಸಲಾಗಿತ್ತು.
ಈಗಿರುವ ಗುತ್ತಿಗೆಯ ಅವಧಿ ಜೂ.30ಕ್ಕೆ ಮುಕ್ತಾಯ ಗೊಳ್ಳುತ್ತಿದ್ದು, ಹೊಸ ಟೆಂಡರ್ ಕರೆಯಬೇಕಾಗಿದೆ. ಅಷ್ಟರಲ್ಲಿ ಗುತ್ತಿಗೆ ಹಿಂದೂಯೇತರರ ಪಾಲಾಗಿರುವುದು ಹಿಂದೂ ಸಂಘಟನೆಗಳ ಗಮನಕ್ಕೆ ಬಂದಿದೆ.
ಧಾರ್ಮಿಕ ದತ್ತಿ ಇಲಾಖಾ 2002-03ರ ತಿದ್ದುಪಡಿ ಕಾಯ್ದೆ ಪ್ರಕಾರ ಹಿಂದೂ ಧಾರ್ಮಿಕ ಕೇಂದ್ರಗಳ ಯಾವುದೇ ವಹಿವಾಟನ್ನು ಅನ್ಯಮತೀಯರಿಗೆ ನೀಡುವಂತಿಲ್ಲ.
ಹಾಗಿದ್ದೂ ಕುಡುಪು ದೇವಸ್ಥಾನಕ್ಕೆ ಬಾಳೆಹಣ್ಣು ಪೂರೈಕೆ ಗುತ್ತಿಗೆಯನ್ನು ಅನ್ಯಮತೀಯ ವ್ಯಾಪಾರಿಗಳಿಗೆ ನೀಡಲಾಗಿದೆ. ಇದನ್ನು ರದ್ದುಪಡಿಸುವಂತೆ ಹಿಂದೂ ಸಂಘಟನೆಯ ಮುಖಂಡ ಪುತ್ತೂರಿನ ದಿನೇಶ್ ಕುಮಾರ್ ಜೈನ್ ಎಂಬವರು ದೇವಸ್ಥಾನದ ಕಾ.ನಿ. ಅಧಿಕಾರಿಗೆ ಕರೆ ಮಾಡಿ ಆಗ್ರಹಿಸಿರುವ ಆಡಿಯೋ ಕ್ಲಿಪ್ ಈಗ ವೈರಲ್ ಆಗಿದೆ.